10 ದಿನದೊಳಗೆ ಲೋಕಪಾಲ್ ಆಯ್ಕೆ ಸಮಿತಿ ಸಭೆ ದಿನಾಂಕ ನಿಗದಿಪಡಿಸಿ: ಸುಪ್ರೀಂ

ಈಗಾಗಲೇ ಮೂರು ಮಂಡಳಿಗಳಿಗೆ ಹೆಸರುಗಳನ್ನು ಅಂತಿಮಗೊಳಿಸಿದೆ ಎಂದು ಆಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅವರು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ನೇತೃತ್ವದ ಪೀಠಕ್ಕೆ ತಿಳಿಸಿದರು.

Last Updated : Mar 7, 2019, 01:23 PM IST
10 ದಿನದೊಳಗೆ ಲೋಕಪಾಲ್ ಆಯ್ಕೆ ಸಮಿತಿ ಸಭೆ ದಿನಾಂಕ ನಿಗದಿಪಡಿಸಿ: ಸುಪ್ರೀಂ title=

ನವದೆಹಲಿ: ಲೋಕಪಾಲ್ ಸದಸ್ಯರ ನೇಮಕಾತಿಗಾಗಿ ಆಯ್ಕೆ ಸಮಿತಿಯ ಸಭೆಯ ದಿನಾಂಕವನ್ನು 10 ದಿನದೊಳಗೆ ನಿಗದಿಪಡಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಲೋಕಪಾಲ ಸದಸ್ಯರ ನೇಮಕಾತಿಗಾಗಿ ಆಯ್ಕೆ ಸಮಿತಿಯ ಸಭೆ ದಿನಾಂಕವನ್ನು ತಿಳಿಸುವಂತೆ ಸುಪ್ರೀಂಕೋರ್ಟ್‌ ಇಂದು ಕೇಂದ್ರ ಸರ್ಕಾರಕ್ಕೆ ಹತ್ತು ದಿನಗಳ ಕಾಲಾವಕಾಶ ನೀಡಿತಲ್ಲದೆ ಯಾವುದೇ ಹೆಸರುಗಳನ್ನು ಬಹಿರಂಗಪಡಿಸದಂತೆ ಸೂಚಿಸಿತು.

ಸುಪ್ರೀಂಕೋರ್ಟಿನ ಮಾಜಿ ನ್ಯಾಯಾಧೀಶ ರಂಜನ ಪ್ರಕಾಶ್‌ ದೇಸಾಯಿ ನೇತೃತ್ವದ ಆಯ್ಕೆ ಸಮಿತಿಯು ಈಗಾಗಲೇ ಮೂರು ಮಂಡಳಿಗಳಿಗೆ ಹೆಸರುಗಳನ್ನು ಅಂತಿಮಗೊಳಿಸಿದೆ ಎಂದು ಆಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅವರು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ನೇತೃತ್ವದ ಪೀಠಕ್ಕೆ ತಿಳಿಸಿದರು.

ಸದ್ಯದಲ್ಲಿಯೇ ಲೋಕಪಾಲ್ ನೇಮಕಕ್ಕೆ ಆಯ್ಕೆ ಸಮಿತಿಯ ಸಭೆ ನಡೆಸಲು ಸಿಬ್ಬಂದಿ ಮತ್ತು ತರಬೇತಿ ಇಲಾಖೆ(ಡಿಒಪಿಟಿ)ಗೆ ಸೂಚಿಸಿದೆ ಎಂದು ಹೇಳಿದ್ದಾರೆ.

ಮೂರು ಮಂಡಳಿಗಳ ಪೈಕಿ ಒಂದು ಲೋಕಪಾಲ ಮತ್ತು ಉಳಿದ ಎರಡರಲ್ಲಿ ಒಂದು ನ್ಯಾಯಾಂಗ ಮತ್ತು ಇನ್ನೊಂದು ನ್ಯಾಯಾಂಗೇತರ ಲೋಕಪಾಲ ಸದಸ್ಯರ ಪಟ್ಟಿಯನ್ನು ಪ್ರಧಾನಿ ನೇತೃತ್ವದ ಆಯ್ಕೆ ಸಮಿತಿಗೆ ಕೊಡಲಾಗಿದೆ ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
 

Trending News