ನವದೆಹಲಿ: ಸ್ಟೀವ್ ಸ್ಮಿತ್ ಬಾಲ್ ಟ್ಯಾಂಪರಿಂಗ್ ಹಗರಣದಿಂದಾಗಿ 18 ತಿಂಗಳುಗಳ ಕಾಲ ಕ್ರಿಕೆಟ್ ನಿಂದ ದೂರ ಉಳಿದಿದ್ದಾಗ ಬಹುತೇಕ ಜನರು ಅವರ ವೃತ್ತಿ ಜೀವನ ಇನ್ನೇನೋ ಮುಗಿದೇ ಹೋಯಿತು ಎಂದು ಹಲವರು ಭಾವಿಸಿದ್ದರು.
ಆದರೆ ಇದಲ್ಲವನ್ನು ಅವರು ಹಿಮ್ಮೆಟ್ಟಿ ಈಗ ಇಂಗ್ಲೆಂಡ್ ವಿರುದ್ಧದ ಆಸಿಸ್ ಟೆಸ್ಟ್ ಸರಣಿಯಲ್ಲಿ ಅದ್ಬುತ ಪ್ರದರ್ಶನ ನೀಡುವ ಮೂಲಕ ತಾವು ಟೆಸ್ಟ್ ಕ್ರಿಕೆಟ್ ನಲ್ಲಿ ಶ್ರೇಷ್ಠ ಕ್ರಿಕೆಟಿಗ ಎನ್ನುವುದನ್ನು ಅವರು ಮತ್ತೊಮ್ಮೆ ಸಾಬೀತುಪಡಿಸಿದರು. ಆಸೀಸ್ ಸರಣಿಯಲ್ಲಿ ಸ್ಟೀವ್ ಸ್ಮಿತ್ 134.2 ಸರಾಸರಿಯಲ್ಲಿ ಇದುವರೆಗೆ 671 ರನ್ ಗಳಿಸಿದ್ದಾರೆ.
ಆದರೆ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಸ್ಟೀವ್ ಹಾರ್ಮಿಸನ್ ಸ್ಮಿತ್ ವಿರುದ್ಧ ಕಿಡಿಕಾರುತ್ತಾ ಅವರು ಏನೇ ಮಾಡಿದ್ದರೂ ಕೂಡ ದಕ್ಷಿಣ ಆಫ್ರಿಕಾದಲ್ಲಿ ಅವರು ಮಾಡಿದ ಕಾರ್ಯಕ್ಕೆ ನೆನಪಿನಲ್ಲಿರುತ್ತಾರೆ ಎಂದು ಹೇಳಿದ್ದಾರೆ. ಟಾಕ್ ಸ್ಪೋರ್ಟ್ ಗೆ ಮಾತನಾಡುತ್ತಾ ಪ್ರತಿಕ್ರಿಯಿಸಿರುವ ಅವರು ' ನನಗೆ ಅವರನ್ನು ಕ್ಷಮಿಸಬಾರದು ಅನಿಸುತ್ತೆ . ಅವರೊಬ್ಬ ಮೋಸಗಾರ ಅಂತಾ ಗುರುತಿಸಿಕೊಂಡಿರುವಾಗ ಅದಕ್ಕೆ ಮತ್ತೆ ನಾನು ಯಾವುದೇ ತೇಪೆ ಹಚ್ಚಲು ಹೋಗುವುದಿಲ್ಲ. ಅದು ಅವರ ಪರಿಚಯ ಪತ್ರದಲ್ಲಿದೆ. ಅದು ಸಾಯುವವರೆಗೆ ಕೂಡ ಹಿಂಬಾಲಿಸುತ್ತದೆ' ಎಂದರು.
ಸ್ಟೀವ್ ಸ್ಮಿತ್ ಏನೇ ಮಾಡಲಿ ಆದರೆ ಅವರು ದಕ್ಷಿಣ ಆಫ್ರಿಕಾದಲ್ಲಿ ಏನು ಮಾಡಿದ್ದರೋ ಅದಕ್ಕಾಗಿ ಅವರು ನೆನಪಿನಲಿರುತ್ತಾರೆ ಎಂದು ಸ್ಟೀವ್ ಹಾರ್ಮಿಸನ್ ಹೇಳಿದರು.