ಬಾಹ್ಯಾಕಾಶ ವಯಾಗ್ರ: ಭೂಮಿಯ ಸೀಮೆಯಾಚೆ ಪ್ರಣಯ

Written by - Girish Linganna | Last Updated : Jan 20, 2024, 10:22 PM IST
  • ಪ್ರಸ್ತುತ ನಾಸಾ ಚಂದ್ರ ಮತ್ತು ಮಂಗಳ ಗ್ರಹಕ್ಕೆ ದೀರ್ಘಾವಧಿಯ ಯೋಜನೆಗಳನ್ನು ರೂಪಿಸುತ್ತಿದೆ
  • ಈ ಯೋಜನೆಗಳಲ್ಲಿ ಪುರುಷರು ಮತ್ತು ಮಹಿಳಾ ಗಗನಯಾತ್ರಿಗಳು ಇಬ್ಬರೂ ಭಾಗಿಯಾಗಲಿದ್ದಾರೆ
  • ಆದರೆ ಬಾಹ್ಯಾಕಾಶದ ಸನ್ನಿವೇಶದಲ್ಲಿ ಲೈಂಗಿಕ ಚಟುವಟಿಕೆಗಳು ಹೇಗೆ ನಡೆಯಲಿವೆ ಎಂಬ ಕುರಿತು ಯಾವುದೇ ಮಾಹಿತಿ, ಜ್ಞಾನ ನಮ್ಮ ಮುಂದಿಲ್ಲ
ಬಾಹ್ಯಾಕಾಶ ವಯಾಗ್ರ: ಭೂಮಿಯ ಸೀಮೆಯಾಚೆ ಪ್ರಣಯ title=

ಡಿಸ್ಕವರಿ ಬಾಹ್ಯಾಕಾಶ ನೌಕೆಯ ಮೂಲಕ ತನ್ನ ಮೊದಲ ಗಗನಯಾತ್ರೆಗಾಗಿ ಬಾಹ್ಯಾಕಾಶಕ್ಕೆ ತೆರಳಿದ ಮರುದಿನ ಬೆಳಗ್ಗೆ ನಿದ್ದೆಯಿಂದ ಎಚ್ಚರವಾದಾಗ, ಗಗನಯಾತ್ರಿ ಮೈಕ್ ಮುಲೇನ್ ತೀವ್ರ ರೀತಿಯಲ್ಲಿ ನಿಮಿರುವಿಕೆಯನ್ನು ಗಮನಿಸಿದ್ದರು.

ಈ ಹಿಂದೆ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ಗಂಡಸರಲ್ಲಿ ನಿಮಿರುವಿಕೆ, ಲೈಂಗಿಕ ಬಯಕೆಗಳು ಮೂಡಲು ಸಾಧ್ಯವೇ ಎಂದು ಆಲೋಚಿಸುತ್ತಿದ್ದರು. ರಕ್ತ ಮತ್ತು ಇದರ ದೈಹಿಕ ದ್ರವಗಳು ಬಾಹ್ಯಾಕಾಶದ ಗುರುತ್ವಾಕರ್ಷಣಾ ರಹಿತ ಪರಿಸ್ಥಿತಿಯಲ್ಲಿ ಭಿನ್ನವಾಗಿ ವರ್ತಿಸುತ್ತವೆ. ಅದರೊಡನೆ, ಲೈಂಗಿಕ ಆಸಕ್ತಿ ಮೂಡಿಸುವ ಹಾರ್ಮೋನ್‌ಗಳು ಬಹಳಷ್ಟು ಕಡಿಮೆಯಾಗುತ್ತವೆ.

ಒಂದಷ್ಟು ಪುರುಷ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ತಾವು ಗಮನಿಸಿದ ದೈಹಿಕ ಬದಲಾವಣೆಗಳ ಕುರಿತು ಮಾತನಾಡಿದ್ದಾರೆ. ಬಾಹ್ಯಾಕಾಶದಲ್ಲಿ ಲೈಂಗಿಕ ಆಸಕ್ತಿ ಮೂಡುವುದು ಮಾತ್ರವಲ್ಲದೆ, ಕೆಲವು ಸಂದರ್ಭಗಳಲ್ಲಿ ಅದು ಅತ್ಯಂತ ತೀವ್ರವಾಗಿರುತ್ತದೆ ಎಂದಿದ್ದಾರೆ. ಇದರಿಂದಲೇ ಈ ಪ್ರಕ್ರಿಯೆಗೆ 'ಸ್ಪೇಸ್ ವಯಾಗ್ರಾ' ಎಂಬ ತಮಾಷೆಯ ಹೆಸರೂ ನೀಡಲಾಗಿದೆ.

ತನ್ನ 'ರೈಡಿಂಗ್ ರಾಕೆಟ್ಸ್' ಎಂಬ ಹೆಸರಿನ ಪುಸ್ತಕದಲ್ಲಿ, ಮುಲ್ಲೇನ್ ಅವರು ತಾನು ಬಾಹ್ಯಾಕಾಶದಲ್ಲಿ ಅನುಭವಿಸಿದ ನಿಮಿರುವಿಕೆ ಅತ್ಯಂತ ತೀವ್ರ ಮತ್ತು ಅನನುಕೂಲಕರವಾಗಿತ್ತು ಎಂದು ವಿವರಿಸಿದ್ದಾರೆ. ಆ ಸನ್ನಿವೇಶದಲ್ಲಿ ತಾನು ಎಂತಹ ಗಟ್ಟಿಯಾದ ವಸ್ತುವನ್ನೂ ತೂರಿಬಿಡಬಲ್ಲೆ ಎಂದು ತೋರಿತ್ತು ಎಂದಿದ್ದಾರೆ.

ಕಳೆದ 60 ವರ್ಷಗಳ ಸುದೀರ್ಘ ಅವಧಿಯಲ್ಲಿ, ನಾಸಾ ತಾನು ತನ್ನ ಬಾಹ್ಯಾಕಾಶ ಯೋಜನೆಗಳಿಗೆ ಸಂಬಂಧಿಸಿದಂತೆ ಲೈಂಗಿಕ ವಿಚಾರಗಳ ಕುರಿತು ಮಾತುಕತೆ ನಡೆಸುವುದಿಲ್ಲ ಎಂಬ ನೀತಿಯನ್ನು ಪಾಲಿಸುತ್ತಾ ಬಂದಿದೆ.

ಜನರು ಯಾವ ರೀತಿಯಲ್ಲಿ ಊಹಿಸಿಕೊಂಡಿದ್ದರೂ, ತಮಗೆ ತಿಳಿದಿರುವ ಮಟ್ಟಿಗೆ ಬಾಹ್ಯಾಕಾಶದಲ್ಲಿ ಇಲ್ಲಿಯತನಕ ಯಾರೂ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿಲ್ಲ ಎಂದು ನಾಸಾ ಪ್ರತಿಪಾದಿಸಿದೆ. ನಾಸಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರದ ವಕ್ತಾರರಾದ ಸಾಂಡ್ರಾ ಜೋನ್ಸ್ ಅವರು ಬಾಹ್ಯಾಕಾಶದಲ್ಲಿ ಲೈಂಗಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನಾಸಾ ಯಾವುದೇ ಅಧಿಕೃತ ನೀತಿಯನ್ನು ಹೊಂದಿಲ್ಲ ಎಂದಿದ್ದಾರೆ.

ಮಾಧ್ಯಮಗಳೊಡನೆ ಮಾತನಾಡುವ ಸಂದರ್ಭದಲ್ಲಿ, ಸಾಂಡ್ರಾ ಜೋನ್ಸ್ ಅವರು ನಾಸಾ ತನ್ನ ಗಗನಯಾತ್ರಿಗಳ ವೃತ್ತಿಪರತೆ ಮತ್ತು ಏನು ಸರಿ ಏನು ತಪ್ಪು ಎಂಬ ನಡೆಯ ಕುರಿತು ನಂಬಿಕೆ ಇರಿಸಿದೆ ಎಂದಿದ್ದಾರೆ.

ಆದರೆ, ಪ್ರಸ್ತುತ ನಾಸಾ ಚಂದ್ರ ಮತ್ತು ಮಂಗಳ ಗ್ರಹಕ್ಕೆ ದೀರ್ಘಾವಧಿಯ ಯೋಜನೆಗಳನ್ನು ರೂಪಿಸುತ್ತಿದೆ. ಈ ಯೋಜನೆಗಳಲ್ಲಿ ಪುರುಷರು ಮತ್ತು ಮಹಿಳಾ ಗಗನಯಾತ್ರಿಗಳು ಇಬ್ಬರೂ ಭಾಗಿಯಾಗಲಿದ್ದಾರೆ. ಆದರೆ ಬಾಹ್ಯಾಕಾಶದ ಸನ್ನಿವೇಶದಲ್ಲಿ ಲೈಂಗಿಕ ಚಟುವಟಿಕೆಗಳು ಹೇಗೆ ನಡೆಯಲಿವೆ ಎಂಬ ಕುರಿತು ಯಾವುದೇ ಮಾಹಿತಿ, ಜ್ಞಾನ ನಮ್ಮ ಮುಂದಿಲ್ಲ.

ಇದೇ ಸಮಯದಲ್ಲಿ, ಬ್ಲೂ ಒರಿಜಿನ್ ಮತ್ತು ವರ್ಜಿನ್ ಗ್ಯಾಲಾಕ್ಟಿಕ್‌ನಂತಹ ಕಂಪನಿಗಳು ಸಾರ್ವಜನಿಕರಿಗೆ ಬಾಹ್ಯಾಕಾಶ ಪ್ರಯಾಣದ ಅನುಭವ ಪಡೆದುಕೊಳ್ಳಲು ಆಹ್ವಾನಿಸಿವೆ. ಅವುಗಳು ಸಾರ್ವಜನಿಕರನ್ನು ಭೂಮಿಯ ವಾತಾವರಣ ಮತ್ತು ಬಾಹ್ಯಾಕಾಶ ಸಂಧಿಸುವ ಸ್ಥಳವಾದ, ಕರ್ಮಾನ್ ಲೈನ್‌ಗೆ ಕರೆದೊಯ್ಯುವುದಾಗಿ ಹೇಳಿವೆ.

ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸಂಸ್ಥೆ ಮಂಗಳ ಗ್ರಹದಲ್ಲಿ ತನ್ನ ಬೃಹತ್ ಸ್ಟಾರ್ ಶಿಪ್ ಬಾಹ್ಯಾಕಾಶ ನೌಕೆಯನ್ನು ಬಳಸಿ ಮಾನವರಿಗೆ ನೆಲೆ ನಿರ್ಮಿಸುವ ಯೋಚನೆ ಹೊಂದಿದೆ. ಅದರೊಡನೆ, ವಾಣಿಜ್ಯಿಕ ಕಂಪನಿಗಳೂ ಬಾಹ್ಯಾಕಾಶದಲ್ಲಿ ಹೊಟೆಲ್‌ಗಳನ್ನು ನಿರ್ಮಿಸುವ ಸಿದ್ಧತೆ ನಡೆಸುತ್ತಿವೆ.

ಬಹಳಷ್ಟು ಸಮಯದಿಂದ, ಮಾನವ ಜನಾಂಗದ ದೀರ್ಘಕಾಲೀನ ಬಾಳುವಿಕೆಯ ಕುರಿತು ಕಾಳಜಿ ವ್ಯಕ್ತಪಡಿಸುತ್ತಿದ್ದ ತಜ್ಞರು, ನಾಸಾಗೆ ಬಾಹ್ಯಾಕಾಶದಲ್ಲಿ ಮಾನವರ ಲೈಂಗಿಕ ವರ್ತನೆಗಳ ಕುರಿತು ಅಧ್ಯಯನ ನಡೆಸುವಂತೆ ಆಗ್ರಹಿಸುತ್ತಾ ಬಂದಿದ್ದಾರೆ. ಆದರೆ, ಹಿಂದೆಂದಿಗಿಂತಲೂ ಇಂತಹ ಸಂಶೋಧನೆ ಇಂದು ಹೆಚ್ಚು ಪ್ರಸ್ತುತವೆನಿಸುತ್ತಿದೆ.

ಇಂದಿನ ತನಕ ಬಾಹ್ಯಾಕಾಶದಲ್ಲಿ ಯಾವುದೇ ರೀತಿಯ ಲೈಂಗಿಕ ಚಟುವಟಿಕೆಗಳು ನಡೆದಿರುವ ಕುರಿತು ಅಧಿಕೃತವಾಗಿ ಮಾಹಿತಿಗಳು ಲಭಿಸಿಲ್ಲವಾದರೂ, ಬಾಹ್ಯಾಕಾಶದಲ್ಲಿ ಲೈಂಗಿಕ ಚಟುವಟಿಕೆ ಸಾಧ್ಯ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಗುರುತ್ವಾಕರ್ಷಣೆಯ ಕೊರತೆ ಒಂದಷ್ಟು ತೊಂದರೆಗಳನ್ನು ಉಂಟುಮಾಡಬಹುದಾದರೂ, ಬುದ್ಧಿವಂತ ವ್ಯಕ್ತಿಗಳ ಸಂಪನ್ಮೂಲ ಹೊಂದಿರುವ ಕಾರಣದಿಂದ, ಇಂತಹ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಾಗಲಿದೆ. ಗಮನಿಸಬೇಕಾದ ಅಂಶವೆಂದರೆ, ರಾಕೆಟ್ ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯಾಚರಿಸುವ ವಿಜ್ಞಾನಿಯೊಬ್ಬರು ಆ್ಯಸ್ಟ್ರೋಗ್ಲೈಡ್ ಎಂಬ ಹೆಸರಿನ ಲ್ಯೂಬ್ರಿಕೆಂಟ್ ನಿರ್ಮಾಣದ ಹಿಂದಿದ್ದರು.

ಆ್ಯಸ್ಟ್ರೋಗ್ಲೈಡ್ ಎನ್ನುವುದು ವೈಯಕ್ತಿಕ ಬಳಕೆಯ ಲ್ಯೂಬ್ರಿಕೆಂಟ್ ಬ್ರ್ಯಾಂಡ್ ಆಗಿದ್ದು, ಲೈಂಗಿಕ ಚಟುವಟಿಕೆಯ ವೇಳೆ ಘರ್ಷಣೆ ಕಡಿಮೆಗೊಳಿಸಿ, ಹೆಚ್ಚು ಸುಗಮವಾಗಿಸುತ್ತದೆ. ಇದೊಂದು ನಯವಾದ, ಜಾರುವಂತಹ ರಚನೆಯನ್ನು ಹೊಂದಿದ್ದು, ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಜೋಡಿಗಳಿಗೆ ಹೆಚ್ಚು ಸುಲಭವಾಗುವಂತೆ, ಹೆಚ್ಚು ಸುಖದಾಯಕವಾಗುವಂತೆ ಮಾಡುತ್ತದೆ.

ನ್ಯೂಟನ್ನನ ಮೂರನೇ ನಿಯಮ ಪ್ರತಿಯೊಂದು ಕ್ರಿಯೆಗೂ ಸಮನಾದ, ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇದ್ದೇ ಇರುತ್ತದೆ ಎಂದಿದೆ. ಭೂಮಿಯ ಮೇಲೆ, ಗುರುತ್ವಾಕರ್ಷಣೆ ಮತ್ತು ನಮ್ಮ ದೇಹದ ಭಾರ ಮಿಷನರಿ ಅಥವಾ ಕೌಗರ್ಲ್ ಮಾದರಿಯ ವಿವಿಧ ಲೈಂಗಿಕ ಭಂಗಿಗಳಿಗೆ ನೆರವು ನೀಡುತ್ತವೆ.

ಮಿಷನರಿ ಭಂಗಿ ಎನ್ನುವುದು ಒಂದು ಸಾಮಾನ್ಯ ಲೈಂಗಿಕ ಭಂಗಿಯಾಗಿದ್ದು, ಸಂಗಾತಿ ಬೆನ್ನು ಹಾಸಿಗೆಯ ಮೇಲಿಟ್ಟು ಮಲಗಿರುವಾಗ, ಇನ್ನೊಬ್ಬ ಸಂಗಾತಿ ಅವರಿಗೆ ಮುಖ ಮಾಡಿ ಮಲಗಿರುತ್ತಾರೆ. ಆದರೆ ಶೂನ್ಯ ಗುರುತ್ವಾಕರ್ಷಣೆಯಲ್ಲಿ, ಒಬ್ಬರನ್ನೊಬ್ಬರು ತಳ್ಳುವ ಭಂಗಿಯಲ್ಲಿರುವ ಜೋಡಿ ತೇಲಿ ಹೋಗುವ ಸಾಧ್ಯತೆಗಳಿವೆ. ಆದ್ದರಿಂದ, ಬಾಹ್ಯಾಕಾಶದಂತಹ ಸನ್ನಿವೇಶದಲ್ಲಿ ಲೈಂಗಿಕ ಕ್ರಿಯೆ ನಡೆಸುವ ಸಂದರ್ಭದಲ್ಲಿ, ಜೋಡಿಗಳು ಪರಸ್ಪರ ದೂರಾಗದಂತೆ ತಡೆಯುವ ಕ್ರಮಗಳ ಅವಶ್ಯಕತೆ ಇರುತ್ತದೆ.

ಈ ಸಮಸ್ಯೆಗೆ ಇರುವ ಸರಳ ಉತ್ತರ ಎಂದರೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ವಿನ್ಯಾಸದಲ್ಲಿರುವ ಪ್ರಮಾಣಿತ ವೈಶಿಷ್ಟ್ಯವಾಗಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಗೋಡೆಗಳಿಗೆ ವೆಲ್ಕ್ರೋ (ಬಟ್ಟೆಗಳಿಗೆ ಹಾಕುವ ರೀತಿಯ‌ ಬಂಧ) ಅಳವಡಿಸಲಾಗಿದೆ. ಆದ್ದರಿಂದ, ಬಾಹ್ಯಾಕಾಶದಲ್ಲಿ ಲೈಂಗಿಕ ಕ್ರಿಯೆ ನಡೆಸಲು ಇರುವ ಒಂದು ಮಾರ್ಗವೆಂದರೆ, ಆಸಕ್ತಿ ಹೊಂದಿರುವ ಸಂಗಾತಿಯನ್ನು ಈ ವೆಲ್ಕ್ರೋ ಮೇಲ್ಮೈಗೆ ಅಳವಡಿಸುವುದು. ಆದರೆ, ಬಾಹ್ಯಾಕಾಶ ತಜ್ಞರು ಈ ಕುರಿತು ಇತರ ಉಪಾಯಗಳನ್ನೂ ಆಲೋಚಿಸಿದ್ದಾರೆ.

ಗಗನಯಾತ್ರಿಗಳು ಸಿಪಿಆರ್ ಪ್ರಕ್ರಿಯೆಗಾಗಿ ಕಲಿಯುವ ವಿಧಾನಗಳು ಮತ್ತು ಉಪಕರಣಗಳು ಇತರ ಕಾರ್ಯಗಳಿಗೂ ಉಪಯೋಗವಾಗಬಲ್ಲವು. ಟಿಕ್‌ಟಾಕ್ ವೀಡಿಯೋ ಒಂದರಲ್ಲಿ, ಇಟಾಲಿಯನ್ ಗಗನಯಾತ್ರಿ ಸಮಂತಾ ಕ್ರಿಸ್ರೋಫೊರೆಟ್ಟಿ ಅವರು ಗಗನಯಾತ್ರಿಗಳು ಹೇಗೆ ತುರ್ತು ಪರಿಸ್ಥಿತಿಯಲ್ಲಿ ಉಸಿರು ಊದಿ, ಎದೆಯನ್ನು ಒತ್ತುತ್ತಾರೆ ಎಂಬುದನ್ನು ವಿವರಿಸಿದ್ದಾರೆ.

ಸಿಪಿಆರ್ ಎನ್ನುವುದು ಕಾರ್ಡಿಯೋಪಲ್ಮೊನರಿ ರಿಸಸಿಟೇಷನ್ ಎಂಬುದರ ಹೃಸ್ವರೂಪವಾಗಿದೆ. ಇದು ತುರ್ತು ಪರಿಸ್ಥಿತಿಯಲ್ಲಿ ಯಾರದಾದರೂ ಉಸಿರು ಅಥವಾ ಹೃದಯದ ಬಡಿತ ನಿಂತುಹೋದರೆ ಅವರ ಜೀವ ರಕ್ಷಿಸುವ ತಂತ್ರವಾಗಿದೆ. ಇದು ವ್ಯಕ್ತಿಯ ಜೀವ ಉಳಿಸಲು ಎದೆಯನ್ನು ಒತ್ತುವ, ಕೆಲ ಸಂದರ್ಭದಲ್ಲಿ ಬಾಯಿಂದ ಉಸಿರೂದುವ ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ.

ಕ್ರಿಸ್ತೋಫೊರೆಟ್ಟಿ ತನ್ನ ನಿರೂಪಣಾ ವೀಡಿಯೋದಲ್ಲಿ ತಲೆಕೆಳಗಾಗಿ ಉಳಿದು, ರೋಗಿಯ ಎದೆಯನ್ನು ಒತ್ತುವ ಸಲುವಾಗಿ, ಕಾಲಿನಿಂದ ಮೇಲ್ಛಾವಣಿಯನ್ನು ತುಳಿದಿದ್ದಾರೆ. ಅವರು ಯಾವತ್ತೂ ಲಭ್ಯವಿರುವ 'ಸಿಪಿಆರ್ ಬೆಂಚ್' ಮೂಲಕ ಸಿಪಿಆರ್ ನಡೆಸುವ ಇನ್ನೊಂದು ವಿಧಾನವನ್ನೂ ಪ್ರದರ್ಶಿಸಿದ್ದಾರೆ. ಈ ಬೆಂಚ್ ಸಿಪಿಆರ್ ನಡೆಸುವವರನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳಲು ಪಟ್ಟಿಗಳನ್ನು ಹೊಂದಿರುತ್ತದೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಜರ್ಮನ್ ಗಗನಯಾತ್ರಿ ಉಲ್ರಿಚ್ ವಾಲ್ಟರ್ ಮಾನವರು ಪ್ರಾಣಿ ಜಗತ್ತಿನಿಂದಲೂ ಸ್ಫೂರ್ತಿ ಪಡೆದುಕೊಳ್ಳಬಹುದು ಎಂದಿದ್ದಾರೆ. ಉದಾಹರಣೆಗೆ, ಒಂದು ಡಾಲ್ಫಿನ್ ಸಮುದ್ರದಲ್ಲಿ ಲೈಂಗಿಕ ಕ್ರಿಯೆ ನಡೆಸುವಾಗ ಎರಡು ಡಾಲ್ಫಿನ್‌ಗಳನ್ನು ಹಿಡಿದಿಟ್ಟುಕೊಳ್ಳುತ್ತದೆ. ಅದೇ ರೀತಿ, ಡಾಲ್ಫಿನ್‌ಗಳು ಫ್ಲಿಪರ್ ಬಳಸುವ ರೀತಿಯಲ್ಲಿ, ಮಾನವರು ತಮ್ಮ ಕೈ, ಕಾಲುಗಳನ್ನು ಬಳಸಿ ಸಂಗಾತಿಯನ್ನು ಹಿಡಿದಿಟ್ಟುಕೊಳ್ಳಬಹುದು.

'ಫ್ಲಿಪರ್' ಎನ್ನುವುದು ಡಾಲ್ಫಿನ್ ಅಥವಾ ತಿಮಿಂಗಿಲಗಳಂತಹ ಸಮುದ್ರ ಜೀವಿಗಳು ಈಜಲು ನೆರವಾಗಲು ಹೊಂದಿರುವ ಚಪ್ಪಟೆಯಾದ, ವಿಶಾಲವಾದ ಕೈಯಂತಹ ರಚನೆಯಾಗಿದೆ. ಈ ಮೇಲಿನ ವಿವರಣೆಯಲ್ಲಿ, ಡಾಲ್ಫಿನ್‌ಗಳು ಲೈಂಗಿಕ ಚಟುವಟಿಕೆಗಳಿಗೆ ನೆರವಾಗಲು ಫ್ಲಿಪರ್ ಬಳಸುವಂತೆ, ಮಾನವರು ತಮ್ಮ ಕೈಗಳು, ಕಾಲುಗಳನ್ನು ಬಳಸಬಹುದು.

ವೈಜ್ಞಾನಿಕ ಕಾದಂಬರಿ ಬರಹಗಾರ್ತಿ, ನಟಿಯಾಗಿದ್ದ ವಾನ್ನಾ ಬೊಂತಾ ಬಾಹ್ಯಾಕಾಶದಲ್ಲಿ ಲೈಂಗಿಕ ಚಟುವಟಿಕೆಗೆ ನೆರವಾಗುವ 2 ಸೂಟ್ ಎಂಬ ವಿಶೇಷ ವಸ್ತ್ರವನ್ನು ಸಿದ್ಧಪಡಿಸಿದ್ದರು. ಆಕೆ 2004ರಲ್ಲಿ ನ್ಯಾಷನಲ್ ಸ್ಪೇಸ್ ಸೊಸೈಟಿಯೊಡನೆ ಶೂನ್ಯ ಗುರುತ್ವಾಕರ್ಷಣಾ ಹಾರಾಟ ನಡೆಸಿದ ಬಳಿಕ, ಈ ಆಲೋಚನೆ ರೂಪಿಸಿದರು. 2 ಸೂಟ್ ಎನ್ನುವುದು ಒಂದು ಮಾದರಿಯ ಬಾಹ್ಯಾಕಾಶ ಸೂಟ್ ಆಗಿದ್ದು, ಮುಂಭಾಗದಿಂದ ತೆರೆಯಬಲ್ಲ, ಅದೇ ರೀತಿಯ ಇನ್ನೊಂದು ಸೂಟ್‌ಗೆ ವೆಲ್ಕ್ರೋ ಮೂಲಕ ಅಳವಡಿಸಬಲ್ಲ ಮುಂಭಾಗದ ಪ್ಯಾನೆಲ್ ಅನ್ನು ಹೊಂದಿದೆ. ಈ ಸೂಟ್‌ನಲ್ಲಿ ಮೊದಲೇ ಪಟ್ಟಿಗಳನ್ನು ಅಳವಡಿಸಲಾಗಿದ್ದು, ಧರಿಸಿರುವ ವ್ಯಕ್ತಿಗಳನ್ನು‌ ಸುರಕ್ಷಿತ ಮೇಲ್ಮೈಗಳಿಗೆ ಜೋಡಿಸಲು ನೆರವಾಗುತ್ತದೆ. 2008ರಲ್ಲಿ, ಬೊಂತಾ ಅವರು ಹಿಸ್ಟರಿ ಚಾನೆಲ್ ನಿರ್ಮಿಸಿದ ಡಾಕ್ಯುಮೆಂಟರಿ ಒಂದಕ್ಕಾಗಿ ಈ 2 ಸೂಟ್ ಧರಿಸಿದ್ದರು.

ಇಂಡಿಯಾನಾ ವಿಶ್ವವಿದ್ಯಾಲಯದ ಕಿನ್ಸೀ ಇನ್ಸ್ಟಿಟ್ಯೂಟ್‌ನ ಮನಶಾಸ್ತ್ರಜ್ಞರು ಮತ್ತು ಸಂಶೋಧಕರಾಗಿರುವ ಸೈಮನ್ ಡೂಬ್ ಅವರು ಎಸ್ಎಕ್ಸ್ಎಸ್‌ಡಬ್ಲ್ಯು ಸಂವಾದವೊಂದರಲ್ಲಿ ಬಾಹ್ಯಾಕಾಶದಲ್ಲಿ ಲೈಂಗಿಕ ಕ್ರಿಯೆ ನಡೆಸಲು ಹಲವು ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಬಳಸುವ ಮಲಗುವ ಚೀಲಗಳನ್ನು ಪರಿಗಣಿಸುವಂತೆಯೂ ಸಲಹೆ ನೀಡಿದ್ದಾರೆ. ಈ ಚೀಲಗಳು ಸಾಕಷ್ಟು ಸಣ್ಣವಾಗಿದ್ದರೂ, ಇಬ್ಬರು ವ್ಯಕ್ತಿಗಳು ಒಬ್ಬರಿಗೊಬ್ಬರು ಜೊತೆಯಾಗಿ, ಅಲ್ಲೇ ಇರಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದ್ದಾರೆ.

ಎಸ್ಎಕ್ಸ್ಎಸ್‌ಡಬ್ಲ್ಯು ಎಂದರೆ ಸೌತ್ ಬೈ ಸೌತ್ ವೆಸ್ಟ್ ಎಂಬ ಚಲನಚಿತ್ರ, ಸಂವಾದ ಮಾಧ್ಯಮ, ಮತ್ತು ಸಂಗೀತ ಉತ್ಸವವಾಗಿದ್ದು, ಅಮೆರಿಕಾದ ಟೆಕ್ಸಾಸ್‌ನ ಆಸ್ಟಿನ್‌ನಲ್ಲಿ ನಡೆಯುತ್ತದೆ. ಇದು ಸೃಜನಾತ್ಮಕ ಮತ್ತು ವೃತ್ತಿಪರ ಪ್ರಗತಿಗೆ ಪೂರಕವಾಗಿದೆ.

ನಾಸಾ 1985ರ ಬಳಿಕ ಬಾಹ್ಯಾಕಾಶ ನಿಲ್ದಾಣದ ಮಲಗುಗ ಚೀಲಗಳ ಪರ್ಯಾಯ ಬಳಕೆಯ ಕುರಿತು ಚರ್ಚಿಸಿಲ್ಲ. ನಾಸಾ ಮಹಿಳಾ ಮತ್ತು ಪುರುಷ ಗಗನಯಾತ್ರಿಗಳನ್ನು ಭವಿಷ್ಯದ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸುವ ಯೋಜನೆ ರೂಪುಗೊಂಡಾಗ, ಲೈಂಗಿಕ ಚಟುವಟಿಕೆಗಳ ವಿಚಾರವೂ ಮುನ್ನಲೆಗೆ ಬಂದಿತ್ತು. ಇದು 1980ರ ದಶಕದ ಪುರುಷರನ್ನೇ ಒಳಗೊಂಡ ಪ್ರಯಾಣಗಳಲ್ಲಿ ಲೈಂಗಿಕತೆಗಳನ್ನು ಗಮನಿಸಿರಲಿಲ್ಲ ಎಂಬುದಕ್ಕೆ ಉದಾಹರಣೆಯಾಗಿತ್ತು. ನಾಸಾ ಸಂಶೋಧಕರಾದ ಯ್ವೋನ್ನ್ ಕ್ಲಿಯರ್‌ವಾಟರ್ ಅವರು ಸಾಮಾನ್ಯವಾದ, ಆರೋಗ್ಯಕರ ವೃತ್ತಿಪರರು ಸಹಜವಾಗಿಯೇ ಆರೋಗ್ಯಪೂರ್ಣ ಲೈಂಗಿಕ ಬಯಕೆಗಳನ್ನು ಹೊಂದಬಹುದು ಎಂದಿದ್ದರು.

ಯ್ವೋನ್ ಕ್ಲಿಯರ್‌ವಾಟರ್ ಅವರು ಬಾಹ್ಯಾಕಾಶ ನಿಲ್ದಾಣದ ನಿರ್ಮಾಣದಲ್ಲಿ ಸಂಪರ್ಕಿಸಿದ್ದ ಮನಶ್ಶಾಸ್ತ್ರಜ್ಞರು, ಇಂಜಿನಿಯರ್‌ಗಳು, ಹಾಗೂ ವಾಸ್ತುಶಿಲ್ಪಿಗಳೊಡನೆ, ಇಬ್ಬರು ವ್ಯಕ್ತಿಗಳು ಮಲಗುವಂತಹ, ಧ್ವನಿ ನಿರೋಧಕ ಸ್ಥಳದ ರಚನೆಯನ್ನು ಸೂಚಿಸಿದ್ದರು.

ಅವರು ಒಂದು ವೇಳೆ ಗಗನಯಾತ್ರಿಗಳು 90 ದಿನಗಳ ಅವಧಿಗೆ ಬಾಹ್ಯಾಕಾಶಕ್ಕೆ ತೆರಳುತ್ತಾರಾದರೆ, ಅವರ ನಡುವೆ ಪ್ರಣಯದ ಸಾಧ್ಯತೆಗಳ ಕುರಿತು ಯೋಚಿಸುವುದು ಅವಶ್ಯಕವಾಗಿದೆ ಎಂದು ಬರೆದಿದ್ದಾರೆ.

ಅವರ ಬರಹವನ್ನು ವಿವಿಧ ಪತ್ರಕರ್ತರು ಹಾಸ್ಯಮಯ ಬರಹಗಳ ಮೂಲಕ ಪ್ರಕಟಿಸಿದ್ದರು. ಆದರೆ, ಸರ್ಕಾರದ ಹಣದ ಮೂಲಕ ಬಾಹ್ಯಾಕಾಶಕ್ಕೆ ತೆರಳುವ ಗಗನಯಾತ್ರಿಗಳು ಲೈಂಗಿಕ ಚಟುವಟಿಕೆ ನಡೆಸುವುದನ್ನು ಅಮೆರಿಕಾದ ಕಾಂಗ್ರೆಸ್ ಒಪ್ಪಿಕೊಂಡಿರಲಿಲ್ಲ. ಅದಾಗಿ ಏಳು ವರ್ಷಗಳ ಬಳಿಕ ಪ್ರಕಟವಾದ ವರದಿಯೊಂದರಲ್ಲಿ, ನಾಸಾದ ಓರ್ವ ಸಿಬ್ಬಂದಿ ಆರು ತಿಂಗಳು ಋಣಾತ್ಮಕ ರಾಜಕೀಯ ಪ್ರತಿಕ್ರಿಯೆಗಳನ್ನು ನಿರ್ವಹಿಸುತ್ತಿದ್ದರು ಎಂದು ವಿವರಿಸಿತ್ತು.

ಬಾಹ್ಯಾಕಾಶದಲ್ಲಿ ಲೈಂಗಿಕ ಚಟುವಟಿಕೆ ನಡೆಸುವ ಯೋಚನೆ ರೋಮಾಂಚಕವಾಗಿ ತೋರಿದರೂ, ಅದು ಗಗನಯಾತ್ರಿಗಳ ಮನಸ್ಥಿತಿಯ ಮೇಲೂ ಅವಲಂಬಿಸಿರುತ್ತವೆ. ಗಗನಯಾತ್ರಿಗಳು ಸಾಮಾನ್ಯವಾಗಿ ಬಾಹ್ಯಾಕಾಶದಲ್ಲಿ ಹೆಚ್ಚಾಗಿ ಅನಾರೋಗ್ಯ ಮತ್ತು ಕೊಳಕಿನ ಭಾವ ಹೊಂದಿರುತ್ತಿದ್ದರು. ಬಾಹ್ಯಾಕಾಶ ನಿಲ್ದಾಣದಲ್ಲಿ ಶವರ್ ವ್ಯವಸ್ಥೆ ಇರುವುದಿಲ್ಲ. ಅಲ್ಲಿ ಕೇವಲ ಒದ್ದೆ ವೈಪ್‌ಗಳು ಮತ್ತು ನೀರಿನ ಅವಶ್ಯಕತೆಯಿಲ್ಲದ ಶ್ಯಾಂಪೂಗಳನ್ನು ಬಳಸಲಾಗುತ್ತದೆ. ಅದರೊಡನೆ, ಗಗನಯಾತ್ರಿಗಳು ತಮ್ಮ ಮೂಳೆ ಮತ್ತು ಸ್ನಾಯುಗಳನ್ನು ಬಲವಾಗಿಡಲು ದಿನವೂ ಕನಿಷ್ಠ ಎರಡು ಗಂಟೆ ಟ್ರೆಡ್‌ಮಿಲ್ ಅಥವಾ ಸೈಕಲ್ ಮೇಲೆ ವ್ಯಾಯಾಮ ಮಾಡಬೇಕಾಗುತ್ತದೆ.

ಬಾಸ್ಟನ್ನಿನ ಮ್ಯೂಸಿಯಂ ಆಫ್ ಸೈನ್ಸ್‌ಗಾಗಿ ನಡೆಸಿದ ಯೂಟ್ಯೂಬ್ ವೀಡಿಯೊ ಒಂದರಲ್ಲಿ ಗಗನಯಾತ್ರಿ ಬಾಬ್ ಹೈನ್ಸ್ ಅವರು ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ದೇಹದ ದ್ರವಗಳು ಹೇಗೆ ಕಾರ್ಯಾಚರಿಸುತ್ತವೆ ಎಂದು ವಿವರಿಸಿದ್ದರು. ಭೂಮಿಯಲ್ಲಿ ಮೂಡುವ ಬೆವರು ಮುಖದಿಂದ ಬಿದ್ದಾಗ, ಬಟ್ಟೆಗಳು ಅದನ್ನು ಹೀರಿಕೊಳ್ಳುತ್ತವೆ. ಆದರೆ ಬಾಹ್ಯಾಕಾಶದಲ್ಲಿರುವ ಮೇಲ್ಮೈ ಒತ್ತಡದ ಕಾರಣದಿಂದ ಬೆವರು ಗಗನಯಾತ್ರಿಗಳ ಜೊತೆಗೇ ಇರುತ್ತದೆ. ಬಾಹ್ಯಾಕಾಶದಲ್ಲಿ ಸಹಜವಾದ ಗಾಳಿಯ ಓಡಾಟ ಇಲ್ಲದಿರುವುದರಿಂದ, ಉಷ್ಣತೆ ಗಗನಯಾತ್ರಿಗಳ ಸುತ್ತಲೂ ಇದ್ದು, ಗಗನಯಾತ್ರಿಗಳು ಸಾಮಾನ್ಯಕ್ಕಿಂತಲೂ ಹೆಚ್ಚು ಬೆವರುವಂತೆ ಮಾಡುತ್ತದೆ. ಹೈನ್ಸ್ ಅವರು ತಾನು ವ್ಯಾಯಾಮ ಮಾಡಿದಾಗ, ಬೆವರು ತನ್ನ ಕೂದಲಿನಲ್ಲಿ ಸೇರಿಕೊಂಡಿರುತ್ತಿತ್ತು ಎಂದಿದ್ದರು.

ಒಂದು ವೇಳೆ ತಾನೇನಾದರೂ ಆ ಬೆವರನ್ನು ತಕ್ಷಣವೇ ಒರೆಸದಿದ್ದರೆ, ಅದು ತನ್ನ ತಲೆಯ ಮೇಲೆ ಜೆಲ್ಲಿಯಂತಹ ಪದರ ಉಂಟುಮಾಡುತ್ತಿತ್ತು ಎಂದು ಅವರು ಹೇಳಿದ್ದರು. ಓಡಾಡುವಾಗ ಆ ಬೆವರಿನ ಪದರ ಮುಂದೆ ಹಿಂದೆ ಚಲಿಸುವುದು ತನ್ನ ಅನುಭವಕ್ಕೆ ಬರುತ್ತಿತ್ತು ಎಂದು ಅವರು ವಿವರಿಸಿದ್ದರು.

ಈ ರೀತಿಯ ದೈಹಿಕ ದ್ರವಗಳ ವರ್ತನೆಯನ್ನು ಗಮನಿಸಿದಾಗ, ಮಹಿಳೆಯರಲ್ಲಿ ಲೈಂಗಿಕ ಚಟುವಟಿಕೆ ನಡೆಸುವ ಸ್ವಾಭಾವಿಕ ಇಚ್ಛೆಯಾಗಲಿ, ನೈಸರ್ಗಿಕ ಲ್ಯೂಬ್ರಿಕೇಶನ್ ಆಗಲಿ ಉಂಟಾಗುವ ಸಾಧ್ಯತೆಗಳು ಬಹಳಷ್ಟು ಕಡಿಮೆಯಿದೆ. ಇಂತಹ ಲ್ಯೂಬ್ರಿಕೇಶನ್‌ಗಳು ಸಣ್ಣ ಬಿಂದುಗಳ ರೂಪದಲ್ಲಿ ಕಾಣಿಸಿಕೊಳ್ಳಬಹುದು. ಆದ್ದರಿಂದ ಸರ್ವಿಕಲ್ ದ್ರವದಂತಹ ದೈಹಿಕ ದ್ರವಗಳು ಬಾಹ್ಯಾಕಾಶದಲ್ಲಿ ಹೇಗೆ ವರ್ತಿಸುತ್ತವೆ ಎಂದು ಮಾಹಿತಿಗಳನ್ನಾಗಲಿ, ವೈಯಕ್ತಿಕ ವಿಚಾರಗಳನ್ನಾಗಲಿ ಪಡೆದುಕೊಳ್ಳುವುದು ಕಷ್ಟಕರವಾಗಿದೆ. ಇದು ಋತು ಸ್ರಾವ ಎದುರಿಸುವ ಮಹಿಳೆಯರ ವಿಚಾರದಲ್ಲೂ ಸತ್ಯವಾಗಿದೆ. ಬಹಳಷ್ಟು ಗಗನಯಾತ್ರಿ ಮಹಿಳೆಯರು ಗರ್ಭ ನಿರೋಧಕ ಮಾತ್ರೆಗಳನ್ನು ಸೇವಿಸಿ, ಭೂಮಿಗೆ ಮರಳುವ ತನಕ ಮುಟ್ಟಾಗದಂತೆ ಕ್ರಮ ಕೈಗೊಳ್ಳುತ್ತಾರೆ.

ಬಾಹ್ಯಾಕಾಶ ಅನ್ವೇಷಣೆ ನಡೆಸುವ ರೀತಿಯಲ್ಲೇ, ಲೈಂಗಿಕ ಚಟುವಟಿಕೆ ನಡೆಸುವುದೂ ಸಹ ಮಾನವರಲ್ಲಿರುವ ಸಹಜ ವಾಂಛೆಯಾಗಿದೆ. ಆದ್ದರಿಂದಲೇ ಬಾಹ್ಯಾಕಾಶ ಸಂಸ್ಥೆಗಳು ಇಲ್ಲಿಯತನಕ ಯಾರೂ ಬಾಹ್ಯಾಕಾಶದಲ್ಲಿ ಲೈಂಗಿಕ ಕ್ರಿಯೆ ನಡೆಸಿಲ್ಲ ಎಂದರೆ ಅದನ್ನು ನಂಬಲು ಜನರು ಸಂಪೂರ್ಣ ಸಿದ್ಧರಿಲ್ಲ.

ಬಾಹ್ಯಾಕಾಶದಲ್ಲಿ ಲೈಂಗಿಕ ಚಟುವಟಿಕೆ ನಡೆಸಿದ, ಗರ್ಭ ಧರಿಸಿದ, ಮತ್ತು ಬಾಹ್ಯಾಕಾಶದಲ್ಲಿ ಮಗುವಿಗೆ ಜನ್ಮ ನೀಡಿದ ಮೊದಲ ಮಾನವರು ಎಂಬ ಹೆಸರು ಸಂಪಾದಿಸಲು ಆಸಕ್ತಿ ಹೊಂದಿರುವ ಬಹಳಷ್ಟು ಜನರು ಲಭ್ಯವಿರಬಹುದು. ಈ ವಿಚಾರಗಳನ್ನು ನೈತಿಕ ರೀತಿಯಲ್ಲೇ ಪರಿಹರಿಸದೆ ಹೋದಲ್ಲಿ, ಭವಿಷ್ಯದಲ್ಲಿ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳು ದಟ್ಟವಾಗಿವೆ.

-ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

Trending News