ಮುಂಬೈ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲೂ ಎಸ್ಪಿ-ಬಿಎಸ್ಪಿ ಮೈತ್ರಿ ಮಾಡಿಕೊಂಡಿರುವುದಾಗಿ, ಮಂಗಳವಾರ ಎಸ್ಪಿ ನಾಯಕ ಅಬು ಅಸಿಮ್ ಅಜ್ಮಿ ಮತ್ತು ಬಿಎಸ್ಪಿ ರಾಜ್ಯಸಭಾ ಸಂಸದ ಅಶೋಕ್ ಸಿದ್ಧಾರ್ಥ್ ಘೋಷಿಸಿದ್ದಾರೆ.
ಮಹಾರಾಷ್ಟ್ರದ 48 ಸ್ಥಾನಗಳಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿಯಿಂದ ಸ್ಪರ್ಧಿಸಲಿದ್ದೇವೆ ಎಂದು ಸಮಾಜವಾದಿ ಪಕ್ಷದ ನಾಯಕ ಅಬು ಅಸಿಮ್ ಅಜ್ಮಿ ಹೇಳಿದರು. ನಾವು ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸಿದೆವು. ಆದರೆ ಕಾಂಗ್ರೆಸ್ ಹೆಚ್ಚು ಸ್ಥಾನವನ್ನು ಬಯಸಿದ್ದರಿಂದ ಮೈತ್ರಿ ಸಾಧ್ಯವಾಗಲಿಲ್ಲ ಎಂದು ಅಸಿಮ್ ಅಜ್ಮಿ ತಿಳಿಸಿದ್ದಾರೆ.
ಅದೇ ಸಮಯದಲ್ಲಿ ಮಹಾರಾಷ್ಟ್ರದ ಪ್ರಭಾವಿ ನಾಯಕ, ಬಿಎಸ್ಪಿ ರಾಜ್ಯಸಭಾ ಸಂಸದ ಅಶೋಕ್ ಸಿದ್ಧಾರ್ಥ್ ಮಾತನಾಡಿ, "ಕಳೆದ ಐದು ವರ್ಷಗಳಿಂದ ಬಹುಜನ ಸಮಾನ ಮತ್ತು ಅಲ್ಪಸಂಖ್ಯಾತರು ತುಳಿತಕ್ಕೊಳಗಾಗಿದ್ದಾರೆ. ಅದನ್ನು ನಿಯಂತ್ರಿಸುವ ಸಲುವಾಗಿ ನಾವು ಒಟ್ಟಿಗೆ ಬಂದಿದ್ದೇವೆ". ಬಿಜೆಪಿಯೊಂದಿಗಿನ ಅಂತರದಷ್ಟೇ, ಈಗ ಕಾಂಗ್ರೆಸ್ ನೊಂದಿಗೂ ನಮ್ಮ ಅಂತರವಿದೆ. ಮುಂಬರುವ ವಿಧಾನಸಭಾ ಚುನಾವಣಾಯಲ್ಲೂ ಮಾಯಾವತಿ ಮತ್ತು ಅಖಿಲೇಶ್ ಅವರು ಬಯಸಿದ್ದಾರೆ. ಸೀಟು ಹಂಚಿಕೆ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.
ಒಂದೆಡೆ ಬಿಜೆಪಿ ವಿರುದ್ಧ ಎಲ್ಲಾ ವಿರೋಧ ಪಕ್ಷಗಳು ಹೋರಾಡುತ್ತಿದ್ದು, ಇನ್ನೊಂದೆಡೆ ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರಗಳಲ್ಲೂ ಎಸ್ಪಿ-ಬಿಎಸ್ಪಿ ಮೈತ್ರಿ ಮುಂದುವರೆದಿದ್ದು, ಈ ಮೈತ್ರಿಯಿಂದಾಗಿ ಎನ್ ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಚುನಾವಣೆ ಇನ್ನೂ ಕಷ್ಟಕರವಾಗಬಹುದು ಎನ್ನಲಾಗುತ್ತಿದೆ. ಇದು ಕಾಂಗ್ರೆಸ್ ಮತ ಬ್ಯಾಂಕ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.