ಆಪ್ತ ಸುರೇಂದ್ರ ಸಿಂಗ್ ಅಂತಿಮ ಯಾತ್ರೆ: ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಸ್ಮೃತಿ ಇರಾನಿ

ಅಮೇಥಿ ಜಿಲ್ಲೆಯ ಬರೌಲಿಯಾ ಗ್ರಾಮದ ಬಿಜೆಪಿ ಮುಖಂಡ ಸುರೇಂದ್ರ ಸಿಂಗ್(50) ಶನಿವಾರ ತಡರಾತ್ರಿ ಬರ್ಬರವಾಗಿ ಹತ್ಯೆಯಾಗಿದ್ದರು. 

Last Updated : May 26, 2019, 05:44 PM IST
ಆಪ್ತ ಸುರೇಂದ್ರ ಸಿಂಗ್ ಅಂತಿಮ ಯಾತ್ರೆ: ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಸ್ಮೃತಿ ಇರಾನಿ title=

ಅಮೇಥಿ: ಶನಿವಾರ ತಡರಾತ್ರಿ ಅಮೇಥಿಯ ಬರೌಲಿಯಾ ಗ್ರಾಮದಲ್ಲಿ ಹತ್ಯೆಗೀಡಾಗಿದ್ದ ಬಿಜೆಪಿ ಸಂಸದೆ ಸ್ಮೃತಿ ಇರಾನಿ ಆಪ್ತ ಸುರೇಂದ್ರ ಸಿಂಗ್ ಅವರ ಅಂತಿಮ ಯಾತ್ರೆ ಇಂದು ನಡೆಯಿತು. ಈ ಸಂದರ್ಭದಲ್ಲಿ ಸ್ಮೃತಿ ಇರಾನಿ ಅವರು ಸುರೇಂದ್ರ ಸಿಂಗ್ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟು ಮುಂದೆ ಸಾಗಿದರು.

ಅಮೇಥಿ ಜಿಲ್ಲೆಯ ಬರೌಲಿಯಾ ಗ್ರಾಮದ ಬಿಜೆಪಿ ಮುಖಂಡ ಸುರೇಂದ್ರ ಸಿಂಗ್(50) ಶನಿವಾರ ತಡರಾತ್ರಿ ಬರ್ಬರವಾಗಿ ಹತ್ಯೆಯಾಗಿದ್ದರು. ಸ್ಮೃತಿ ಇರಾನಿ ಅವರ ಗೆಲುವಿನ ಸಂಭ್ರಮಾಚರಣೆಗೆ ತೆರಳಿ ಮನೆಗೆ ವಾಪಾಸಾಗಿ ಹೊರಗೆ ಮಲಗಿದ್ದ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗಮಧ್ಯೆದಲ್ಲೇ ಸಾವನ್ನಪ್ಪಿದ್ದರು.

ಬಳಿಕ ಲಕ್ನೋ ಮೆಡಿಕಲ್ ಕಾಲೇಜಿನಲ್ಲಿ ಮೂವರು ವೈದ್ಯರ ತಂಡ ಸುರೇಂದ್ರ ಸಿಂಗ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದು, ಇದನ್ನು ವಿಡಿಯೋ ಸಹ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿತ್ತು. 

ವಿಷಯ ತಿಳಿಯುತ್ತಿದ್ದಂತೆ ನವದೆಹಲಿಯಿಂದ ಅಮೇಥಿಗೆ ಆಗಮಿಸಿದ್ದ ಸ್ಮೃತಿ ಇರಾನಿ, ಸುರೇಂದ್ರ ಸಿಂಗ್ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದರು. ಅಲ್ಲದೆ, ಅಂತಿಮಯಾತ್ರೆಯಲ್ಲಿ ಭಾಗಿಯಾಗಿ, ಸುರೇಂದ್ರ ಸಿಂಗ್ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟು ಮುಂದೆ ಸಾಗಿದರು.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ದಯಾ ರಾಮ್ ಹೇಳಿದ್ದಾರೆ.

ಮೂಲಗಳ ಪ್ರಕಾರ, ಬಿಜೆಪಿ ಮುಖಂಡ ಸುರೇಂದ್ರ ಸಿಂಗ್ ಅವರು ಸ್ಮೃತಿ ಇರಾನಿ ಅವರಿಗೆ ಬಹಳ ಆಪ್ತರಾಗಿದ್ದರು. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಮೇಥಿಯಲ್ಲಿ ಸ್ಮೃತಿ ಇರಾನಿ ಗೆಲುವಿಗಾಗಿ ಸಾಕಷ್ಟು ಪ್ರಚಾರ ನಡೆಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸ್ಮೃತಿ ಇರಾನಿ ಅವರು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ವಿರುದ್ಧ ಭರ್ಜರಿ ಜಯ ಗಳಿಸಿದ್ದಾರೆ.
 

Trending News