ನವದೆಹಲಿ: ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸಿ ಸಲ್ಲಿಕೆಯಾಗಿರುವ ಎಲ್ಲಾ 49 ಮರುಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು 2019ರ ಜನವರಿ 22 ರಂದು ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಾಧೀಶ ರಂಜನ್ ಗೋಗಯ್ ನೇತೃತ್ವದಲ್ಲಿನ ನ್ಯಾಯಮೂರ್ತಿಗಳಾದ ಎನ್. ನಾರಿಮನ್, ಎ.ಎಂ.ಖನ್ವೀಲ್ ಕರ್, ಡಿ.ವೈ ಚಂದ್ರಚೂಡ್ ಮತ್ತು ಇಂದೂ ಮಲ್ಹೋತ್ರಾ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಲಿದೆ.
ಸೆಪ್ಟೆಂಬರ್ 28ರಂದು ಸುಪ್ರಿಂಕೋರ್ಟ್ 10 ರಿಂದ 50 ವರ್ಷದೊಳಗಿನ ಎಲ್ಲಾ ಮಹಿಳೆಯರು ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಲು ಅವಕಾಶ ನೀಡಿ ಮಹತ್ವದ ತೀರ್ಪು ಪ್ರಕಟಿಸಿತ್ತು. ಆದರೆ, ಸುಪ್ರಿಂಕೋರ್ಟ್ನ ಈ ತೀರ್ಪಿನಿಂದ ಕೇರಳದಲ್ಲಿ ಕೋಲಾಹಲ ಸೃಷ್ಟಿಯಾಗಿದ್ದು, ದೇವಸ್ಥಾನದ ಆಡಳಿತ ಮಂಡಳಿ, ಹಿಂದೂಪರ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ದೇವಸ್ಥಾನದ ಬಾಗಿಲು ತೆಗೆದಾಗ ಕೆಲ ಮಹಿಳೆಯರು ಸುಪ್ರೀಂಕೋರ್ಟ್ ತೀರ್ಪಿನಂತೆ ಪ್ರವೇಶಕ್ಕೆ ಯತ್ನಿಸಿದಾಗ ದೇವಸ್ಥಾನದ ಆಡಳಿತ ಮಂಡಳಿ ಅವರನ್ನು ಅರ್ಧ ದಾರಿಯಲ್ಲೇ ತಡೆದಿತ್ತು. ಅಲ್ಲದೇ, ಸುಪ್ರೀಂ ತೀರ್ಪು ಮರುಪರಿಶೀಲನೆಯಾಗಬೇಕು ಎಂದು ಆಗ್ರಹಿಸಿ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.