ಚುನಾವಣೆ ಮೂಲಕ ಜೆಡಿಎಸ್ ನೂತನ ರಾಜ್ಯಾಧ್ಯಕ್ಷರ ಆಯ್ಕೆಗೆ ನಿರ್ಧಾರ: ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ

ಜೆಡಿಎಸ್ ರಾಜ್ಯಾಧ್ಯಕ್ಷರ ಆಯ್ಕೆಯನ್ನು ಮುಂದಿನ ಏಪ್ರಿಲ್ ತಿಂಗಳ ಒಳಗೆ ಚುನಾವಣೆ ಮೂಲಕ ನಡೆಸುವ ನಿರ್ಧಾರವನ್ನು ಜೆಡಿಎಸ್ ಕೈಗೊಳ್ಳಲಿದೆ ಎಂದು ಕೇಂದ್ರ ಸಚಿವ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

Written by - Prashobh Devanahalli | Last Updated : Jan 12, 2025, 06:50 PM IST
    • ಚುನಾವಣೆ ಮೂಲಕ ನಡೆಸುವ ನಿರ್ಧಾರವನ್ನು ಜೆಡಿಎಸ್ ಕೈಗೊಳ್ಳಲಿದೆ
    • ಯಾರನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಈ ಸಭೆಯಲ್ಲಿ ಚರ್ಚೆ ಆಗಿಲ್ಲ ಎಂದು ಸಚಿವರು ಹೇಳಿದರು
    • ಕೇಂದ್ರ ಸಚಿವ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು
ಚುನಾವಣೆ ಮೂಲಕ ಜೆಡಿಎಸ್ ನೂತನ ರಾಜ್ಯಾಧ್ಯಕ್ಷರ ಆಯ್ಕೆಗೆ ನಿರ್ಧಾರ: ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ title=
File Photo

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷರ ಆಯ್ಕೆಯನ್ನು ಮುಂದಿನ ಏಪ್ರಿಲ್ ತಿಂಗಳ ಒಳಗೆ ಚುನಾವಣೆ ಮೂಲಕ ನಡೆಸುವ ನಿರ್ಧಾರವನ್ನು ಜೆಡಿಎಸ್ ಕೈಗೊಳ್ಳಲಿದೆ ಎಂದು ಕೇಂದ್ರ ಸಚಿವ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಆದರೆ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಈ ಸಭೆಯಲ್ಲಿ ಚರ್ಚೆ ಆಗಿಲ್ಲ ಎಂದು ಸಚಿವರು ಹೇಳಿದರು. ಜತೆಗೆ; ಪಕ್ಷದ ದ್ವೈವಾರ್ಷಿಕ ಸಾಂಸ್ಥಿಕ ಚುನಾವಣೆ, ಸದಸ್ಯತ್ವ ಅಭಿಯಾನವನ್ನು ಚುರುಕುಗೊಳಿಸುವುದು, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ತಯಾರಿ ಹಾಗೂ ಪಕ್ಷ ಸಂಘಟನೆ ವಿಷಯಗಳ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಎಸಿ ಸ್ಫೋಟವಾಗಿ ಭಾರಿ ಅನಾಹುತ! ಆಗಿದ್ದೇನು ನೋಡಿ?

ಮುಖಂಡರ ಸಭೆಯ ನಂತರ ಸಚಿವರು ಮಾಧ್ಯಮಗಳ ಜತೆ ಮಾತನಾಡಿದರು. ಮುಂದಿನ ಏಪ್ರಿಲ್ ಒಳಗೆ ರಾಜ್ಯದ ಘಟಕದ ಅಧ್ಯಕ್ಷ ಸ್ಥಾನವನ್ನು ಚುನಾವಣೆ ಮೂಲಕ ಆಯ್ಕೆ ಮಾಡುವ ತೀರ್ಮಾನ ಆಗಿದೆ. ಪಕ್ಷದ ಸಂಘಟನೆ ಬಗ್ಗೆ ಪಕ್ಷದ ನಾಯಕರಿಗೆ ಕಠಿಣವಾಗಿಯೇ ಹೇಳಿದ್ದೇನೆ. ಯಾರು ಪ್ರಾಮಾಣಿಕವಾಗಿ ಪಕ್ಷದ ಸಂಘಟನೆಗೆ ದುಡಿಯುತ್ತಾರೋ ಅಂಥವರಿಗೆ ಆದ್ಯತೆ ಕೊಡುತ್ತೇವೆ. ನಾನು ಕೂಡ ಪಕ್ಷ ಸಂಘಟನೆಯಲ್ಲಿ ನಿಯಮಿತವಾಗಿ ತೊಡಗಿಸಿಕೊಳ್ಳುತ್ತೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದ ಮೇಲೆ ರಾಜ್ಯದಲ್ಲಿ ನಾಯಕತ್ವ ಶೂನ್ಯ ಉಂಟಾಗಿದೆ ಎಂದು ಹೇಳಲಾಗುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವರು; ವಾರದಲ್ಲಿ ನಾಲ್ಕು ದಿನ ನವದೆಹಲಿಯ ಸಚಿವಾಲಯದಲ್ಲಿ ಕೆಲಸ ಮಾಡುತ್ತೇನೆ. ಒಂದು ಅಥವಾ ಎರಡು ದಿನ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವಾಲಯದ ಕಾರ್ಖಾನೆಗಳಿಗೆ ಭೇಟಿ ಕೊಡುತ್ತೇನೆ. ಉಳಿದ ಸಮಯವನ್ನು ಪಕ್ಷದ ಕೆಲಸಕ್ಕೆ ಮಿಸಲಿಡುತ್ತೇನೆ. ಪಕ್ಷದ ಸಂಘಟನೆ, ಸಭೆ, ಪ್ರವಾಸ, ಮಂಡ್ಯ ಕ್ಷೇತ್ರಕ್ಕೆ ಭೇಟಿ ಇತ್ಯಾದಿಗಳ ಬಗ್ಗೆ ವೇಳಾಪಟ್ಟಿ ಸಿದ್ಧ ಮಾಡಿಕೊಂಡಿದ್ದೇನೆ. ಇನ್ನು ಮುಂದೆ ಅದರಂತೆಯೇ ಕೆಲಸ ಮಾಡುತ್ತೇನೆ ಎಂದು ಸಚಿವರು ಹೇಳಿದರು.

ಸಾರ್ವಜನಿಕ ಉದ್ಯಮಿಗಳು ಅಭದಾಯಕವಲ್ಲ ಎನ್ನುವ ಮಾತಿದೆ. ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಆ ಕಾರ್ಖಾನೆಗಳು ಲಾಭ ಮಾಡಬಲ್ಲವು ಎಂಬುದನ್ನು ತೋರಿಸುತ್ತೇನೆ ಎಂದು ಕುಮಾರಸ್ವಾಮಿ ಅವರು ಒತ್ತಿ ಹೇಳಿದರು.

ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಕಿಡಿ:
ಕಾಂಗ್ರೆಸ್ ಪಕ್ಷ ಜೆಡಿಎಸ್ ಶಾಸಕರನ್ನು ಆಪರೇಷನ್ ಮಾಡುತ್ತಿದೆ, ಜೆಡಿಎಸ್ ನಲ್ಲಿ ಗಡಗಡ, ಸಂಕ್ರಾಂತಿ ನಂತರ ಜೆಡಿಎಸ್ ಇರುವುದೇ ಇಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಸಚಿವರೇ.. ಮೊದಲು ನಿಮ್ಮ ಪಕ್ಷದ ಕಥೆ ನೋಡಿಕೊಳ್ಳಿ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಕಾಂಗ್ರೆಸನ್ನು ದೂರ ಇಟ್ಟು ಏಕಾಂಗಿಯಾಗಿ ಚುನಾವಣೆ ಎದುರಿಸುತ್ತಿದೆ. ಇಂಡಿ ಕೂಟವನ್ನು ವಿಸರ್ಜನೆ ಮಾಡಿ ಎಂದು ಓಮರ್ ಅಬ್ದುಲ್ಲಾ ಹೇಳುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ನಾವು ಏಕಾಂಗಿಯಾಗಿ ಸ್ಥಳಿಯ ಸಂಸ್ಥೆಗಳ ಚುನಾವಣೆ ಎದುರಿಸುತ್ತೇವೆ ಎಂದು ಶಿವಸೇನೆ ಹೇಳುತ್ತಿದೆ. ಅಲ್ಲೆಲ್ಲಾ ಎಲ್ಲಿದೆ ಕಾಂಗ್ರೆಸ್? ನಿಮ್ಮ ಪಕ್ಷದ ಒಳಗೆ ಏನಾಗುತ್ತಿದೆ ಎನ್ನುವುದನ್ನು ಮೊದಲು ನೋಡಿಕೊಳ್ಳಿ. ಪಾಟೀಲರೇ.. ನಿಮ್ಮ ಪಕ್ಷದ ತಟ್ಟೆಯಲ್ಲಿಯೇ  ಹೆಗ್ಗಣ ಸತ್ತು ಬಿದ್ದಿದೆ ಎಂದು ಕುಮಾರಸ್ವಾಮಿ ಅವರು ಟಾಂಗ್ ಕೊಟ್ಟರು.

ನಮಗೆ, ನಮ್ಮ ಕುಟುಂಬಕ್ಕೆ ಸೋಲು ಗೆಲುವು ಹೊಸದೇನಲ್ಲ. ಸೋತಾಗ ಕುಗ್ಗಿಲ್ಲ, ಗೆದ್ದಾಗ ಹಿಗ್ಗಿಲ್ಲ ಎಂದ ಅವರು; ನಮ್ಮ ಪಕ್ಷ ಗಟ್ಟಿಯಾಗಿದೆ. ಅದನ್ನು ಸಹಿಸುವುದು ಕಾಂಗ್ರೆಸ್ ಪಕ್ಷಕ್ಕೆ ಆಗುತ್ತಿಲ್ಲ. ಅದಕ್ಕೆ ಇಷ್ಟೆಲ್ಲಾ ನಾಟಕ ಆಡುತ್ತಿದೆ. ಅದರ ಆಟ ನಡೆಯುವುದಿಲ್ಲ ಎಂದು ಸಚಿವರು ಎಚ್ಚರಿಕೆ ಕೊಟ್ಟರು.

ಜಾತಿಗಣತಿ; ಸಿಎಂ ವಿರುದ್ಧ HDK ಕೆಂಡ
ಕಾಂತರಾಜ್ ವರದಿ ಸರ್ಕಾರದ ಕೈ ಸೇರಿ ಎಷ್ಟು ವರ್ಷವಾಯಿತು? ಜಾತಿಗಳ ಸಮಸ್ಯಗಳಿಗೆ ಏನು  ಪರಿಹಾರ ಕೊಟ್ಟಿದ್ದಾರೆ ಇವರು. ಏಳು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಇದ್ದಾರಲ್ಲವೇ? ಅಹಿಂದಾ ನಾಯಕರು, ಬೇರೆ ಸಮಾಜಗಳ ಮಾತಿರಲಿ, ಅಹಿಂದಾ ವರ್ಗಕ್ಕೆ ಅವರು ಏನು ಮಾಡಿದ್ದಾರೆ. ಇಷ್ಟು ದಿನ ಅಧಿಕಾರದಲ್ಲಿ ಇದ್ದರೂ ಇವರು ಇನ್ನೂ ಅಹಿಂದಾ ಅಹಿಂದಾ ಎಂದು ಹೇಳುತ್ತಿದ್ದಾರೆ. ಕೇವಲ ರಾಜಕೀಯಕ್ಕಾಗಿ ಸಿದ್ದರಾಮಯ್ಯ ಅವರು ಈ ಸಮುದಾಯವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ವಾರಕ್ಕೊಮ್ಮೆ ಈ ಒಣಹಣ್ಣು ತಿಂದರೆ ಜನ್ಮಕ್ಕೂ ಆಗಲ್ಲ ಹಾರ್ಟ್‌ ಅಟ್ಯಾಕ್‌! ಹೃದಯಾಘಾತ ತಡೆಯಬಲ್ಲ ಶಕ್ತಿಶಾಲಿ ಡ್ರೈಫ್ರೂಟ್...ಬಿಪಿ, ಶುಗರ್‌ ಸಮಸ್ಯೆಗೂ ಇದೇ ಶ್ರೀರಾಮರಕ್ಷೆ

ರಾಹುಲ್ ಗಾಂಧಿ ಹೋದ ಕಡೆ, ಬಂದ ಕಡೆ ಜಾತಿಗಣತಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಕೇಂದ್ರ ಸರಕಾರವೇ ಜಾತಿ ಗಣತಿಗೆ ತೀರ್ಮಾನ ಮಾಡಿದೆ. ಹೀಗಿದ್ದ ಮೇಲೆ ರಾಜ್ಯ ಸರಕಾರ ಕೇಂದ್ರದ ವರದಿ ಬರುವ ತನಕ ಕಾಯಲಿ. ರಾಜ್ಯದಲ್ಲಿ ಈಗಾಗಲೇ ಆಗಿರುವ ಜಾತಿಗಣತಿ ವರದಿ ದೋಷಪೂರಿತವಾಗಿದೆ. ಗಣತಿ ಆಗಿ ಹತ್ತು ವರ್ಷಗಳು ಮೀರಿದೆ. ರಾಜ್ಯದಲ್ಲಿ ಹಣಕ್ಕೆ ಬರವಿಲ್ಲ. ರಾಜ್ಯ ಸರಕಾರವೇ ಹೊಸದಾಗಿ ಇನ್ನೊಂದು ಜಾತಿ ಜನಗಣತಿ ಮಾಡಲಿ. ಜನರಿಂದ ಹಣವನ್ನು ಯಥೇಚ್ಛವಾಗಿ ಸುಲಿಗೆ ಮಾಡುತ್ತಿದ್ದೀರಿ. ಗಂಜಿ ಕೇಂದ್ರಗಳಿಗಾಗಿ ಬಾಯಿ ಬಿಟ್ಟುಕೊಂಡು ಕಾಯುತ್ತಾ ಕೂತಿರುವರು ಕೆಲವರು ಇರುತ್ತಾರಲ್ಲವೇ.. ಅವರನ್ನೇ ಸೇರಿಸಿ ಇನ್ನೊಂದು ಇನ್ನೊಂದು ಸಮಿತಿ ಮಾಡಿ  ಜಾತಿಗಣತಿ ಮಾಡಿ ಎಂದು ಸಿಎಂಗೆ ಟಾಂಗ್ ಕೊಟ್ಟರು ಕುಮಾರಸ್ವಾಮಿ ಅವರು.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News