ಕೇರಳ, ತಮಿಳುನಾಡಿನಲ್ಲಿ ತೀವ್ರಗೊಳ್ಳುತ್ತಿರುವ `ಒಕ್ಹಿ' ಚಂಡಮಾರುತ : ಸಾವಿನ ಸಂಖ್ಯೆ 12ಕ್ಕೆ ಏರಿಕೆ

ಲಕ್ಷದ್ವೀಪದತ್ತ ಸಾಗುತ್ತಿರುವ ಒಕ್ಹಿ ಚಂಡಮಾರುತ ತಮಿಳುನಾಡು, ಕೇರಳ ಕರಾವಳಿಯನ್ನು ಅಕ್ಷರಶಃ ನಡುಗಿಸಿದ್ದು ಮೃತಪಟ್ಟವರ ಸಂಖ್ಯೆ 12ಕ್ಕೇರಿದೆ. 

Last Updated : Dec 2, 2017, 11:23 AM IST
  • ಮುಂದಿನ 24 ಗಂಟೆಗಳಲ್ಲಿ ಚಂಡಮಾರುತ ಇನ್ನಷ್ಟು ತೀವ್ರತೆ ಪಡೆಯಲಿದ್ದು, ಲಕ್ಷದ್ವೀಪದತ್ತ ಹೋಗಿ, ನಂತರ ಅಲ್ಲಿಂದ ಉತ್ತರದ ಕಡೆಗೆ ಸಂಚರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
  • 38ರಷ್ಟು ಮೀನುಗಾರಿಕಾ ದೋಣಿಗಳು ಸಮುದ್ರದ ಮಧ್ಯೆ ಸಿಲುಕಿಕೊಂಡಿದ್ದು, ಅದರಲ್ಲಿರುವವರಿಗೆ ನೌಕಾಪಡೆಯು ಆಹಾರ ಮತ್ತಿತರ ಪರಿಹಾರ ಕಿಟ್‌ಗಳನ್ನು ಒದಗಿಸಲಾಗಿದೆ.
  • ಸಮುದ್ರದಲ್ಲಿ ಸಿಲುಕಿದ್ದ 218 ಮಂದಿ ಕೇರಳದ ಮೀನುಗಾರರನ್ನು ಶುಕ್ರವಾರ ರಕ್ಷಿಸಲಾಗಿದೆ.
  • ತಮಿಳುನಾಡು ಸರಕಾರ ಪ್ರತಿ ಸಂತ್ರಸ್ತರಿಗೆ 4 ಲಕ್ಷ ರೂ. ಪರಿಹಾರ ಧನ ಘೋಷಿಸಿದೆ.
ಕೇರಳ, ತಮಿಳುನಾಡಿನಲ್ಲಿ ತೀವ್ರಗೊಳ್ಳುತ್ತಿರುವ `ಒಕ್ಹಿ' ಚಂಡಮಾರುತ : ಸಾವಿನ ಸಂಖ್ಯೆ 12ಕ್ಕೆ   ಏರಿಕೆ title=

ಚೆನ್ನೈ/ತಿರುವನಂತಪುರಂ: ಲಕ್ಷದ್ವೀಪದತ್ತ ಸಾಗುತ್ತಿರುವ ಒಕ್ಹಿ ಚಂಡಮಾರುತ ತಮಿಳುನಾಡು, ಕೇರಳ ಕರಾವಳಿಯನ್ನು ಅಕ್ಷರಶಃ ನಡುಗಿಸಿದ್ದು ಮೃತಪಟ್ಟವರ ಸಂಖ್ಯೆ 12ಕ್ಕೇರಿದೆ. ಈ ಎರಡೂ ರಾಜ್ಯಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಮುಂದಿನ 24 ಗಂಟೆಗಳಲ್ಲಿ ಚಂಡಮಾರುತ ಇನ್ನಷ್ಟು ತೀವ್ರತೆ ಪಡೆಯಲಿದ್ದು, ಲಕ್ಷದ್ವೀಪದತ್ತ ಹೋಗಿ, ನಂತರ ಅಲ್ಲಿಂದ ಉತ್ತರದ ಕಡೆಗೆ ಸಂಚರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ತಮಿಳುನಾಡು, ಕೇರಳ ಹಾಗೂ ಲಕ್ಷದ್ವೀಪದಲ್ಲಿ ಭಾರೀ ಬಿರುಗಾಳಿ, ಮಳೆಯಿಂದಾಗಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ. ಹಲವು ಪ್ರದೇಶಗಳಲ್ಲಿ ವಿದ್ಯುತ್‌ ಕಂಬಗಳು ಉರುಳಿರುವ ಕಾರಣ, ಕಗ್ಗತ್ತಲು ಆವರಿಸಿದೆ. 

ಗಾಳಿಯ ತೀವ್ರತೆಗೆ ನೂರಾರು ಮರಗಳು ನೆಲಕ್ಕುರುಳಿದ್ದು, ಮನೆ ಕಟ್ಟಡಗಳು ಹಾನಿಗೀಡಾಗಿವೆ. ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕೇರಳದಲ್ಲಿ ಶುಕ್ರವಾರ ಚಂಡಮಾರುತ ಸಂಬಂಧಿ ಘಟನೆಯಿಂದಾಗಿ ಮೂವರು ಮೃತಪಟ್ಟಿದ್ದು, ಮೃತರ ಸಂಖ್ಯೆ 7ಕ್ಕೇರಿದೆ. ಹೀಗಾಗಿ, ಒಟ್ಟಾರೆ ಕೇರಳ ಮತ್ತು ತಮಿಳುನಾಡಿನಲ್ಲಿ ಎರಡು ದಿನಗಳಲ್ಲಿ 12 ಮಂದಿ ಮೃತರಾಗಿದ್ದಾರೆ.

ಒಕ್ಹಿ ಚಂಡಮಾರುತದಿಂದಾಗಿ ಸಮುದ್ರದಲ್ಲಿ ಸಿಲುಕಿದ್ದ 218 ಮಂದಿ ಕೇರಳದ ಮೀನುಗಾರರನ್ನು ಶುಕ್ರವಾರ ರಕ್ಷಿಸಲಾಗಿದೆ. ಶನಿವಾರ ಸಂಜೆಯವರೆಗೂ ಸಮುದ್ರದ ಅಲೆಗಳ ಅಬ್ಬರ ಜೋರಾಗಿರಲಿದ್ದು, ಕರಾವಳಿ ತೀರದ ಜನ ಆದಷ್ಟು ಎಚ್ಚರಿಕೆಯಿಂದಿರುವಂತೆ ಕೇರಳ ಸಿಎಂ ಪಿಣರಾಯಿ ವಿಜಯನ್‌ ಸೂಚಿಸಿದ್ದಾರೆ.

ಹೆಚ್ಚಿನ ಮಳೆಯಾಗುವ ಸಂಭವ : 
ಸೆಂಟ್ರಲ್ ವಾಟರ್ ಕಮಿಷನ್ (ಸಿಡಬ್ಲ್ಯೂಸಿ) ಹೇಳುವಂತೆ ಮುಂದಿನ 24 ಗಂಟೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಂಭವ ಇರುವುದರಿಂದ ದಕ್ಷಿಣದ ಎರಡು ರಾಜ್ಯಗಳಲ್ಲಿನ ನದಿಗಳ ನೀರಿನ ಮಟ್ಟದಲ್ಲಿ ತ್ವರಿತ ಏರಿಕೆಗೆ ಕಾರಣವಾಗಬಹುದು. ಕೇರಳದ ಪಶ್ಚಿಮದ ತಿರುವನಂತಪುರಂ, ಕೊಲ್ಲಂ, ಪಥನಂತಿಟ್ಟ, ಇಡುಕ್ಕಿ, ಕೊಟ್ಟಾಯಂ, ಅಲಪ್ಪುಳ ಮತ್ತು ಎರ್ನಾಕುಲಂನಲ್ಲಿ ಹರಿಯುವ ನದಿಗಳು ನೀರಿನ ಮಟ್ಟವೂ ಏರಿಕೆಯಾಗುವ ಸಂಭವವಿದ್ದು, ಮಳೆ ಕಡಿಮೆಯಾದಂತೆ ಇಳಿಕೆಯಾಗಲಿದೆ ಎನ್ನಲಾಗಿದೆ. 

579 ಮರಗಳು ಧರೆಗೆ:
ಚಂಡಮಾರುತದಿಂದಾಗಿ 1,200 ಮಂದಿ ತೊಂದರೆಗೆ ಸಿಲುಕಿದ್ದು, ಅವರನ್ನೆಲ್ಲ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಮಿಳುನಾಡು ಸಿಎಂ ಪಳನಿಸ್ವಾಮಿ ಹೇಳಿದ್ದಾರೆ. ಕನ್ಯಾಕುಮಾರಿ ಜಿಲ್ಲೆಯಲ್ಲಿ ಅತ್ಯಧಿಕ ಹಾನಿಯಾಗಿದೆ. ಸ್ಥಳೀಯರು ಕೂಡ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಸಮರೋಪಾದಿಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ. ತಿರುನಲ್ವೇಲಿ ಮತ್ತು ಕನ್ಯಾಕುಮಾರಿಯಲ್ಲಿ 579 ಮರಗಳು ಧರೆಗುರುಳಿದ್ದು, ಆ ಪೈಕಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಿದ್ದಿದ್ದ 329 ಮರಗಳನ್ನು ತೆರವುಗೊಳಿಸಲಾಗಿದೆ. 

ನೌಕಾ ಹಡಗುಗಳ ನಿಯೋಜನೆ :

ತಮಿಳುನಾಡು ಮತ್ತು ಕೇರಳದಲ್ಲಿ ಬೃಹತ್ ಹಾನಿ ಉಂಟುಮಾಡಿದ ಸೈಕ್ಲೋನ್ ಒಖಿ, ಈಗ ಲಕ್ಷದ್ವೀಪ ದ್ವೀಪಗಳ ಕಡೆಗೆ ಸಾಗುತ್ತಿರುವ ಹಿನ್ನೆಲೆಯಲ್ಲಿ ಪಾರುಗಾಣಿಕಾ ಕಾರ್ಯಾಚರಣೆಗಳಿಗೆ ಹಲವಾರು ನೌಕಾ ಹಡಗುಗಳನ್ನು ನಿಯೋಜಿಸಲಾಗಿದೆ. ಆರು ಯುದ್ಧನೌಕೆಗಳು ಮತ್ತು ಎರಡು ಕರಾವಳಿ ಸಿಬ್ಬಂದಿ ಹಡಗುಗಳನ್ನು ಹೆಚ್ಚುವರಿ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ.

ಸಂಕಷ್ಟದಲ್ಲಿ ಮೀನುಗಾರರು:
ಇದೇ ವೇಳೆ, 38ರಷ್ಟು ಮೀನುಗಾರಿಕಾ ದೋಣಿಗಳು ಸಮುದ್ರದ ಮಧ್ಯೆ ಸಿಲುಕಿಕೊಂಡಿದ್ದು, ಅದರಲ್ಲಿರುವವರಿಗೆ ನೌಕಾಪಡೆಯು ಆಹಾರ ಮತ್ತಿತರ ಪರಿಹಾರ ಕಿಟ್‌ಗಳನ್ನು ಒದಗಿಸಿದೆ. ಜೊತೆಗೆ, ಇತರೆ ದೋಣಿಗಳ ಶೋಧ ಕಾರ್ಯವನ್ನೂ ನಡೆಸಲಾಗುತ್ತಿದ್ದು, ಒಟ್ಟು ಎಷ್ಟು ಮಂದಿ ಬೆಸ್ತರು ನೀರಿಗಿಳಿದಿದ್ದರು ಎಂಬ ಬಗ್ಗೆ ನಿಖರ ಮಾಹಿತಿಯಿಲ್ಲ ಎಂದು ಸರ್ಕಾರ ಹೇಳಿದೆ.

ಶಾಲೆಗಳಿಗೆ ರಜೆ ಘೋಷಣೆ :
ದಕ್ಷಿಣ ತಮಿಳುನಾಡಿನಲ್ಲಿ ಮಳೆಯು ಸಾಮಾನ್ಯ ಜೀವನವನ್ನು ಮುಂದುವರೆಸುತ್ತಿದ್ದು, ಶುಕ್ರವಾರ ಕನ್ಯಾಕುಮಾರಿಯೂ ಸೇರಿದಂತೆ ಐದು ಜಿಲ್ಲೆಗಳಲ್ಲಿ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ.

ರೈಲುಗಳ ವಿಳಂಬ:
ಕನ್ಯಾಕುಮಾರಿ ಮತ್ತು ನಾಗರ್ಕೋಯಿಲ್ನಲ್ಲಿ ಕೆಲವು ರೈಲು ಸೇವೆಗಳು ರದ್ದುಗೊಂಡಿವೆ ಎಂದು ದಕ್ಷಿಣ ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ. 

ಲಕ್ಷದ್ವೀಪ ದ್ವೀಪಗಳು ಹಿಟ್: 
ಕಲ್ಪೆನಿ ಮತ್ತು ಮಿನಿಕೊಯ್ ದ್ವೀಪಗಳು ಚಂಡಮಾರುತದಿಂದ ತೀವ್ರವಾಗಿ ಹಾನಿಗೊಳಗಾಗಿದ್ದು ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಲಕ್ಷದ್ವೀಪ ಸಂಸದ ಪಿ. ಪಿ. ಮೊಹಮ್ಮದ್ ಫೈಝಾಲ್ ಹೇಳಿದ್ದಾರೆ. 

ವಿರೋಧಪಕ್ಷಗಳ ಆರೋಪ :
ಆಡಳಿತಾರೂಢ ಎಲ್‌ಡಿಎಫ್ ವಿರುದ್ಧ ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಮತ್ತು ಬಿಜೆಪಿ ಕಿಡಿಕಾರಿದ್ದು, ಸೂಕ್ತ ಮುಂಜಾಗರೂಕತಾ ಕ್ರಮ ಕೈಗೊಂಡಿಲ್ಲ ಹಾಗೂ ರಕ್ಷಣಾ ಕಾರ್ಯಾಚರಣೆ ಬಗ್ಗೆಯೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿವೆ.

Trending News