SBI ಗ್ರಾಹಕರೇ ಗಮನಿಸಿ; ಇಂದಿನಿಂದ ಬದಲಾಗಲಿದೆ ಈ ನಿಯಮ!

ಬ್ಯಾಂಕ್ ಮಾಸಿಕ ಸರಾಸರಿ ಸಮತೋಲನವನ್ನು (MAB) ನಿರ್ವಹಿಸದಿದ್ದರೆ ವಿಧಿಸುವ ದಂಡವನ್ನು ಶೇ. 80ರಷ್ಟು ಕಡಿಮೆಗೊಳಿಸಲಾಗುತ್ತದೆ. ಇದಲ್ಲದೆ, ಆನ್‌ಲೈನ್ ವಹಿವಾಟು ನಡೆಸುವವರಿಗೆ ನೆಫ್ಟ್(NEFT) ಮತ್ತು ಆರ್‌ಟಿಜಿಎಸ್(RTGS) ವಹಿವಾಟುಗಳು ಅಗ್ಗವಾಗಲಿವೆ.

Last Updated : Oct 1, 2019, 09:17 AM IST
SBI ಗ್ರಾಹಕರೇ ಗಮನಿಸಿ; ಇಂದಿನಿಂದ ಬದಲಾಗಲಿದೆ ಈ ನಿಯಮ! title=

ನವದೆಹಲಿ: ಸರ್ಕಾರಿ ಸ್ವಾಮ್ಯದ ದೇಶದ ಅತಿದೊಡ್ಡ ಬ್ಯಾಂಕಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಇಂದಿನಿಂದ(ಅಕ್ಟೋಬರ್ 1) ಕೆಲವು ನಯಾಯಮಗಳಲ್ಲಿ ಬದಲಾವಣೆಯಾಗಿದ್ದು, ಬ್ಯಾಂಕಿನ 32 ಕೋಟಿ ಖಾತೆದಾರರ ಮೇಲೆ ಪರಿಣಾಮ ಬೀರಲಿದೆ.

ಈ ಬದಲಾವಣೆಗಳ ಅಡಿಯಲ್ಲಿ, ಬ್ಯಾಂಕ್ ಮಾಸಿಕ ಸರಾಸರಿ ಸಮತೋಲನವನ್ನು (MAB) ನಿರ್ವಹಿಸದಿದ್ದರೆ ವಿಧಿಸುವ ದಂಡವನ್ನು ಶೇ. 80ರಷ್ಟು ಕಡಿಮೆಗೊಳಿಸಲಾಗುತ್ತದೆ. ಇದಲ್ಲದೆ, ಆನ್‌ಲೈನ್ ವಹಿವಾಟು ನಡೆಸುವವರಿಗೆ ನೆಫ್ಟ್(NEFT) ಮತ್ತು ಆರ್‌ಟಿಜಿಎಸ್(RTGS) ವಹಿವಾಟುಗಳು ಅಗ್ಗವಾಗಲಿವೆ.

ಮಿನಿಮಮ್ ಬ್ಯಾಲೆನ್ಸ್ 3000 ರೂ. ನಿಗದಿ
ಈಗ ನಿಮ್ಮ ಖಾತೆಯು ಮೆಟ್ರೋ ನಗರ ಮತ್ತು ನಗರ ಪ್ರದೇಶದ ಶಾಖೆಯಲ್ಲಿದ್ದರೆ, ಸರಾಸರಿ ತಿಂಗಳ ಬ್ಯಾಲೆನ್ಸ್ (ಎಎಂಬಿ) ಕ್ರಮವಾಗಿ 5,000 ಮತ್ತು 3,000 ರೂ. ಇರಬೇಕೇಂಬ ನಿಯಮವನ್ನು ಈ ಹಿಂದೆ ಜಾರಿಯಲ್ಲಿತ್ತು. ಆದರೆ, ಇಂದಿನಿಂದ ಈ ನಿಯಮದಲ್ಲಿ ಬದಲಾವಣೆ ಆಗಲಿದ್ದು, ಮಹಾನಗರ ಮತ್ತು ಅರೆ ಪಟ್ಟಣಗಳು ಎರಡರಲ್ಲಿಯೂ ಸರಾಸರಿ ತಿಂಗಳ ಬ್ಯಾಲೆನ್ಸ್ ಮೊತ್ತವನ್ನು 3,000 ರೂ.ಗಳಿಗೆ ಇಳಿಸಲಾಗಿದೆ. 

ದಂಡ ಶುಲ್ಕದಲ್ಲಿ ಇಳಿಕೆ 
ನಗರ ಪ್ರದೇಶದಲ್ಲಿ ವಾಸಿಸುವ ಗ್ರಾಹಕರು ತಮ್ಮ ಖಾತೆಯಲ್ಲಿ ಸರಾಸರಿ ತಿಂಗಳ ಬ್ಯಾಲೆನ್ಸ್ 3000 ರೂ ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ ಮತ್ತು ಬ್ಯಾಲೆನ್ಸ್ ಶೇ.75ಕ್ಕಿಂತ ಕಡಿಮೆಯಿದ್ದರೆ, ಅವರು ಜಿಎಸ್‌ಟಿಯೊಂದಿಗೆ 15 ರೂ. ದಂಡ ಶುಲ್ಕ ನಿಗದಿ ಮಾಡಲಾಗಿದೆ. ಈ ಹಿಂದೆ 80 ರೂ. ಮತ್ತು ಜಿಎಸ್‌ಟಿ ನಿಗದಿ ಮಾಡಲಾಗಿತ್ತು. ಅದೇ ರೀತಿ, ಬ್ಯಾಲೆನ್ಸ್ ಶೇ.50 ರಿಂದ 75 ರಷ್ಟು ಕಡಿಮೆಯಿದ್ದರೆ ಈ ಹಿಂದೆ 60 ರೂ. ಮತ್ತು ಜಿಎಸ್ಟಿ ಪಾವತಿಸಬೇಕಿತ್ತು. ಆದರೀಗ 12 ರೂ. ಮತ್ತು ಜಿಎಸ್ಟಿ ಪಾವತಿಸಬೇಕಾಗುತ್ತದೆ.

ಈ ಖಾತೆಗಳು ಎಎಮ್‌ಬಿಯಿಂದ ಹೊರಗೆ
ಪ್ರಸ್ತುತ ಎಸ್‌ಬಿಐನಲ್ಲಿ ಸ್ಯಾಲರಿ ಅಕೌಂಟ್, ಮೂಲ ಉಳಿತಾಯ ಬ್ಯಾಂಕ್ ಠೇವಣಿ, ಪಿಎಂ ಜನ ಧನ್ ಯೋಜನೆ ಖಾತೆಗಳನ್ನು ಎಎಮ್‌ಬಿಯಲ್ಲಿ ಸೇರಿಸಲಾಗಿಲ್ಲ. ಆದರೆ ಇಂದಿನಿಂದ ನೋ ಫ್ರಿಲ್ ಖಾತೆ, ಪೆಹಲಾ ಕದಂ ಅಥವಾ ಪೆಹಲಾ ಉಡಾನ್ ಖಾತೆ, ಅಪ್ರಾಪ್ತ ವಯಸ್ಕರು, ಪಿಂಚಣಿದಾರರು, ಹಿರಿಯ ನಾಗರಿಕರು ಮತ್ತು 21 ವರ್ಷ ವಯಸ್ಸಿನ ವಿದ್ಯಾರ್ಥಿಗಳ ಖಾತೆಗಳು ಎಎಮ್‌ಬಿಯಿಂದ ಹೊರಗುಳಿಯಲಿವೆ.

NEFT / RTGS ಅಗ್ಗ
ಎಸ್‌ಬಿಐನಲ್ಲಿ NEFT / RTGS ವಹಿವಾಟುಗಳಿಗೆ ವಿಧಿಸುತ್ತಿದ್ದ ಶುಲ್ಕವನ್ನು ಕಡಿಮೆ ಮಾಡಲಾಗಿದೆ. ಈಗ, ಶಾಖೆಗಳಲ್ಲಿ 10 ಸಾವಿರ ರೂಪಾಯಿಗಳವರೆಗಿನ ವಹಿವಾಟಿಗೆ 2 ರೂಪಾಯಿಗಳನ್ನು, ಒಂದು ಲಕ್ಷದಿಂದ ಎರಡು ಲಕ್ಷದವರೆಗೆ NEFT ಗೆ 12 ರೂಪಾಯಿಗಳನ್ನು ವಿಧಿಸಲಾಗುತ್ತದೆ. ಜೊತೆಗೆ NEFT ನಲ್ಲಿ ಎರಡು ಲಕ್ಷ ರೂಪಾಯಿಗಳಿಗಿಂತ ಹೆಚ್ಚು ವರ್ಗಾವಣೆಗೆ 20 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ.. ಅಂತೆಯೇ, 2 ಲಕ್ಷದಿಂದ 5 ಲಕ್ಷದವರೆಗಿನ ಆರ್‌ಟಿಜಿಎಸ್‌ಗೆ 20 ರೂ. ಮತ್ತು 5 ಲಕ್ಷಕ್ಕಿಂತ ಹೆಚ್ಚಿನ ಜಿಎಸ್‌ಟಿ ಮತ್ತು ಆರ್‌ಟಿಜಿಎಸ್‌ಗೆ 40 ರೂ. ಮತ್ತು ಜಿಎಸ್‌ಟಿ ಪಾವತಿಸಬೇಕಾಗುತ್ತದೆ.

10 ರಿಂದ 12 ಎಟಿಎಂ ವಹಿವಾಟುಗಳು ಉಚಿತ
ಇಂದಿನಿಂದ ಎಸ್‌ಬಿಐ ಎಟಿಎಂ ಶುಲ್ಕದಲ್ಲಿ ಸಹ ಬದಲಾವಣೆಯಾಗಲಿದೆ.  ಮೆಟ್ರೋ ಸಿಟಿ ಎಟಿಎಂಗಳಿಂದ ಗ್ರಾಹಕರು 10 ಉಚಿತ ವಹಿವಾಟು(ನಗದು ಹಿಂಪಡೆಯುವಿಕೆ) ಮಾಡಬಹುದು. ಇತರ ನಗರಗಳ ಎಟಿಎಂಗಳಿಂದ 12 ಉಚಿತ ವಹಿವಾಟು ನಡೆಸಬಹುದು. ಎಲ್ಲಾ ನಗರಗಳಲ್ಲಿ ಸಂಬಳ ಖಾತೆಯೊಂದಿಗೆ ನೀವು ಎಸ್‌ಬಿಐ ಎಟಿಎಂಗಳಲ್ಲಿ ಹೆಚ್ಚಿನ ವಹಿವಾಟು ನಡೆಸಬಹುದು.

ಇವುಗಳಿಗೆ ಚೆಕ್‌ಬುಕ್ ಉಚಿತ
ಉಳಿತಾಯ ಖಾತೆ ಹೊಂದಿರುವವರಿಗೆ ಆರ್ಥಿಕ ವರ್ಷದ ಆರಂಭದಲ್ಲಿ 10 ಚೆಕ್‌ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಇದರ ಬಳಿಕ, ಹೆಚ್ಚುವರಿ ಚೆಕ್ ಬುಕ್ ಅಗತ್ಯವಿರುವವರು 40 ರೂ. ಪಾವತಿಸಿ ಪಡೆಯಬೇಕಾಗುತ್ತದೆ. ಅಲ್ಲದೆ, 25 ಚೆಕ್ ಲೀಫ್ ಇರುವ ಚೆಕ್ ಬುಕ್ ಗೆ 75 ರೂ. ಮತ್ತು ಜಿಎಸ್ಟಿ ಯನ್ನು ಬ್ಯಾಂಕ್ ವಿಧಿಸಲಿದೆ. ಹಿರಿಯ ನಾಗರಿಕರು ಮತ್ತು ಸ್ಯಾಲರಿ ಅಕೌಂಟ್ ಹೊಂದಿರುವವರಿಗೆ ಚೆಕ್ ಬುಕ್ ಉಚಿತವಾಗಿರುತ್ತದೆ.

Trending News