ನವ ದೆಹಲಿ: ಸುಪ್ರೀಂಕೋರ್ಟ್ ನಲ್ಲಿ ರೋಹಿಂಗ್ಯಾ ಮುಸ್ಲಿಮರ ಗಡಿಪಾರು ಕುರಿತ ಪ್ರಕರಣಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ ರೋಹಿಂಗ್ಯಾ ಮುಸ್ಲಿಮರು ಪಾಕಿಸ್ತಾನದೊಂದಿಗೆ ಮತ್ತು ಐಸಿಎಸ್ ಭಯೋತ್ಪಾದನೆ ಸಂಘಟನೆಯೊಂದಿಗೆ ಸಂಪರ್ಕವನ್ನು ಹೊಂದಿದೆ ಎಂದು ಅಫಿಡೆವಿಟ್ ನೀಡಿದೆ. ಇಂತಹ ಪರಿಸ್ಥಿತಿಯಲ್ಲಿ, ಅವರಿಗೆ ಆಶ್ರಯ ನೀಡುವುದರಿಂದ ದೇಶದ ಭದ್ರತೆಗೆ ಅಪಾಯ ಉಂಟಾಗಲಿದೆ ಎಂದು ಕೇಂದ್ರ ಸರ್ಕಾರ ರೋಹಿಂಗ್ಯಾ ನಿರಾಶ್ರಿತರ ಬಗ್ಗೆ ಗಂಭೀರ ಆರೋಪ ಮಾಡಿದೆ.
ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂಕೋರ್ಟ್ ನಲ್ಲಿ ಅಫಿಡೆವಿಟ್ ಸಲ್ಲಿಸುವ ಮೂಲಕ ರೋಹಿಂಗ್ಯಾ ಮುಸ್ಲಿಮರಿಂದ ದೇಶದ ಭದ್ರತೆಗೆ ಅಪಾಯವಿದೆ ಎಂದು ತಿಳಿಸಿದೆ. ರೋಹಿಂಗ್ಯ ಮುಸ್ಲಿಮರು ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಅಫಿಡವಿಟ್ ಹೇಳುತ್ತದೆ. ಅದಲ್ಲದೆ ರೋಹಿಂಗ್ಯ ಮುಸ್ಲಿಮರು ಐಸಿಸ್ನೊಂದಿಗೆ ಕೂಡ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ವಿವರಣೆಯನ್ನು ನೀಡಲು ಅಕ್ಟೋಬರ್ 3 ರವರೆಗೂ ಕಾಲಾವಕಾಶ ನೀಡಬೇಕೆಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಮನವಿ ಮಾಡಿದೆ.
ಸರ್ವೋಚ್ಚ ನ್ಯಾಯಾಲಯಕ್ಕೆ ನೀಡಿದ ಮಾಹಿತಿಯ ಪ್ರಕಾರ, ಭಾರತದಲ್ಲಿ ಅಕ್ರಮ ರೋಹಿಂಗ್ಯಾ ನಿರಾಶ್ರಿತರ ಸಂಖ್ಯೆ 40 ಸಾವಿರಕ್ಕೂ ಹೆಚ್ಚಾಗಿದೆ. ಆದಾಗ್ಯೂ, ಯುಎನ್ ಡಾಕ್ಯುಮೆಂಟ್ ಹೊಂದಿರುವ ರೋಹಿಂಗ್ಯ ಮುಸ್ಲಿಮರನ್ನು ದೇಶದಿಂದ ಹೊರಹಾಕುವುದಿಲ್ಲವೆಂದು ಕೇಂದ್ರ ಸರ್ಕಾರ ಹೇಳಿದೆ.
ದೇಶದ ಗುಪ್ತಚರ ಸಂಸ್ಥೆಗಳ ವರದಿಯನ್ನು ಉಲ್ಲೇಖಿಸಿ ರೋಹಿಂಗ್ಯಾ ಮುಸ್ಲಿಮರು ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗಿದೆ. ಅವರು ಜಮ್ಮು ಮತ್ತು ಕಾಶ್ಮೀರ, ದೆಹಲಿ, ಹೈದರಾಬಾದ್ ಮತ್ತು ಮೇವಾಟ್ನಲ್ಲಿ ಸಕ್ರಿಯರಾಗಿದ್ದಾರೆ ಎಂದು ಹೇಳಲಾಗಿದೆ.