ಕೇಂದ್ರ ಬಜೆಟ್ 2018 : ಆಡಳಿತ, ವಿಪಕ್ಷ ನಾಯಕರ ಪ್ರತಿಕ್ರಿಯೆಗಳು

ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಮಾಡಿದ ಪ್ರಸ್ತಾಪಗಳಿಗೆ NDA ಮೈತ್ರಿಕೂಟಗಳಿಂದ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾದರೆ, ಸಾಮಾನ್ಯ ಜನರ ನಿರೀಕ್ಷೆಗಳನ್ನು ಪೂರೈಸಲು ವಿಫಲವಾದ ಕಾರಣ ವಿರೋಧ ಪಕ್ಷಗಳ ನಾಯಕರು ಅದನ್ನು ತೀವ್ರವಾಗಿ ಟೀಕಿಸಿದ್ದಾರೆ. 

Last Updated : Feb 1, 2018, 06:11 PM IST
  • 2018-19 ಕೇಂದ್ರ ಬಜೆಟ್ ಬಡವರ ಸ್ನೇಹಿ, ರೈತಸ್ನೇಹಿ, ವ್ಯವಹಾರ ಸ್ನೇಹಿ ಮತ್ತು ಅಭಿವೃದ್ಧಿ ಸ್ನೇಹಿ - ನರೇಂದ್ರ ಮೋದಿ
  • ಈ ಬಜೆಟ್ ಕೇವಲ ಅಲಂಕಾರಿಕ ಎನಿಸಿದೆ- ವೀರಪ್ಪಮೊಯ್ಲಿ, ಕಾಂಗ್ರೆಸ್ ನಾಯಕ
  • ರೈತರಿಗೆ ಮತ್ತು ಸಮಾಜದ ಇತರ ಅಂಚಿನಲ್ಲಿರುವ ವಿಭಾಗಗಳ ಅಭಿವೃದ್ಧಿಗೆ ಬಜೆಟ್ ನಲ್ಲಿ ತೇಪೆ ಹಚ್ಚುವ ಕಾರ್ಯವನ್ನು ನಡೆದಿದೆ - ಮನೀಶ್ ತಿವಾರಿ
ಕೇಂದ್ರ ಬಜೆಟ್ 2018 : ಆಡಳಿತ, ವಿಪಕ್ಷ ನಾಯಕರ ಪ್ರತಿಕ್ರಿಯೆಗಳು title=

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕೊನೆಯ ಪೂರ್ಣ ಕೇಂದ್ರ ಬಜೆಟ್ 2018-19 ಅನ್ನು ಸಂಸತ್ತಿನಲ್ಲಿ ಪ್ರಸ್ತುತಪಡಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ಈ ಬಾರಿಯ ಬಜೆಟ್ ನಿಂದಾಗಿ ದೇಶವು 2.5 ಟ್ರಿಲಿಯನ್ ಡಾಲರ್ನಿಂದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಪಡೆದುಕೊಳ್ಳಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಇಂದು ಅವರು ಪ್ರಸ್ತುತಪಡಿಸಿದ ಬಜೆಟ್ ಭಾಷಣವು ಶಿಕ್ಷಣ, ಆರೋಗ್ಯ ಮತ್ತು ಕೃಷಿ ವಿಷಯಗಳ ಮೇಲೆ ಹೆಚ್ಚು ಕೇಂದ್ರೀಕರಿಸಿತ್ತು. "ನಾವು ಇದೀಗ 2.5 ಲಕ್ಷ ಕೋಟಿ ಡಾಲರ್ ಆರ್ಥಿಕತೆ ಹೊಂದಿದ್ದು, ಶೇ.8 ರಷ್ಟು ಬೆಳವಣಿಗೆ ಸಾಧಿಸುವ ಹಾದಿಯಲ್ಲಿ ನಾವು ಸದೃಢವಾಗಿರುತ್ತೇವೆ" ಎಂದು ಜೇಟ್ಲಿ ಹೇಳಿದರು.

2017-18 ರ ದ್ವಿತೀಯಾರ್ಧದಲ್ಲಿ ಶೇ. 7.2 ರಿಂದ ಶೇ.7.5 ವರೆಗೆ ಅಭಿವೃದ್ಧಿ ಹೊಂದುವ ನಿರೀಕ್ಷೆಯಲ್ಲಿದ್ದು, ವ್ಯಾಪಾರವನ್ನು ಸುಲಭಗೊಳಿಸುವುದರಿಂದ, ನಮ್ಮ ಸರ್ಕಾರವು ಬಡ ಮತ್ತು ಮಧ್ಯಮ ವರ್ಗದವರಿಗೆ ಜೀವನವನ್ನು ಸರಾಗಗೊಳಿಸುವಂತೆ ಮಾಡಲಿದೆ ಎಂದು ಅವರು ಹೇಳಿದರು.

ಮೈಕ್ರೋ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್ಎಂಇ) ಉತ್ತೇಜಿಸಲು ಯೋಜನೆಯನ್ನು 2018-19ರಲ್ಲಿ 3 ಲಕ್ಷ ಕೋಟಿ ರೂ.ಗೆ ಸಾಲ ನೀಡುವ ಸಾಮರ್ಥ್ಯವನ್ನು ಹೆಚ್ಚಿಸಲು ಯೋಜಿಸಲಾಗಿದೆ ಎಂದು ಅವರು ಹೇಳಿದರು.

ಇನ್ನೂ, ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಮಾಡಿದ ಪ್ರಸ್ತಾಪಗಳಿಗೆ NDA ಮೈತ್ರಿಕೂಟಗಳಿಂದ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾದರೆ, ಸಾಮಾನ್ಯ ಜನರ ನಿರೀಕ್ಷೆಗಳನ್ನು ಪೂರೈಸಲು ವಿಫಲವಾದ ಕಾರಣ ವಿರೋಧ ಪಕ್ಷಗಳ ನಾಯಕರು ಅದನ್ನು ತೀವ್ರವಾಗಿ ಟೀಕಿಸಿದ್ದಾರೆ. 

ಕೇಂದ್ರ ಸರ್ಕಾರ ಮಂಡಿಸಿರುವ 2016-17ನೇ ಸಾಲಿನ ಬಜೆಟ್ ಕುರಿತು ಆಡಳಿತ ವಿಪಕ್ಷಗಳ ಪ್ರತಿಕ್ರಿಯೆಗಳು ಈ ರೀತಿ ಇದೆ.

ನರೇಂದ್ರ ಮೋದಿ, ಪ್ರಧಾನಮಂತ್ರಿ
"ಈ ಬಾರಿಯ ಕೇಂದ್ರ ಬಜೆಟ್ 2018-19 ಜನಸಾಮಾನ್ಯರ ಬದುಕನ್ನು ಸುಲಭವಾಗಿಸುತ್ತದೆಯಲ್ಲದೆ ಎಲ್ಲ ವ್ಯವಹಾರಗಳನ್ನು ಸರಳೀಕರಣಗೊಳಿಸಲಿದೆ. ಅಲ್ಲದೆ ಈ ಬಜೆಟ್ 1.2 ಶತಕೋಟಿ ಭಾರತೀಯರ ಭರವಸೆಯನ್ನು ಬಲಪಡಿಸಲಿದ್ದು, ರೈತ ಪರ, ಜನ ಸಾಮಾನ್ಯ ಪರ, ವ್ಯವಹಾರ ಸ್ನೇಹಿ ಮತ್ತು ಅಭಿವೃದ್ಧಿ ಸ್ನೇಹಿ ಬಜೆಟ್ ಇದಾಗಿದೆ". 

ಪಿಯುಶ್ ಗೋಯಲ್, ಕೇಂದ್ರ ರೈಲ್ವೇ ಮಂತ್ರಿ
"ಸಮಾಜದ ಪ್ರತಿಯೊಂದು ವಿಭಾಗಕ್ಕೂ, ಅದರಲ್ಲೂ ವಿಶೇಷವಾಗಿ ಬಡವರು, ರೈತರು ಮತ್ತು ಆರೋಗ್ಯ ಸೇವೆಗಳ ಮೇಲೆ ಗಮನ ಕೇಂದ್ರೀಕರಿಸುವ ಸಮತೋಲಿತ ಬಜೆಟ್ ಇದಾಗಿದ್ದು, ದೇಶದ ಆರ್ಥಿಕತೆಯಲ್ಲಿಯೂ ಅಭಿವೃದ್ಧಿ ಸಾಧಿಸಲಿದೆ. ನಾನು ಪ್ರಧಾನಿ ಮೋದಿ ಮತ್ತು ಹಣಕಾಸು ಸಚಿವರನ್ನು ಈ ಉತ್ತಮ ಬಜೆಟ್ ನೀಡಿದ್ದಕ್ಕಾಗಿ ಅಭಿನಂದಿಸುತ್ತೇನೆ".

ಯೋಗಿ ಆದಿತ್ಯನಾಥ್, ಮುಖ್ಯಮಂತ್ರಿ, ಉತ್ತರಪ್ರದೇಶ 
'' ದೇಶದ ಬಡವರಿಗೆ, ಗ್ರಾಮೀಣ ಜನರಿಗೆ, ರೈತರಿಗೆ, ಹಿರಿಯ ನಾಗರಿಕರಿಗೆ ಅನುಕೂಲವಾಗುವಂತಹ ಬಜೆಟ್ ಇಂದು ಮಂಡನೆಯಾಗಿದೆ. ನಾನು ಪ್ರಧಾನಿ ನರೆನ್ದ್ರ್ತ ಮೋದಿ ಅವರಿಗೆ ಇದಕ್ಕಾಗಿ ಅಭಿನಂದಿಸುತ್ತೇನೆ".

ಪಿ. ಚಿದಂಬರಂ, ಕಾಂಗ್ರೆಸ್ ನಾಯಕ

"ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಆರ್ಥಿಕ ಬೆಳವಣಿಗೆ ದರದಲ್ಲಿ "ಗಂಭೀರ ಪರಿಣಾಮಗಳನ್ನು" ಎದುರಿಸಲಿದ್ದಾರೆ. 2017-18ರಲ್ಲಿ ಹಣಕಾಸಿನ ಕೊರತೆಯ ಮಿತಿಯ 3.2 ಶೇ. ವನ್ನು ಉಲ್ಲಂಘಿಸಲಾಗಿದೆ ಮತ್ತು ಈಗ ಶೇ. 3.5 ರಷ್ಟು ಅಂದಾಜಿಸಲಾಗಿದೆ. ಈ ವೈಫಲ್ಯವು ಗಂಭೀರವಾದ ಪರಿಣಾಮಗಳನ್ನು ಬೀರಲಿದೆ".

ಹೆಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
''ಹಣಕಾಸು ಸಚಿವಾಲಯವು ರೈತರ ಅಭಿವೃದ್ಧಿಗಾಗಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಪ್ರಯತ್ನಿಸಿದೆ. ಆದರೆ ರೈತರು ಮತ್ತು ಗ್ರಾಮೀಣ ಜನರ ಸಮಸ್ಯೆಗಳು ಅಪಾರವಾಗಿದ್ದು, ಈ ಬಜೆಟ್ ನಲ್ಲಿ ತೆಗೆದುಕೊಂಡಿರುವ ಕ್ರಮಗಳು ಪರ್ಯಾಯವಾಗಿಲ್ಲ".

ವೀರಪ್ಪ ಮೊಯ್ಲಿ, ಕಾಂಗ್ರೆಸ್ ಹಿರಿಯ ನಾಯಕ
''ಈ ಬಜೆಟ್ ಕೇವಲ ಅಲಂಕಾರಿಕ ಎನಿಸಿದೆ. ಆದರೆ, ನಾವು `ಅಚ್ಚೆ ದಿನ್'ಗಾಗಿ ಕಾಯುತ್ತಿದ್ದೇವೆ.

ಮನೀಶ್ ತಿವಾರಿ, ಕಾಂಗ್ರೆಸ್ ನಾಯಕ
ಸರ್ಕಾರವು ರೈತರಿಗೆ ಮತ್ತು ಸಮಾಜದ ಇತರ ಅಂಚಿನಲ್ಲಿರುವ ವಿಭಾಗಗಳ ಅಭಿವೃದ್ಧಿಗೆ ಬಜೆಟ್ ನಲ್ಲಿ ತೇಪೆ ಹಚ್ಚುವ ಕಾರ್ಯವನ್ನು ಮಾಡಿದೆ. ಆದರೆ ಇದು ಈ ಸಂದರ್ಭಕ್ಕೆ ತೀರಾ ಕಡಿಮೆಯಾಗಿದ್ದು, ಸರಿಹೊಂದದ ಮತ್ತು ಸೂಕ್ತವಾದ ಸಮಯಕ್ಕೆ ತೀರಾ ಕಡಿಮೆ ಮತ್ತು ಸಂಪೂರ್ಣವಾಗಿ ಅಕಾಲಿಕವಾಗಿದೆ".

ಸೀತಾರಾಮ್ ಯೆಚೂರಿ, ಸಿಪಿಐ-ಎಂ
''ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಯೂನಿಯನ್ ಬಜೆಟ್ 2018-19 ನೈಜ ಸತ್ಯಗಳಿಗೆ ಅಸಂಬದ್ಧವಾದುದು".

ಅರವಿಂದ ಕೇಜ್ರಿವಾಲ್, ಮುಖ್ಯಮಂತ್ರಿ, ದೆಹಲಿ
"ನಾನು ರಾಷ್ಟ್ರ ರಾಜಧಾನಿಗೆ ಮೂಲಸೌಕರ್ಯಗಳಿಗಾಗಿ ಆರ್ಥಿಕ ಬೆಂಬಲವನ್ನು ನಿರೀಕ್ಷಿಸಿದ್ದೆ. ಆದರೆ, ಕೇಂದ್ರವು ದೆಹಲಿಯ ಮೇಲೆ ಮಲತಾಯು ಧೋರಣೆಯನ್ನು ಮುಂದುವರೆಸಿರುವುದು ನಿರಾಸೆ ತಂದಿದೆ" ಎಂದು ಟ್ವೀಟ್ ಮಾಡಿದ್ದಾರೆ.

ಮಾಯಾವತಿ, ಮಾಜಿ ಮುಖ್ಯಮಂತ್ರಿ, ಉತ್ತರಪ್ರದೇಶ 
`ಇದು ತಂತ್ರದ ಬಜೆಟ್' ಎಂದು ಕರೆದಿರುವ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ, ಕಳೆದ ವರ್ಷದಂತೆ ಈ ಬಜೆಟ್ ಕೈಗಾರಿಕೊದ್ಯಮಿಗಳ ಪರವಾದ ಮತ್ತು ಬಡಜನ ವಿರೋಧಿಯಾಗಿದೆ. ಉದಾತ್ತ ಭರವಸೆಗಳನ್ನು ನೀಡುವ ಬದಲು ನರೇಂದ್ರ ಮೋದಿ ಅವರು `ಅಚ್ಚೇ ದಿನ್' ಯಾವಾಗ ಬರುತ್ತದೆ ಎಂಬುದನ್ನು ವಿವರಿಸಬೇಕಿದೆ" ಎಂದು ಟೀಕಿಸಿದ್ದಾರೆ. 

ಅಖಿಲೇಶ್ ಯಾದವ್, ಅಧ್ಯಕ್ಷ, ಸಮಾಜವಾದಿ ಪಕ್ಷ 
"ಈ ಬಜೆಟ್ ಬಡವರು, ರೈತರು ಮತ್ತು ಕಾರ್ಮಿಕ ವರ್ಗದವರಿಗಷ್ಟೇ ಅಲ್ಲದೆ ನಿರುದ್ಯೋಗಿ ಯುವಕರಿಗೂ  ನಿರಾಸೆ ಮೂಡಿಸಿದೆ. ಇದರಿಂದ ವ್ಯಾಪಾರಿಗಳು, ಮಹಿಳೆಯರು, ಸೇವಾ ವರ್ಗ ಮತ್ತು ಸಾಮಾನ್ಯ ಜನರಿಗೆ ನಿರಾಸೆಯಾಗಿದೆ. ಇದು ಒಂದು ವಿನಾಶಕಾರಿ ಬಜೆಟ್ ಆಗಿದ್ದು, ಉದಾರವಾದಿ ಸರ್ಕಾರವು ಜನರ ಸಮಸ್ಯೆಗಳನ್ನು ನಿರ್ಲಕ್ಷಿಸಿದೆ. ಇದಕ್ಕೆ ಜನರು ಸೂಕ್ತ ಉತ್ತರವನ್ನು ನೀಡುತ್ತಾರೆ". 

Trending News