ಲಕ್ನೋ: ಉನ್ನಾವೋ ಅತ್ಯಾಚಾರ ಪ್ರಕರಣದ ಆರೋಪಿಯಾದ ಉತ್ತರಪ್ರದೇಶ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರನ್ನು ಪಕ್ಷದಿಂದ ಉಚ್ಛಾಟಿಸಿ ಬಿಜೆಪಿ ಆದೇಶ ಹೊರಡಿಸಿದೆ.
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಭದ್ರತೆಗಾಗಿ ನೇಮಕಗೊಂಡ ಇಬ್ಬರು ಮಹಿಳಾ ಪೊಲೀಸರು ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಯನ್ನೂ ಸಹ ಉತ್ತರ ಪ್ರದೇಶ ಆಡಳಿತ ಅಮಾನತುಗೊಳಿಸಿದೆ.
ಉನ್ನಾವೊ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಬಂಗಾರ್ವೌ ವಿಧಾನಸಭಾ ಕ್ಷೇತ್ರದ ಶಾಸಕರಾದ ಸೆಂಗಾರ್ ಅವರು ತಮ್ಮ ಬಳಿ ಕೆಲಸ ಕೇಳಿಕೊಂಡು ಬಂದ 16 ವರ್ಷದ ಬಾಲಕಿಯ ಮೇಲೆ ಜೂನ್ 4, 2017 ರಂದು ತಮ್ಮ ನಿವಾಸದಲ್ಲಿ ಅತ್ಯಾಚಾರ ಎಸಗಿದ್ದರು. ಕಳೆದ ವರ್ಷ ಸಿಬಿಐ ಪೊಲೀಸರಿಂದ ಬಂಧನಕ್ಕೊಳಗಾದ ಸೆಂಗಾರ್ ಸೀತಾಪುರ ಜೈಲಿನಲ್ಲಿದ್ದರು.
ಮತ್ತೊಂದೆಡೆ, ಜೈಲಿನಲ್ಲಿರುವ ಬಿಜೆಪಿ ಶಾಸಕ ಸೆಂಗಾರ್ ಮತ್ತು ಇತರ 9 ಮಂದಿಯ ಮೇಲೆ ಸೋಮವಾರ ಕೊಲೆ ಪ್ರಕರಣ ದಾಖಲಿಸಲಾಗಿದೆ. 19 ವರ್ಷದ ಅತ್ಯಾಚಾರ ಸಂತ್ರಸ್ಥೆ ಹಾಗೂ ಅವರ ಕುಟುಂಬ, ವಕೀಲರು ಪ್ರಯಾಣಿಸುತ್ತಿದ್ದ ಕಾರು ರಾಯ್ ಬರೇಲಿಯಲ್ಲಿ ಟ್ರಕ್ ಗೆ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ್ದರು. ಅಲ್ಲದೆ ಘಟನೆಯಲ್ಲಿ ಸಂತ್ರಸ್ಥೆ ಹಾಗೂ ಅವಳ ವಕೀಲರು ಗಂಭೀರ ಗಾಯಗೊಂಡಿದ್ದಾರೆ.
ಸಂತ್ರಸ್ತೆ ಮತ್ತು ಆಕೆಯ ವಕೀಲರು ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡೂ ರೋಗಿಗಳು ಸ್ಥಿರವಾಗಿದ್ದರೂ, ಅವರು ಇನ್ನೂ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಆಸ್ಪತ್ರೆ ಬುಧವಾರ ತಿಳಿಸಿದೆ.
ಅಪಘಾತಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಸೆಂಗಾರ್ ಮತ್ತು ಇತರ ಒಂಬತ್ತು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ತನಿಖೆಯನ್ನು ಮಂಗಳವಾರ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಲಾಗಿದೆ.
ಅಪಘಾತದ ಬಳಿಕ ಈ ವಿಚಾರ ತೀವ್ರ ವಿವಾದಕ್ಕೊಳಗಾದ ಹಿನ್ನೆಲೆಯಲ್ಲಿ ಸೆಂಗಾರ್ ಅವರನ್ನು ಬಿಜೆಪಿ ಪಕ್ಷದಿಂದಲೇ ಅಮಾನತು ಮಾಡಿ ಆದೇಶ ಹೊರಡಿಸಿದೆ.