ನವದೆಹಲಿ: ಸಾಕಷ್ಟು ಪ್ರಯತ್ನಗಳ ಬಳಿಕ, ಬಹುನಿರೀಕ್ಷಿತ ಸೆಮಿ ಹೈಸ್ಪೀಡ್ ಇಂಜಿನ್ ರಹಿತ ರೈಲು 'ಟಿ-18' ಸೆಪ್ಟೆಂಬರ್'ನಲ್ಲಿ ಚಾಲನೆಗೆ ಬರಲಿದೆ. ಈ ಟಿ-18 ಸೆಮಿ ಹೈಸ್ಪೀಡ್ ರೈಲು, ಮೆಟ್ರೋ ರೈಲಿನಂತೆ ಸ್ವಯಂ ಚಾಲಿತವಾಗಿದ್ದು, ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.
ನೂತನ ಟಿ-18 ಐಷಾರಾಮಿ ರೈಲಿಗೆ ಶತಾಬ್ದಿ ಮತ್ತು ಇಂಟರ್ ಸಿಟಿ ರೈಲಿನ ಕೋಚ್ಗಳನ್ನು ಬದಲಾಯಿಸಲಾಗುವುದು. ಡಿಎನ್ಎ ಪತ್ರಿಕೆ ವರದಿಯಂತೆ ಮೊದಲಿಗೆ ಮುಂಬೈನಿಂದ ಟಿ-18 ರೈಲು ಸಂಚಾರ ಆರಂಭವಾಗಲಿದೆ. ರೈಲ್ವೆ ಸುರಕ್ಷತಾ ಇಲಾಖೆಯಿಂದ ಎಲ್ಲ ರೀತಿಯ ಪ್ರಮಾಣಪತ್ರ ದೊರೆತ ಕೂಡಲೇ ಶತಾಬ್ದಿಗಳ ಕೋಚ್ ಗಳನ್ನು ಇಂಜಿನ್ ರಹಿತ ಟ್ರೇನ್-18ಕ್ಕೆ ಬದಲಾಯಿಸಲಿದೆ.
ದೆಹಲಿ-ಆಗ್ರಾ-ಭೋಪಾಲ್ ಮಾರ್ಗದಲ್ಲಿ ಟಿ-18 ರೈಲಿನ ಮೊದಲ ಸಂಚಾರ ಪ್ರಯೋಗ ಮಾಡಲಾಗುವುದು. ಈ ರೈಲನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರಿಸಲಾಗಿದ್ದು, ಅಂತಿಮ ಹಂತದ ಕಾರ್ಯ ಪ್ರಗತಿಯಲ್ಲಿದೆ.
ಟಿ-18 ಟ್ರೈನ್ ವಿಶಿಷ್ಟತೆಗಳು
* ಆಟೋಮ್ಯಾಟಿಕ್ ರೈಲು : ಟಿ-18 ರೈಲು ಆಟೋಮ್ಯಾಟಿಕ್ ರೈಲಾಗಿದ್ದು, ಇದು ಹಳಿಯ ಮೇಲೆ ಇಂಜಿನ್ ಇಲ್ಲದೆ ಚಲಿಸಲಿದೆ.
* ಕೋಚ್: ಈ ರೈಲಿನಲ್ಲಿ 16 ಭೋಗಿಗಳಿರಲಿದ್ದು, ಎಕ್ಸಿಕ್ಯುಟಿವ್ ಮತ್ತು ಸೆಕೆಂಡ್ ಕ್ಲಾಸ್ ಭೋಗಿಗಳಿರಲಿವೆ.
* ಸಂಪೂರ್ಣ ಹವಾನಿಯಂತ್ರಿತ: ಇಡೀ ರೈಲು ಹವಾನಿಯಂತ್ರಣದಿಂದ ಕೂಡಿದ್ದು, ಪ್ರತಿ ಆಸನಗಳಿಗೆ ಅಂತರ ಇರಲಿದೆ. ಎಕ್ಸಿಕ್ಯುಟಿವ್ ಕ್ಲಾಸ್ ಕೋಚ್ ಗಳಲ್ಲಿ 56 ಆಸನಗಳಿರಲಿವೆ.
* ಸ್ವಯಂಚಾಲಿತ ಬಾಗಿಲುಗಳು: ನೂತನ ರೈಲಿನಲ್ಲಿ ಒಂದು ಭೋಗಿಯಿಂದ ಮತ್ತೊಂದು ಭೋಗಿಗೆ ತೆರಳಲು ಸ್ವಯಂಚಾಲಿತ ಬಾಗಿಲುಗಳಿವೆ. ಅಲ್ಲದೆ, ರೈಲಿನೊಳಗೆ ಪ್ರವೇಶ ಪಡೆಯುವಾಗ ಇರುವ ಬಾಗಿಲುಗಳೂ ಸ್ವಯಂಚಾಲಿತವಾಗಿರುತ್ತವೆ.
* ನೆಲಹಾಸು: ರೈಲಿನಲ್ಲಿ ರಬ್ಬರ್ ನೆಲಹಾಸು ಅಳವಡಿಸಲಾಗಿದೆ.
* ಲೈಟ್'ಗಳು: ಪ್ರತಿಯೊಂದು ಭೋಗಿಯಲ್ಲೂ ಅತ್ಯಾಧುನಿಕ ಎಲ್ಇಡಿ ಲೈಟ್ಗಳನ್ನು ಅಳವಡಿಸಲಾಗಿದೆ.
* ಕಿಟಕಿಗಳು: ರೈಲಿನ ಪ್ರತಿ ಭೋಗಿಯಲ್ಲೂ ಮೆಟ್ರೋ ರೈಲುರುವಂತೆ ವಿಶಾಲವಾದ ಗಾಜಿನ ಕಿಟಕಿಗಳನ್ನು ಅಳವಡಿಸಲಾಗಿದೆ.
* ಲಗೇಜ್ ಇಡಲು ರ್ಯಾಕ್'ಗಳು: ಪ್ರತಿ ಭೋಗಿಯಲ್ಲೂ ಲಗೇಜ್ ಇಡಲು ರ್ಯಾಕ್ ಗಳಿವೆ.
* ವೈ-ಫೈ ವ್ಯವಸ್ಥೆ: ರೈಲಿನಲ್ಲಿ ಮನೋರಂಜನೆಗಾಗಿ ಪ್ರಯಾಣಿಕರಿಗೆ ಉಚಿತ ವೈ-ಫೈ ಸೌಲಭ್ಯ ಮತ್ತು ಜಿಪಿಎಸ್ ಆಧಾರಿತ ಪ್ರಯಾಣಿಕ ಮಾಹಿತಿ ವ್ಯವಸ್ಥೆಯನ್ನು ಒದಗಿಸಲಾಗಿದೆ.