ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ ಮಸೂದೆಯನ್ನು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದ ಬೆನ್ನಲ್ಲೇ ಮೊದಲ ಬಾರಿಗೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ಸಂಸದ ರಾಹುಲ್ ಗಾಂಧಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್, "ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕುವ ಮೂಲಕ ಸರ್ಕಾರ ಸಂವಿಧಾನವನ್ನು ಉಲ್ಲಂಘಿಸಿದೆ" ಎಂದು ಕಿಡಿ ಕಾರಿದ್ದಾರೆ.
ಸರ್ಕಾರ ಏಕಪಕ್ಷೀಯವಾಗಿ ಕಾಶ್ಮೀರವನ್ನು ಹರಿದುಹಾಕಿದ್ದರಿಂದ ಅಲ್ಲಿನ ಚುನಾಯಿತ ಪ್ರತಿನಿಧಿಗಳನ್ನು ಬಂಧಿಸಿದ್ದರಿಂದ, ಸಂವಿಧಾನದ ಆಶಯಗಳನ್ನು ಉಲ್ಲಂಘಿಸಿದ್ದರಿಂದ ರಾಷ್ಟ್ರೀಯ ಏಕತೆ ವೃದ್ಧಿಯಾಗುವುದಿಲ್ಲ. ಈ ರಾಷ್ಟ್ರವನ್ನು ಇಲ್ಲಿನ ಜನತೆ ನಿರ್ಮಿಸಿದ್ದಾರೆ. ದೇಶವೆಂದರೆ ಭೂಮಿಯ ತುಂಡುಗಳಲ್ಲ. ಅಧಿಕಾರವನ್ನು ಹೀಗೆ ದುರುಪಯೋಗಪಡಿಸಿಕೊಂಡಿರುವುದು ನಮ್ಮ ದೇಶದ ರಾಷ್ಟ್ರೀಯ ಭದ್ರತೆಯ ಮೇಲೆ ದುಷ್ಪರಿಣಾಮ ಬೀರಲಿದೆ" ಎಂದು ಎಚ್ಚರಿಸಿದ್ದಾರೆ.
National integration isn’t furthered by unilaterally tearing apart J&K, imprisoning elected representatives and violating our Constitution. This nation is made by its people, not plots of land.
This abuse of executive power has grave implications for our national security.
— Rahul Gandhi (@RahulGandhi) August 6, 2019
ಈಗಾಗಲೇ ಕಾಂಗ್ರೆಸ್ ನ ಕೆಲ ನಾಯಕರು ಜಮ್ಮು-ಕಾಶ್ಮೀರ ಪುನರ್ ರಚನೆ ಮಸೂದೆಗೆ ಬೆಂಬಲ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಎಲ್ಲರ ಗಮನ ಸೆಳೆದಿದೆ.