ನವದೆಹಲಿ: ಶಬ್ದ ಮಾಲಿನ್ಯಕ್ಕೆ ನಿಯಂತ್ರಣ ತರುವ ನಿಟ್ಟಿನಲ್ಲಿ ಈಗ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸಾರ್ವಜನಿಕ ಪ್ರದೇಶಗಳಲ್ಲಿ ಧ್ವನಿವರ್ಧಕಗಳಿಗೆ ಸಂಪೂರ್ಣ ನಿಷೇಧವನ್ನು ಹೇರಿದೆ.
ಇನ್ನು ಮುಂದೆ ಅಧಿಕಾರಿಗಳ ಲಿಖಿತ ಅನುಮತಿಯಿಲ್ಲದೆ ಧಾರ್ಮಿಕ ಸ್ಥಳಗಳಾದ ದೇವಾಲಯ, ಮಸೀದಿಗಳು ಮತ್ತು ಗುರುದ್ವಾರಗಳನ್ನು ಸಹ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ.
ಇನ್ನು ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ ಯಾವುದೇ ಧ್ವನಿವರ್ಧಕ ಅಥವಾ ಸಂಗೀತಕ್ಕೆ ಅವಕಾಶವಿಲ್ಲ. ಒಂದು ವೇಳೆ ಇದ್ದರೂ ಸಹಿತ ಶಬ್ದದ ಮಟ್ಟವು 10 ಡೆಸಿಬಲ್ ಗಳಿಗಿಂತ ಹೆಚ್ಚಿರಬಾರದು ಎಂದು ಹೈಕೋರ್ಟ್ ಆದೇಶ ನೀಡಿದೆ. ಆದರೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ವರ್ಷದಲ್ಲಿ 15 ದಿನಗಳ ಅವಧಿಗಾಗಿ ಈ ನಿಯಮವನ್ನು ಸಡಿಲಗೊಳಿಸಲಾಗಿದೆ.ಆ ಸಂದರ್ಭದಲ್ಲಿ ಮಾತ್ರ ಕಾರ್ಯಕ್ರಮಗಳಿಗೆ ರಾತ್ರಿ 10 ರಿಂದ ಮಧ್ಯರಾತ್ರಿವರೆಗೆ ಅನುಮತಿ ನೀಡಲಾಗಿದೆ.
ನ್ಯಾಯಮೂರ್ತಿಗಳಾದ ರಾಜೀವ್ ಶರ್ಮಾ ಮತ್ತು ಹರಿಂದರ್ ಸಿಂಗ್ ಸಿಧು ಅವರನ್ನೊಳಗೊಂಡ ಹೈಕೋರ್ಟ್ ಪೀಠವು ಪೊಲೀಸ್ ಹರಿಯಾಣ ಮತ್ತು ಚಂಡೀಗಡ ಮಹಾನಿರ್ದೇಶಕರು, ಜಿಲ್ಲಾ ಆಯುಕ್ತರು, ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಪೊಲೀಸ್ ಅಧೀಕ್ಷಕರಿಗೆ ಈ ಆದೇಶವನ್ನು ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಹೇಳಿದೆ. ಒಂದು ವೇಳೆ ಈ ಕೋರ್ಟ್ ಆದೇಶವನ್ನು ಹಾಗೂ ಶಬ್ದ ಮಾಲಿನ್ಯ ಮತ್ತು ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಹೇಳಿದೆ.