ಬೆಗುಸರೈ: ಜಮ್ಮು ಕಾಶ್ಮೀರದ ಪುಲ್ವಾಮಾ ದಾಳಿಯ ವಿಚಾರವಾಗಿ ಪ್ರತಿಕ್ರಿಯಿಸಿರುವ ಪ್ರಧಾನಿ ನಿಮ್ಮಲ್ಲಿರುವ ಬೆಂಕಿ ನನ್ನಲ್ಲೂ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಇಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಭಾಗವಹಿಸಿ ಸುಮಾರು 33 ಸಾವಿರ ಕೋಟಿ ರೂಗಳ ಯೋಜನೆಗಳಿಗೆ ಅಡಿಗಲ್ಲು ಹಾಕಿ ಮಾತನಾಡಿದರು. ವಿಶೇಷವೆಂದರೆ ಈ ಕಾರ್ಯಕ್ರಮವನ್ನು ಅವರು ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡುವುದರ ಮೂಲಕ ನೆರವಿಸಿದರು.
"ಜೋ ಆಗ್ ಆಪ್ಕೆ ದಿಲ್ ಮೇನ್ ಹೈ, ವಹಿ ಆಗ್ ದಿಲ್ ಮೇ ಬಿ ಹೈ" (ನಿಮ್ಮೊಳಗೆ ಬೆಂಕಿ ಇದೆಯಲ್ಲ ಅದೇ ಬೆಂಕಿ ನನ್ನಲ್ಲೂ ಇದೆ)"ಎಂದರು.ಪುಲ್ವಾಮಾ ದಾಳಿಯಲ್ಲಿ ಮೃತಪಟ್ಟ ಬಿಹಾರದ ಇಬ್ಬರು ಸಿಆರ್ಪಿಎಫ್ ಸೈನಿಕರಿಗೂ ಸಹ ಮೋದಿ ಗೌರವ ನಮನ ಸಲ್ಲಿಸಿ "ಅವರ ಕುಟುಂಬಕ್ಕೆ ನಾನು ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇನೆ" ಎಂದರು.
ಸುಮಾರು ಅರ್ಧ ಘಂಟೆ ಭಾಷಣದಲ್ಲಿ ಮೋದಿ ಕೇವಲ ಅಭಿವೃದ್ದಿ ವಿಚಾರವನ್ನು ಮಾತ್ರ ಪ್ರಸ್ತಾಪಿಸಿದರು.ಎನ್ಡಿಎ ಸರ್ಕಾರದ ಅಭಿವೃದ್ಧಿಯ ದೃಷ್ಟಿಕೋನವು ಎರಡು ಸಮಾನಾಂತರ ರೇಖೆಗಳ ಮೇಲೆ ನಡೆಯುತ್ತದೆ, ಒಂದು ಮೂಲಭೂತ ಸೌಕರ್ಯ ಅಭಿವೃದ್ಧಿ, ಇನ್ನೊಂದೆಡೆಗೆ ಮೂಲ ಸೌಕರ್ಯಗಳನ್ನು ಪಡೆಯಲು ಒದ್ದಾಡುತ್ತಿರುವ ಸಮುದಾಯಗಳನ್ನು ಮುಖ್ಯಪರದೆಗೆ ತರುವುದು ಎಂದು ತಿಳಿಸಿದರು.
ಕೇಂದ್ರದಲ್ಲಿ ಪ್ರಬಲ ಸರ್ಕಾರದ ಕಾರಣದಿಂದಾಗಿ ಕಳೆದ ನಾಲ್ಕು ವರೆ ವರ್ಷಗಳಲ್ಲಿ ವೇಗದ ಆರ್ಥಿಕ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದ ನಿರ್ಧಾರಗಳು ಸಾಧ್ಯ ಎಂದು ತಿಳಿಸಿದರು.