ನವದೆಹಲಿ: ಮಕ್ಕಳ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳನ್ನು ನೇಣುಗಂಬಕ್ಕೆ ಏರಿಸುವ ತಿದ್ದುಪಡಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದು, ಈ ಕಾಯ್ದೆ ಇಂದಿನಿಂದಲೇ ಜಾರಿಯಾಗಲಿದೆ.
ದೇಶಾದ್ಯಂತ ಸಂಚಲನ ಮೂಡಿಸಿದ್ದ ಉನ್ನಾವೋ ಮತ್ತು ಕಥುವಾ ಅತ್ಯಾಚಾರ ಪ್ರಕರಣಗಳ ಹಿನ್ನೆಲೆಯಲ್ಲಿ, 12 ವರ್ಷದೊಳಗಿನ ಮಕ್ಕಳ ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸುವ ಸಂಬಂಧ ಶನಿವಾರ ಕೇಂದ್ರ ಸಚಿವ ಸಂಪುಟ ಸಭೆ ನಡೆಸಿ ನಿರ್ಧಾರ ಕೈಗೊಂಡಿತ್ತು. ನಂತರ ಇದನ್ನು ರಾಷ್ಟಪತಿಗಳಿಗೆ ಕಳುಹಿಸಿಕೊಡಲಾಗಿತ್ತು. ಇದನ್ನು ಪರಿಶೀಲಿಸಿದ ರಾಷ್ಟ್ರಪತಿಗಳು ಈ ತಿದ್ದುಪಡಿಗೆ ಇಂದು ಅಂಕಿತ ಹಾಕಿದ್ದಾರೆ.
ಈ ಮೂಲಕ ಮಕ್ಕಳ ವಿರುದ್ಧದ ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆ(ಐಸಿಸಿ), ಸಾಕ್ಷಿ ಕಾಯ್ದೆ, ಅಪರಾಧ ಪ್ರಕ್ರಿಯಾ ಸಂಹಿತೆ ಮತ್ತು ಪೋಕ್ಸೋ ಕಾಯ್ದೆಗಳಿಗೆ ತಿದ್ದುಪಡಿ ತರಲಾಗಿದ್ದು, ಇಂದಿನಿಂದ ತಿದ್ದುಪಡಿಯಾಗಿರುವ ಕಾಯ್ದೆಗಳು ಕಾನೂನು ಸ್ವರೂಪ ಪಡೆದುಕೊಂಡಿದೆ. ಇದರಂತೆ ಹೊಸ ಕಾಯ್ದೆಗಳು ಇಂದಿನಿಂದಲೇ ಕಾರ್ಯರೂಪಕ್ಕೆ ಬರಲಿವೆ.
ಮಕ್ಕಳ ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದಂತೆ ತಿದ್ದುಪಡಿಯಾಗಿರುವ ಈ ಕಾಯ್ದೆಯಲ್ಲಿ 12 ವರ್ಷದೊಳಗಿನ ಬಾಲಕಿಯರ ಮೇಲಿನ ಅತ್ಯಾಚಾರಕ್ಕೆ ಮರಣದಂಡನೆ ಶಿಕ್ಷೆ, 2 ತಿಂಗಳೊಳಗೆ ಪ್ರಕರಣದ ವಿಚಾರಣೆ ಮುಕ್ತಾಯ, ಪ್ರಕರಣದ ವಿಚಾರಣೆಗೆ 2 ತಿಂಗಳು ಮಾತ್ರ ಕಾಲಾವಕಾಶ, ಅಪರಾಧಿಗಳ ಸಂಪೂರ್ಣ ಮಾಹಿತಿ ಸಂಗ್ರಹಿಸಲು NCRB ಸೂಚನೆ, 16 ವರ್ಷದೊಳಗಿನ ಮಕ್ಕಳ ಮೇಲಿನ ಅತ್ಯಾಚಾರಿಗಳಿಗೆ ಜಾಮೀನು ನಿಷೇಧ, ಅಪರಾಧಿಗಳಿಗೆ ಕನಿಷ್ಠ 10 ವರ್ಷ ಶಿಕ್ಷೆ ವಿಧಿಸಲು ನಿರ್ಧರಿಸಲಾಗಿದೆ.