ನವದೆಹಲಿ:ಭಾರತದ 13ನೆಯ ರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸಿದ ಪ್ರಣಬ್ ಮುಖರ್ಜಿ ಇಂದು 82 ನೆಯ ವಸಂತಕ್ಕೆ ಕಾಲಿಟ್ಟಿದ್ದಾರೆ.
ಇವರ ಜನ್ಮದಿನಕ್ಕೆ ರಾಷ್ಟ್ರಪತಿ ರಾಮ್ ನಾಥ್ ಕೊವಿಂದ ಹಾಗೂ ಪಶ್ಚಿಮ ಬಂಗಾಳ ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಟ್ವಿಟ್ಟರ್ ಮೂಲಕ ಪ್ರಣಬ್ ದಾ ಗೆ ಜನ್ಮ ದಿನದ ಶುಭಾಶಯಗಳನ್ನು ತಿಳಿಸಿದ್ದಾರೆ. ಡಿಸೆಂಬರ್ 11 1935 ರಂದು ಬಂಗಾಳ ಪ್ರೆಸಿಡೆನ್ಸಿ ಮಿರತಿಯಲ್ಲಿ ಜನಿಸಿದ ಇವರು ಸ್ವತಂತ್ರ ಭಾರತದ ರಾಜಕಾರಣದ ಬೆಳವಣೆಗೆಯನ್ನು ಕಂಡವರು ಅಲ್ಲದೆ ಹಲವಾರು ಮಹತ್ತರ ರಾಜಕೀಯ ಹುದ್ದೆಗಳ ಮೂಲಕ ತಮ್ಮದೇ ಛಾಪನ್ನು ಮೂಡಿಸಿದ್ದಾರೆ.
ತಮ್ಮ ಸುಮಾರು 48 ವರ್ಷಗಳ ಸುಧೀರ್ಘ ರಾಜಕೀಯ ಪಯಣವು ಹಲವಾರು ಏಳು ಬೀಳುಗಳನ್ನು ಕಂಡಿದೆ. ಈ ಹಿಂದೆ ಇವರು ಹಣಕಾಸು ಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಮೇರಿಕಾದ ರಾಯಭಾರಿ ಡೇವಿಡ್ ಮುಲ್ಫೋರ್ಡ್ ಇವರನ್ನು ಪ್ರಧಾನಿ ಹುದ್ದೆ ನಿರೀಕ್ಷಿಸುತ್ತಿರುವ ವ್ಯಕ್ತಿ ಎಂದು ತಮ್ಮ ದೇಶದ ರಕ್ಷಣಾ ಕಾರ್ಯದರ್ಶಿ ಡೊನಾಲ್ಡ್ ರುಮ್ಸ್ಫೆಲ್ದ್ ರವರಿಗೆ ರಹಸ್ಯ ಕೇಬಲ್ ನ್ನು ಕಳಿಸಿದ್ದರು. ಇದು ಇತ್ತೀಚಿಗೆ ವಿಕಿಲಿಕ್ಸ್ ಮೂಲಕ ಬಹಿರಂಗಗೊಂಡಿತ್ತು. ಅದರಲ್ಲಿ ಅವರು ಸರ್ಕಾರದ ಕಾಯ್ದೆ ಮತ್ತು ಸಾರ್ವಜನಿಕ ಅಭಿಪ್ರಾಯದಲ್ಲಿ ಅವರು ಹೊಂದಿರುವ ಪ್ರಭಾವವನ್ನು ಗುರುತಿಸಿತ್ತು.
2012 ರಲ್ಲಿ ಯುಪಿಎ ಸರ್ಕಾರದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಸುಮಾರು 713,763 ಮತಗಳ ಅಂತರದಿಂದ ಗೆದ್ದು ಆ ಮೂಲಕ ಈ ಹುದ್ದೆಗೆ ರಾಷ್ಟ್ರಪತಿ ಹುದ್ದೆಗೆ ಮೊದಲ ಬಂಗಾಳದ ವ್ಯಕ್ತಿ ಎಂಬ ಹಿರಿಮೆಗೆ ಅವರು ಪಾತ್ರರಾಗಿದ್ದರು. ಇತ್ತೀಚಿಗೆ ಜುಲೈ ನಲ್ಲಿ ತಮ್ಮ ಐದು ವರ್ಷಗಳ ಅವಧಿಯನ್ನು ಪೂರೈಸಿ ನಿವೃತ್ತರಾಗಿದ್ದರು. ಪ್ರಣಬ್ ಮುಖರ್ಜಿ ತಮ್ಮ ರಾಜಕೀಯ ವೃತ್ತಿಯಲ್ಲಿ ಹಣಕಾಸು, ರಕ್ಷಣಾ, ವಿದೇಶಾಂಗದಂಥ ಮಹತ್ವದ ಖಾತೆಗಳನ್ನು ನಿರ್ವಹಿಸಿದ್ದರು.