ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರ ನೂತನ ಕೇಂದ್ರ ಸಚಿವ ಸಂಪುಟದಲ್ಲಿ ಸತತವಾಗಿ ನಾಲ್ಕು ಬಾರಿ ಗೆಲುವು ಸಾಧಿಸಿದ ಧಾರವಾಡದ ಸಂಸದ ಪ್ರಹ್ಲಾದ ಜೋಶಿಗೆ ಕ್ಯಾಬಿನೆಟ್ ದರ್ಜೆ ಮಂತ್ರಿ ಸ್ಥಾನ ದೊರೆತಿದೆ. ಆ ಮೂಲಕ ಬರೋಬ್ಬರಿ ಎರಡು ದಶಕಗಳ ನಂತರ ಮುಂಬೈ ಕರ್ನಾಟಕದ ಭಾಗಕ್ಕೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ಒಲಿದು ಬಂದಿದೆ.
ಪ್ರಹ್ಲಾದ ಜೋಶಿಯವರಿಗೂ ಮೊದಲು ಮುಂಬೈ ಕರ್ನಾಟಕ ಭಾಗದಿಂದ ಬಿ ಶಂಕರಾನಂದ್ 1971 ರಿಂದ 1984 ಅವಧಿಯಲ್ಲಿ ಕ್ಯಾಬಿನೆಟ್ ದರ್ಜೆಯ ಮಂತ್ರಿಯಾಗಿ ಹಲವು ಖಾತೆಗಳನ್ನು ನಿರ್ವಹಿಸಿದ್ದರು. ಇದಾದ ನಂತರ 1996ರಿಂದ 1998 ರವರೆಗಿನ ಸಂಯುಕ್ತ ರಂಗದ ಸರ್ಕಾರದಲ್ಲಿ ಎಸ್.ಆರ್. ಬೊಮ್ಮಾಯಿ ಮಾನವ ಸಂಪನ್ಮೂಲ ಸಚಿವರಾಗಿದ್ದರು. ಇನ್ನು1998 ರಲ್ಲಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರದ ಅವಧಿಯಲ್ಲಿ ರಾಮಕೃಷ್ಣ ಹೆಗಡೆ ವಾಣಿಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದೇ ಕೊನೆಯಾಗಿತ್ತು.
1962 ರಿಂದ 1980 ರವರೆಗೆ ಧಾರವಾಡ ಉತ್ತರ ಲೋಕಸಭಾ ಸದಸ್ಯೆಯಾಗಿದ್ದ ಸರೋಜಿನಿ ಮಹಿಷಿ ಕೇಂದ್ರದಲ್ಲಿ ಮಂತ್ರಿ ಸ್ಥಾನ ಪಡೆದಿದ್ದರೂ ಕೂಡ ಅದು ಕ್ಯಾಬಿನೆಟ್ ದರ್ಜೆಯ ಸ್ಥಾನಮಾನವಾಗಿರಲಿಲ್ಲ. ಅವರು ನಿರ್ವಹಿಸಿದ ಬಹುತೇಕ ಖಾತೆಗಳೆಲ್ಲವು ಕೂಡ ಕೇಂದ್ರ ರಾಜ್ಯ ಖಾತೆಯ ಸ್ಥಾನಮಾನವನ್ನು ಹೊಂದಿದ್ದವು.ಈಗ ಧಾರವಾಡ ಲೋಕಸಭಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಆಯ್ಕೆಯಾಗಿರುವ ಪ್ರಹ್ಲಾದ ಜೋಶಿ ಮೊದಲ ಬಾರಿಗೆ ಕೇಂದ್ರ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ಪಡೆಯುವುದರ ಮೂಲಕ ಆ ಕೊರತೆಯನ್ನು ನಿಗಿಸಿದ್ದಾರೆ ಎನ್ನಬಹುದು.
ಪ್ರಹ್ಲಾದ ಜೋಶಿ 1962ರಲ್ಲಿ ಬಿಜಾಪುರದ ಸಾಮಾನ್ಯ ಬ್ರಾಹ್ಮಣ ಕುಟುಂಬದಲ್ಲಿ ತಂದೆ ವೆಂಕಟೇಶ್ ಜೋಷಿ, ತಾಯಿ ಮಾಲತಿಬಾಯಿ ಅವರಿಗೆ ಮೂರನೇ ಮಗುವಾಗಿ ಜನಿಸಿದರು.ತಮ್ಮ ಪ್ರಾಥಮಿಕ ಶಿಕ್ಷಣವನ್ನು ರೈಲ್ವೇ ಸ್ಕೂಲ್ ಪೂರೈಸಿದರೆ, ಪ್ರೌಢಶಾಲಾ ಶಿಕ್ಷಣವನ್ನು ನ್ಯೂಇಂಗ್ಲಿಷ್ ಸ್ಕೂಲ್ ನಲ್ಲಿ ಪಡೆದರು. ಪದವಿ ಶಿಕ್ಷಣವನ್ನು ಹುಬ್ಬಳ್ಳಿಯ ಶ್ರೀ ಕಾಡಸಿದ್ದೇಶ್ವರ್ ಆರ್ಟ್ಸ್ ಕಾಲೇಜ್ ನಿಂದ ಪಡೆದರು. ಸಣ್ಣ ವಯಸ್ಸಿನಲ್ಲಿಯೇ ಆರೆಸ್ಸೆಸ್ ಸಂಘಟನೆಯ ಪ್ರಭಾವಕ್ಕೆ ಒಳಗಾದ ಪ್ರಹ್ಲಾದ ಜೋಷಿ, ಮುಂದೆ ಸಂಘಟನಾ ತರಬೇತಿ ಶಿಬಿರದ ಮೂಲಕ ಪ್ರೇರಣೆ ಪಡೆದು ಸಕ್ರಿಯ ಕಾರ್ಯಕರ್ತರಾಗಿ ತಮ್ಮನ್ನು ತೊಡಗಿಸಿಕೊಂಡರು. ಇದೆ ಮುಂದೆ ಅವರನ್ನು ಬಿಜೆಪಿ ಪಕ್ಷಕ್ಕೂ ಸೆಳೆಯುವಂತೆ ಮಾಡಿತು.
ರಾಜಕೀಯ ಅಡಿಪಾಯ ಹಾಕಿದ ಇದ್ಗಾ ಮೈದಾನ ಪ್ರಕರಣ:
ಪ್ರಹ್ಲಾದ ಜೋಶಿಯವರ ಕರ್ಮಭೂಮಿ ಹುಬ್ಬಳ್ಳಿ, ಮೊದಲಿನಿಂದಲೂ ದಕ್ಷಿಣ ಭಾರತದಲ್ಲಿ ಜನಸಂಘದಿಂದ ಹಿಡಿದು ಇಂದಿನ ಬಿಜೆಪಿ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿವೆ.ಈ ಭಾಗದಲ್ಲಿನ ಬಿಜೆಪಿ ಇತಿಹಾಸವನ್ನು ಗಮನಿಸಿದಾಗ 1967 ರಲ್ಲಿಯೇ ದಕ್ಷಿಣ ಭಾರತದ ಮೊದಲ ಜನಸಂಘದ ಶಾಸಕರಾಗಿ ಹುಬ್ಬಳ್ಳಿಯ ಸದಾಶಿವ ಶೆಟ್ಟರ್ ಶಾಸಕರಾಗಿ ಆಯ್ಕೆಯಾಗಿರುವುದು ಇದಕ್ಕೆ ಇನ್ನಷ್ಟು ಪುಷ್ಟಿ ನೀಡುತ್ತದೆ. ಮುಂದೆ 90ರ ದಶಕದಲ್ಲಿನ ಹುಬ್ಬಳ್ಳಿ ಇದ್ಗಾ ಮೈದಾನದ ಧ್ವಜ ಪ್ರಕರಣ ಈ ಭಾಗದಲ್ಲಿ ಬಿಜೆಪಿ ಬೆಳವಣಿಗೆ ಸಹಕಾರಿಯಾಯಿತು. ಆಗ ರಾಷ್ಟ್ರಧ್ವಜ ಹೋರಾಟ ಸಮಿತಿ ಸಂಚಾಲಕರಾಗಿ ಇದ್ಗಾ ಹೋರಾಟದ ಮುಂಚೂಣಿ ವಹಿಸಿದ್ದ ಪ್ರಹ್ಲಾದ ಜೋಷಿ ಅವರಿಗೆ ಈ ಪ್ರಕರಣ ಒಂದರ್ಥದಲ್ಲಿ ರಾಜಕೀಯ ಅಡಿಪಾಯವನ್ನು ಹಾಕಿತು ಎನ್ನಬಹುದು.
ಧಾರವಾಡ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಅಧ್ಯಕ್ಷರಾಗಿ 1995-98 ರ ಅವಧಿಯಲ್ಲಿ ಕಾರ್ಯನಿರ್ವಹಿಸಿ ಮುಂಬೈ ಕರ್ನಾಟಕದ ಸುತ್ತಮುತ್ತಲಿನ ಭಾಗಗಳಲ್ಲಿ ಪಕ್ಷದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದರು.ಬಿ.ಎಸ್ ಯಡಿಯೂರಪ್ಪ ಬಿಜೆಪಿ ತೊರೆದು ಕೆಜಿಪಿ ಸ್ಥಾಪಿಸಿದ ಸಂದರ್ಭದಲ್ಲಿ ರಾಜ್ಯದಲ್ಲಿನ ಬಿಜೆಪಿ ಸ್ಥಿತಿ ಪಾತಾಳಕ್ಕೆ ಎನ್ನುವಂತಾಗಿತ್ತು.ಇಂತಹ ಸಂದರ್ಭದಲ್ಲಿ 2013ರಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ಕಾರ್ಯನಿರ್ವಹಿಸುವ ಮೂಲಕ ಕೇವಲ ಹುಬ್ಬಳ್ಳಿ-ಧಾರವಾಡ ಭಾಗಕ್ಕೆ ಮಾತ್ರ ಸೀಮಿತವಾಗಿದ್ದ ತಮ್ಮ ನಾಯಕತ್ವದ ಪ್ರಭಾವವನ್ನು ರಾಜ್ಯವಾಪಿ ವಿಸ್ತರಿಸಿದರು.
2004 ರಲ್ಲಿ ಮೊದಲ ಬಾರಿಗೆ ವಾಜಪೇಯಿ ಅಲೆ ಮೂಲಕ ಸಂಸತ್ತಿಗೆ ಪ್ರವೇಶಿಸಿ ತದನಂತರ ಸತತವಾಗಿ 2009, 2014 ಮತ್ತು 2019 ರ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಕಳೆದ 16ನೇ ಲೋಕಸಭೆ ಅವಧಿಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಗಳ ಸ್ಥಾಯಿ ಸಮಿತಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು.ಲೋಕಸಭೆ ವ್ಯವಹಾರ ಸಲಹಾ ಸಮಿತಿ ಮತ್ತು ನೀತಿ ಸಮಿತಿ ಸೇರಿದಂತೆ ಹಲವಾರು ಸಮಿತಿಗಳ ಸದಸ್ಯರಾಗಿ ಜೋಶಿ ಸೇವೆ ಸಲ್ಲಿಸಿದರು. 2008 ರಲ್ಲಿ ವಿಶ್ವಸಂಸ್ಥೆಯ 63 ಸಾಮಾನ್ಯ ಸಭೆಯಲ್ಲಿ ಭಾರತೀಯ ಸಂಸದೀಯ ನಿಯೋಗದ ಸದಸ್ಯರಾಗಿ ಭಾಗವಹಿಸಿ ಮಹಿಳಾ ಮತ್ತು ಮಕ್ಕಳ ಮೇಲೆ ದೌರ್ಜನ್ಯ ವಿಷಯಗಳ ಕುರಿತಾಗಿ ಮಾತನಾಡುವ ಮೂಲಕ ಜಗತ್ತಿನ ಗಮನ ಸೆಳೆದಿದ್ದರು. ಇದಲ್ಲದೆ ಏಪ್ರಿಲ್ 2012 ರಲ್ಲಿ ಭಾರತೀಯ ಸಂಸದೀಯ ನಿಯೋಗದ ಸದಸ್ಯರಾಗಿ ಶ್ರೀಲಂಕಾದಲ್ಲಿನ ತಮಿಳರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದರು.