ಮಮತಾ ಬ್ಯಾನರ್ಜಿ Vs ಸಿಬಿಐ: ರಾಜಕೀಯ ನಾಯಕರು ಹೇಳಿದ್ದೇನು?

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹವನ್ನು ಹಲವು ನಾಯಕರು ಬೆಂಬಲಿಸಿದರೆ ವಿಪಕ್ಷ ನಾಯಕರು ಮಮತಾ ನಡೆಯನ್ನು ವಿರೋಧಿಸಿದ್ದಾರೆ.

Last Updated : Feb 4, 2019, 01:17 PM IST
ಮಮತಾ ಬ್ಯಾನರ್ಜಿ Vs ಸಿಬಿಐ: ರಾಜಕೀಯ ನಾಯಕರು ಹೇಳಿದ್ದೇನು? title=

ನವದೆಹಲಿ: ಕೊಲ್ಕತ್ತಾ ಪೊಲೀಸ್​ ಆಯುಕ್ತ ರಾಜೀವ್​ ಕುಮಾರ್​ ವಿಚಾರಣೆಗೆ ಬಂದಿದ್ದ ಸಿಬಿಐ ಅಧಿಕಾರಿಗಳನ್ನೇ ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿರುವುದು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಈ ಸಂಬಂಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹವನ್ನು ಹಲವು ನಾಯಕರು ಬೆಂಬಲಿಸಿದರೆ ವಿಪಕ್ಷ ನಾಯಕರು ಮಮತಾ ನಡೆಯನ್ನು ವಿರೋಧಿಸಿದ್ದಾರೆ.

ಅರಾಜಕತೆ ವಿರುದ್ಧ ಹೋರಾಡಲು ನಾವು ಬೆಂಬಲಿಸುತ್ತೇವೆ: ರಾಜ್ ಠಾಕ್ರೆ
ಕೇಂದ್ರ ಸರ್ಕಾರದ ಅರಾಜಕತೆಯ ವಿರುದ್ಧ ಮಮತಾ ಬ್ಯಾನರ್ಜಿ ತೆಗೆದುಕೊಂಡ ನಡೆಯನ್ನು ನಾವು ಸ್ವಾಗತಿಸುತ್ತೇವೆ ಮತ್ತು ಬೆಂಬಲಿಸುತ್ತೇವೆ. ನಾವು ಅರಾಜಕತೆಯ ವಿರುದ್ಧ ಹೋರಾಡಲು ಅವರೊಂದಿಗೆ ನಿಲ್ಲುತ್ತೇವೆ ಎಂದು ಎಂಎನ್ಎಸ್ ಮುಖಂಡ ರಾಜ್ ಠಾಕ್ರೆ ಹೇಳಿದ್ದಾರೆ.

ಮೋದಿ- ಅಮಿತ್ ಶಾ ಜೋಡಿ ಭಾರತದ ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯ: ಕೇಜ್ರಿವಾಲ್
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಯನ್ನು ವಿಡಂಬನೆ ಮಾಡುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ದೆಹಲಿಯಲ್ಲೂ ಮೋದಿಜಿ ಹೀಗೆಯೇ ಮಾಡಿದ್ದರು. ಮೋದಿ- ಅಮಿತ್ ಶಾ ಜೋಡಿ ಭಾರತದ ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಅಪಾಯ! ಈ ನಡೆಯನ್ನು ನಾವು ಕಠಿಣವಾಗಿ ಖಂಡಿಸುತ್ತೇವೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಪಶ್ಚಿಮಬಂಗಾಳ ಪೊಲೀಸರ ನಡೆ ಸಮಂಜಸವಲ್ಲ: ರಾಜ್ ನಾಥ್ ಸಿಂಗ್
ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಹಲವು ಬಾರಿ ತನಿಖೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರೂ ಅವರು ಹಾಜರಾಗಿರಲಿಲ್ಲ. ಆದ್ದರಿಂದ ಸಿಬಿಐ ಅಧಿಕಾರಿಗಳು ತನಿಖೆಗೆ ತೆರಳಿದ್ದರು. ಆದರೆ, ತನಿಖೆಗೆ ತೆರಳಿದ್ದ ಸಿಬಿಐ ಅಧಿಕಾರಿಗಳೊಂದಿಗೆ ಪಶ್ಚಿಮ ಬಂಗಾಳದ ಪೊಲೀಸರು ನಡೆದುಕೊಂಡ ರೀತಿ ಸಮಂಜಸವಲ್ಲ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ಆರೋಪ ಸರಿಯಿದೆ: ಫಾರೂಕ್ ಅಬ್ದುಲ್ಲಾ
ಕೇಂದ್ರ ಸರ್ಕಾರದ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಡಿರುವ ಆರೋಪ ಸರಿಯಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಇಲ್ಲಿ ಜನರೇ ಪ್ರಭುಗಳು, ಕೇಂದ್ರ ಸರ್ಕಾರದ ಸರ್ವಾಧಿಕಾರಿ ನಡೆಯಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಕೇಂದ್ರ ಸರ್ಕಾರ ಸಿಬಿಐ ಅನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ: ಅಖಿಲೇಶ್ ಯಾದವ್
ಕೇವಲ ಪಶ್ಚಿಮ ಬಂಗಾಳದಲ್ಲಷ್ಟೇ ಅಲ್ಲ, ಇತರ ರಾಜ್ಯಗಳಲ್ಲೂ ಇಂಥ ಪ್ರಕರಣಗಳು ನಡೆದಿವೆ. ಬಿಜೆಪಿ ಮತ್ತು ಕೇಂದ್ರ ಸರ್ಕಾರ ಸಿಬಿಐ ಅನ್ನು ದುರುಪಯೋಗ ಪಡಿಸಿಕೊಳ್ಳುತ್ತಿವೆ. ಇದನ್ನು ನಾನಷ್ಟೇ ಹೇಳುತ್ತಿಲ್ಲ, ಇತರ ರಾಜಕೀಯ ಪಕ್ಷಗಳದ್ದೂ ಇದೆ ಅಭಿಪ್ರಾಯವಾಗಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.

Trending News