ಗಾಂಧಿನಗರ: ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ಬಳಿಕ ಮೇ 30 ರಂದು ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಮೊದಲ ಬಾರಿಗೆ ಗುಜರಾತಿನ ತಮ್ಮ ಗಾಂಧಿನಗರದ ನಿವಾಸಕ್ಕೆ ತೆರಳಿ ತಾಯಿ ಹಿರಾಬೇನ್ ಅವರನ್ನು ಭೇಟಿ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಿದರು. ಬಳಿಕ ಅವರ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವಾದ ಪಡೆದರು. ಇದೇ ವೇಳೆ ಎರಡನೇ ಅವಧಿಗೆ ದೇಶದ ಪ್ರಧಾನಿಯಾಗಿ ಆಯ್ಕೆಯಾಗಿರುವ ಮಗನಿಗೆ ತಾಯಿ ಹಿರಾಬೇನ್ ಆಶೀರ್ವದಿಸಿದರು.
Prime Minister Narendra Modi meets his mother Heeraben Modi at her residence in Gandhinagar and seeks her blessings. #Gujarat pic.twitter.com/qWEwnJo1Y9
— ANI (@ANI) May 26, 2019
ಗಾಂಧಿನಗರದ ನಿವಾಸಕ್ಕೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಅಲ್ಲಿ ಜಮಾಯಿಸಿದ ಮೋದಿ ಬೆಂಬಲಿಗರು ಜೈಕಾರ ಕೂಗಿದರು. ತಾಯಿಯ ಭೇಟಿ ಬಳಿಕ ಪ್ರಧಾನಿ ಮೋದಿ ರಾಜಭವನಕ್ಕೆ ತೆರಳಿದರು. ಮತ್ತೊಮ್ಮೆ ಪ್ರಧಾನಿಯಾಗುತ್ತಿರುವ ಮೋದಿಯನ್ನು ಕಂಡು ಅಲ್ಲಿ ನೆರೆದಿದ್ದ ಜನತೆ ಮೋದಿ, ಮೋದಿ ಎಂದು ಕೂಗುತ್ತಿದ್ದ ದೃಶ್ಯ ಕಂಡುಬಂದಿತು.
ಇದಕ್ಕೂ ಮುನ್ನ ಅಹಮದಾಬಾದ್ ನಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಲೋಕಸಭೆ ಚುನಾವಣೆಯಲ್ಲಿ ಸಿಕ್ಕ ಪ್ರಚಂಡ ಬಹುಮತ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ಸಾಮಾನ್ಯ ಜನರ ಸಮಸ್ಯೆಗಳನ್ನು ಬಗೆಹರಿಸಲು ಮುಂದಿನ ಐದು ವರ್ಷಗಳನ್ನು ಸದ್ಬಳಕೆ ಮಾಡಿಕೊಂಡು ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ನಾವು ಕಾರ್ಯನಿರ್ವಹಿಸಲಿದ್ದೇವೆ" ಎಂದು ಮೋದಿ ಹೇಳಿದರು.