ನವದೆಹಲಿ: ಚುನಾವಣಾ ಪ್ರಚಾರದ ವೇಳೆ ರೋಡ್ ಶೋ ಹಾಗೂ ಬೈಕ್ ರ್ರ್ಯಾಲಿ ಯನ್ನು ನಿಷೇಧಗೊಳಿಸಬೇಕೆಂದು ಉತ್ತರ ಪ್ರದೇಶದ ಮಾಜಿ ಡಿಜಿಪಿ ವಿಕ್ರಂ ಸಿಂಗ್ ಹಾಗೂ ಪರಿಸರ ಹೋರಾಟಗಾರ್ತಿ ಶೈವಿಕಾ ಅಗರವಾಲ್ ಅವರು ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್ ) ಸಲ್ಲಿಸಿದ್ದಾರೆ.
ಚುನಾವಣಾ ಆಯೋಗ ನೀಡಿರುವ ಸೂಚನೆಗಳಿಗೆ ರೋಡ್ ಶೋ ಗಳು ಮತ್ತು ಬೈಕ್ ರ್ಯಾಲಿಗಳು ವಿರುದ್ಧವಾಗಿರುವುದಲ್ಲದೆ ಶಬ್ದ ಹಾಗೂ ವಾಯುಮಾಲಿನ್ಯದ ಮೂಲಕ ಪರಿಸರಕ್ಕೆ ಹಾನಿ ಮಾಡುತ್ತವೆ ಎಂದು ಅರ್ಜಿಯಲ್ಲಿ ಪ್ರಸ್ತಾಪಿಸಿದ್ದಾರೆ. ವಕೀಲ ವಿರಾಗ್ ಗುಪ್ತಾ, ರಾಜಶ್ರೀ ನಿವುರಾತಿರೋಯಾ ಮೂಲಕ ಸಲ್ಲಿಕೆಯಾಗಿರುವ ಅರ್ಜಿ ಮುಖ್ಯ ನ್ಯಾಯಾಧೀಶ ರಂಜನ್ ಗೋಗಯ್ ಮುಂದೆ ಬಂದಿತ್ತು, ಆದರೆ ಕೋರ್ಟ್ ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದು ಹೇಳಿತು.
ಇದೇ ವೇಳೆ ಅರ್ಜಿದಾರರು ತಮ್ಮ ಅರ್ಜಿಯಲ್ಲಿ 1990ರ ಬಿಜೆಪಿ ರಾಮ ರಥಯಾತ್ರೆಯಿಂದ ಇಲ್ಲಿಯವರೆಗೆ ಒಟ್ಟು 87 ರೋಡ್ ಶೋ ಹಾಗೂ ಬೈಕ್ ರ್ಯಾಲಿಗಳನ್ನು ಪ್ರಸ್ತಾಪಿಸಿದ್ದಾರೆ. ರಾಜಕೀಯ ರೋಡ್ ಶೋ ಗಳಲ್ಲಿ ವಿವಿಐಪಿಗಳಿಗೆ X Y z ರಕ್ಷಣಾ ಕವಚ ಇದ್ದರೂ ಕೂಡ ಅಂತಹ ಶೋಗಳು ಉಗ್ರರ ದಾಳಿಯಂತಹ ಸಂದರ್ಭದಲ್ಲಿ ಸಾಕಷ್ಟು ಹಾನಿ ಮಾಡುತ್ತವೆ ಎಂದು ಅವರು ತಿಳಿಸಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಬೆನಜೀರ್ ಭುಟ್ಟೋ ಅವರ ಹತ್ಯೆಯನ್ನು ಪಿಐಎಲ್ ನಲ್ಲಿ ಪ್ರಸ್ತಾಪಿಸಿದ್ದಾರೆ.