ಬೆಂಗಳೂರು: ನಮ್ಮದು ಲೂಟಿ ಸರ್ಕಾರವಲ್ಲ, ಮಾನ-ಮರ್ಯಾದೆಯಿಂದ ಬದುಕಿದವನು ನಾನು ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಸಮ್ಮಿಶ್ರ ಸರ್ಕಾರದ ಬಗ್ಗೆ ಮಾಡಿದ್ದ ಆರೋಪದ ವಿರುದ್ಧ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
LIVE: ರಾಜ್ಯ ರಾಜಕೀಯ ಬಿಕ್ಕಟ್ಟು, ವಿಶ್ವಾಸಮತ ಯಾಚನೆಗೆ ಕ್ಷಣಗಣನೆ
ವಿಧಾನಸಭೆ ಅಧಿವೇಶದಲ್ಲಿ ಇಂದು ವಿಶ್ವಾಸಮತ ಯಾಚನೆಗೂ ಮುನ್ನ ಸದನದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಆಗಮಿಸಿದ್ದ ವೇಳೆ ಸರ್ಕಾರದ ವಿರುದ್ಧ ಆಡಿದ ಮಾತುಗಳನ್ನು ಉಲ್ಲೇಖಸಿ, ನಮ್ಮದು ಲೂಟಿ ಸರ್ಕಾರ ಅಲ್ಲ, ಪ್ರಾಮಾಣಿಕ ಸರ್ಕಾರ. ಕಳೆದ 14 ತಿಂಗಳುಗಳಲ್ಲಿ ರಾಜ್ಯದಲ್ಲಿ ಏನೆಲ್ಲಾ ಆಗಿದೆ ಎಂಬುದನ್ನೊಮ್ಮೆ ಗಮನಿಸಿ. ಬರಗಾಲ, ಕೊಡಗು ಪ್ರವಾಹ ಸಂದರ್ಭದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇವೆ. ಇದೆಲ್ಲದರ ಬಗ್ಗೆ ಚರ್ಚೆಯಾಗಬೇಕು ಎಂದು ಸಿಎಂ ಹೇಳಿದರು.
ದೇವರಾಜ ಅರಸು ಬೆಳೆಸಿದ ನಾಯಕರಿಂದಲೇ ಅವರಿಗೆ ಮೋಸ!
ಅಧಿಕಾರ ಯಾರಿಗೂ ಶಾಶ್ವತವಲ್ಲ. ನನಗಾಗಲಿ, ನನ್ನ ನಂತರದ ಸರ್ಕಾರಗಳಿಗಾಗಲಿ ಅಧಿಕಾರ ಶಾಶ್ವತವಲ್ಲ. ದೇವರಾಜ ಅರಸು ಅವರ ಆಡಳಿತವನ್ನೂ ನಾವು ಸೂಕ್ಷ್ಮವಾಗಿ ಗಮನಿಸಿಕೊಂಡು ಬಂದಿದ್ದೇವೆ. ದೇವರಾಜ ಅರಸು ಅವರಿಗೆ ಅವರು ಬೆಳೆಸಿದ ನಾಯಕರೇ ಮೋಸ ಮಾಡಿದ್ದರು ಎಂಬುದನ್ನು ಈ ಸಂದರ್ಭದಲ್ಲಿ ಹೇಳುವ ಮೂಲಕ ಸಿಎಂ ಎಲ್ಲರ ಗಮನಸೆಳೆದರು.
ಸ್ಪೀಕರ್ ಸ್ಥಾನದ ಮೇಲೆ ಅಪನಂಬಿಕೆ
ವಿಪಕ್ಷದವರು ರಾಜ್ಯದ ಸಮ್ಮಿಶ್ರ ಸರ್ಕಾರದ ಮೇಲೆ ಅಪನಂಬಿಕೆ ಮೂಡಿಸಿರುವುದಷ್ಟೇ ಅಲ್ಲದೆ ಸ್ಪೀಕರ್ ಸ್ಥಾನದ ಮೇಲೂ ಅನುಮಾನ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿಯೇ ಈ ವಿಚಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಅತೃಪ್ತ ಶಾಸಕರು ಇಲ್ಲಿ ನೀಡಿರುವ ಹೇಳಿಕೆಗಳೇ ಬೇರೆ, ಸುಪ್ರೀಂಕೋರ್ಟ್ ನಲ್ಲಿ ನೀಡಿರುವ ಹೇಳಿಕೆಗಳೇ ಬೇರೆ. ಈ ಬಗ್ಗೆ ಚರ್ಚೆ ನಡೆಯಬೇಕು ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.
ಚರ್ಚೆಗೂ ಮೊದಲೇ ವಿಶ್ವಾಸಮತಯಾಚನೆ ಎಷ್ಟು ಸರಿ?
ಸಮ್ಮಿಶ್ರ ಸರ್ಕಾರ ಕಳೆದ 14 ತಿಂಗಳುಗಳಿಂದ ಅಚ್ಚುಕಟ್ಟಾಗಿ ಕೆಲಸಗಳನ್ನು ನಿರ್ವಹಿಸಿದೆ. ಆದಾಗ್ಯೂ ವಿರೋಧ ಪಕ್ಷದವರು ಐಎಂಎ ಹಗರಣ, ಜಿಂದಾಲ್ ಪ್ರಕರಣಗಳ ಬಗ್ಗೆ ಶಾಸಕರು ರಾಜೀನಾಮೆ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದಾರೆ. ವಿಪಕ್ಷದವರು 'ಅಯೋಗ್ಯ ಸರ್ಕಾರ' ಎಂದಿದ್ದಾರೆ. ಇಲ್ಲಿ ಯಾರಿಗೆ ಮಾನ ಮರ್ಯಾದೆ ಇದೆಯೋ ತಿಳಿದಿಲ್ಲ. ನಮಗಂತೂ ಇದೆ. ಇವೆಲ್ಲದಕ್ಕೂ ನಾವು ಸ್ಪಷ್ಟನೆ ನೀಡಬೇಕಿದೆ. ಹಾಗಾಗಿ ಮೊದಲು ಚರ್ಚೆ ನಡೆಸಿ ಬಳಿಕ ವಿಶ್ವಾಸಮತಯಾಚನೆಗೆ ಹೋಗುವುದು ಸೂಕ್ತ ಎಂದು ಸಿಎಂ ಹೇಳಿದರು.