ಲೋಕಸಭಾ ಚುನಾವಣೆ: ದೆಹಲಿಯ ಒಟ್ಟು 173 ಅಭ್ಯರ್ಥಿಗಳಲ್ಲಿ 13 ಮಹಿಳೆಯರು!

ಕಾಂಗ್ರೆಸ್, ಬಿಜೆಪಿ ಮತ್ತು ಆಮ್ ಆದ್ಮಿ ಪಾರ್ಟಿ ಪ್ರತಿಯೊಂದು ಪ್ರಮುಖ ರಾಜಕೀಯ ಪಕ್ಷಗಳು ದೆಹಲಿಯಲ್ಲಿ ಒಂದು ಮಹಿಳಾ ಅಭ್ಯರ್ಥಿಯನ್ನು ಮಾತ್ರ ಕಣಕ್ಕಿಳಿಸಿದೆ. ದೆಹಲಿಯ 7 ಲೋಕಸಭಾ ಕ್ಷೇತ್ರಗಳಿಗೆ ಮೇ 12 ರಂದು ಮತದಾನ ನಡೆಯುತ್ತದೆ.

Last Updated : Apr 26, 2019, 03:00 PM IST
ಲೋಕಸಭಾ ಚುನಾವಣೆ: ದೆಹಲಿಯ ಒಟ್ಟು 173 ಅಭ್ಯರ್ಥಿಗಳಲ್ಲಿ 13 ಮಹಿಳೆಯರು! title=

ನವದೆಹಲಿ: ಒಟ್ಟು 173 ಅಭ್ಯರ್ಥಿಗಳ ಪೈಕಿ 13 ಮಂದಿ ಮಹಿಳೆಯರು ಮಾತ್ರ ದೆಹಲಿಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್, ಬಿಜೆಪಿ ಮತ್ತು ಆಮ್ ಆದ್ಮಿ ಪಾರ್ಟಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು ಪ್ರಮುಖ ರಾಜಕೀಯ ಪಕ್ಷಗಳಿಂದ ಒಂದು ಮಹಿಳಾ ಅಭ್ಯರ್ಥಿಗೆ ಮಾತ್ರ ಟಿಕೆಟ್ ನೀಡಲಾಗಿದೆ. ದೆಹಲಿಯ 7 ಲೋಕಸಭಾ ಕ್ಷೇತ್ರಗಳಿಗೆ ಮೇ 12 ರಂದು ಮತದಾನ ನಡೆಯುತ್ತದೆ.

2014 ರ ಚುನಾವಣೆಯಲ್ಲಿ ಒಟ್ಟು 150 ಅಭ್ಯರ್ಥಿಗಳು ರಾಷ್ಟ್ರೀಯ ರಾಜಧಾನಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು, ಅದರಲ್ಲಿ 13 ಮಹಿಳೆಯರು ಕಣದಲ್ಲಿದ್ದರು. ಆದರೆ  ಬಿಜೆಪಿಯ ಮೀನಾಕ್ಷಿ ಲೆಖಿ ಮಾತ್ರ ಚುನಾಯಿತರಾದರು. 2009 ರಲ್ಲಿ, 160 ಅಭ್ಯರ್ಥಿಗಳಲ್ಲಿ 18 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದರು ಮತ್ತು ಕೇವಲ ಒಬ್ಬರು ಮಾತ್ರ ಆಯ್ಕೆಯಾಗಿದ್ದರು. 

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಹಿರಿಯ ನಾಯಕಿ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಲಿಸಿದ್ದರೆ, ಎಎಪಿ ವಕೀಲೆ-ರಾಜಕಾರಣಿ ಆತಿಷಿ ಮಾರ್ಲೆನಾ ಅವರಿಗೆ ಮಣೆ ಹಾಕಿದೆ. ಇನ್ನು ಬಿಜೆಪಿ ಹಾಲಿ ಸಂಸದೆ ಮೀನಾಕ್ಷಿ ಲೆಖಿಗೆ ಮತ್ತೆ ಟಿಕೆಟ್ ನೀಡಿದೆ. ದೆಹಲಿಯಲ್ಲಿ ಲೋಕಸಭೆ ಚುನಾವಣೆಗೆ 173 ಅಭ್ಯರ್ಥಿಗಳ ನಾಮನಿರ್ದೇಶನಗಳು ಮಾನ್ಯತೆ ಪಡೆದಿದೆ.

ಏಪ್ರಿಲ್ 16 ರಿಂದ ಮಂಗಳವಾರವರೆಗೆ 349 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ದೆಹಲಿಯಲ್ಲಿ 64 ಲಕ್ಷ ಮಂದಿ ಅರ್ಹ ಮಹಿಳಾ ಮತದಾರರು, 72 ಲಕ್ಷ ಪುರುಷ ಮತದಾರರು ಮತ್ತು 669 ಮತದಾರರು ಮೂರನೇ ಲಿಂಗದವರು ಸೇರಿ ಒಟ್ಟು 1.43 ಕೋಟಿ ಮತದಾರರಿದ್ದಾರೆ.

ಮೂರು ಬಾರಿ ಮುಖ್ಯಮಂತ್ರಿ ಆಗಿದ್ದ ಶೀಲಾ ದೀಕ್ಷಿತ್ ಈಶಾನ್ಯ ದೆಹಲಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಇದೇ ಕ್ಷೇತ್ರದಿಂದ ರಾಜ್ಯ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಮತ್ತು ಎಎಪಿಯ ದಿಲೀಪ್ ಪಾಂಡೆ ಸ್ಪರ್ಧಿಸಲಿದ್ದಾರೆ. 

ಇದೇ ವೇಳೆ ನವದೆಹಲಿ ಕ್ಷೇತ್ರದಿಂದ ಬಿಜೆಪಿಯ ಮೀನಾಕ್ಷಿ ಲೇಖಿ ಅವರ ವಿರುದ್ಧ ಕಾಂಗ್ರೆಸಿನ ಅಜಯ್ ಮಕೇನ್ ಮತ್ತು ಆಮ್ ಆದ್ಮಿ ಪಕ್ಷದ ಬೃಜೇಶ್ ಗೋಯಲ್ ಕಣದಲ್ಲಿದ್ದಾರೆ.

ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ಪೂರ್ವ ದೆಹಲಿಯಿಂದ ಸ್ಪರ್ಧಿಸಿದ್ದು, ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಮರ್ಲೆನ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅರವಿಂದರ್ ಅವರ ವಿರುದ್ಧ ಸ್ಪರ್ಧೆಯಲ್ಲಿದ್ದಾರೆ.

ಇದಲ್ಲದೆ, ಪ್ರಾದೇಶಿಕ ಪಕ್ಷಗಳಿಂದ ಹಾಗೂ ಸ್ವತಂತ್ರ ಅಭ್ಯರ್ಥಿಗಳಾಗಿ ಇನ್ನೂ ಹತ್ತು ಮಹಿಳಾ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

Trending News