ನವದೆಹಲಿ: ಕಳೆದ ಒಂದು ತಿಂಗಳಿಂದ ಈರುಳ್ಳಿ ನಿರಂತರವಾಗಿ ಏರುತ್ತಿದ್ದು, ಇದರ ಪರಿಣಾಮವಾಗಿ ಈಗ ಪ್ರಸ್ತುತ ಅನೇಕ ನಗರಗಳಲ್ಲಿ ಪ್ರತಿ ಕೆಜಿಗೆ 90 ರೂ.ಗಳಿಂದ 100 ರೂ.ಗಳವರೆಗೆ ತಲುಪಿದೆ.
ಈ ವಾರದ ಆರಂಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಈರುಳ್ಳಿ ಬೆಲೆ ಒಂದು ಶತಕ ಬಾರಿಸಿದೆ. ಇನ್ನು ಉತ್ತರಪ್ರದೇಶದಲ್ಲಿ ಪ್ರತಿ ಕೆ.ಜಿ.ಗೆ 70-90 ರೂ.ಗೆ ಈರುಳ್ಳಿಯನ್ನು ಮಾರಾಟ ಮಾಡಲಾಗುತ್ತಿದೆ. ಇನ್ನೊಂದೆಡೆ ಈರುಳ್ಳಿ ಬೆಲೆ ಏರಿಕೆಯನ್ನು ತಡೆಯಲು ವಿಫಲವಾದ ಕೇಂದ್ರ ಸರ್ಕಾರ ಇದರ ನಿಯಂತ್ರಣ ತನ್ನ ಕೈಯಲ್ಲಿ ಇಲ್ಲ ಎಂದು ಹೇಳಿದೆ.
ಈರುಳ್ಳಿ ಬೆಲೆ ಯಾವಾಗ ಕಡಿಮೆಯಾಗುತ್ತದೆ ಎಂಬ ಪ್ರಶ್ನೆಗೆ, ಉತ್ತರಿಸಿದ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್, 'ಇದು ನಮ್ಮ ಕೈಯಲ್ಲಿಲ್ಲ' ಎಂದು ಹೇಳಿದರು. ಆದಾಗ್ಯೂ, ಕೇಂದ್ರ ಸರ್ಕಾರವು ಈರುಳ್ಳಿ ಬೆಲೆ ಏರಿಕೆ ತಡೆಗೆ ಸಾಧ್ಯವಿರುವ ಎಲ್ಲ ಕ್ರಮವನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಹೇಳಿದರು.
ಈರುಳ್ಳಿ ಬೆಲೆ ಏರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ನಾಗ್ಪುರದ ಮಾರಾಟಗಾರರೊಬ್ಬರು, 'ನಾವು ಈರುಳ್ಳಿಯನ್ನು ಕೆ.ಜಿ.ಗೆ 60-70 ರೂ.ಗೆ ಖರೀದಿಸುತ್ತಿದ್ದೇವೆ ಮತ್ತು ನಂತರ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ 80 ರೂ.ಗೆ ಮಾರಾಟ ಮಾಡುತ್ತಿದ್ದೇವೆ. ಆದ್ದರಿಂದ, ಬೆಲೆ ಏರಿಕೆಯಿಂದಾಗಿ, ಗ್ರಾಹಕರು ಈಗ 250-500 ಗ್ರಾಂ ಈರುಳ್ಳಿಯನ್ನು ಮಾತ್ರ ಖರೀದಿಸುತ್ತಿದ್ದಾರೆ' ಎಂದರು.