ಅಗತ್ಯವಿದ್ದರೆ ಉತ್ತರಪ್ರದೇಶದಲ್ಲೂ NRC ಅನ್ವಯ: ಸಿಎಂ ಯೋಗಿ ಆದಿತ್ಯನಾಥ್

ಅಕ್ರಮವಾಗಿ ಒಳನುಗ್ಗುವವರ ಬಗ್ಗೆ ಸರ್ಕಾರ ಕಟ್ಟುನಿಟ್ಟಾಗಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆಗೆ ಉತ್ತರ ಪ್ರದೇಶದ ಇಂಧನ ಸಚಿವ ಶ್ರೀಕಾಂತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ. ಈ ವಿಷಯವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿರುವುದರಿಂದ ರಾಜ್ಯದಲ್ಲಿ ಕೂಡ ಎನ್‌ಆರ್‌ಸಿ ಬಗ್ಗೆ ಕೆಲಸ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

Last Updated : Sep 16, 2019, 03:56 PM IST
ಅಗತ್ಯವಿದ್ದರೆ ಉತ್ತರಪ್ರದೇಶದಲ್ಲೂ NRC ಅನ್ವಯ: ಸಿಎಂ ಯೋಗಿ ಆದಿತ್ಯನಾಥ್ title=

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (ಯೋಗಿ ಆದಿತ್ಯನಾಥ್) ಅಸ್ಸಾಂನಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಅನುಷ್ಠಾನವನ್ನು ಶ್ಲಾಘಿಸಿದರು ಮತ್ತು ಅಗತ್ಯವಿದ್ದರೆ ಅದನ್ನು ಉತ್ತರಪ್ರದೇಶದಲ್ಲಿ ಕಾರ್ಯಗತಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಎನ್‌ಆರ್‌ಸಿಯನ್ನು ಅನುಷ್ಠಾನಗೊಳಿಸುವುದು ಒಂದು ಪ್ರಮುಖ ಮತ್ತು ಧೈರ್ಯಶಾಲಿ ಹೆಜ್ಜೆ ಎಂದು ಇಂಗ್ಲಿಷ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಆದಿತ್ಯನಾಥ್ ಹೇಳಿದ್ದಾರೆ. "ಈ ವಿಷಯಗಳನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದೆ ಮತ್ತು ಉತ್ತರ ಪ್ರದೇಶಕ್ಕೆ ಎನ್‌ಆರ್‌ಸಿ ಅಗತ್ಯವಿದ್ದಾಗ ನಾವು ಅದನ್ನು ಮಾಡುತ್ತೇವೆ. ಮೊದಲ ಹಂತದಲ್ಲಿ ಅಸ್ಸಾಂನಲ್ಲಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗಿದೆ. ನಿಧಾನವಾಗಿ ಇದನ್ನು ಕಾರ್ಯಗತಗೊಳಿಸಲಾಗುತ್ತಿದೆ" ಎಂದು ಸಿಎಂ ಯೋಗಿ ಪತ್ರಿಕಾ ಸಂದರ್ಶನದಲ್ಲಿ ತಿಳಿಸಿದ್ದಾರೆ. ರಾಷ್ಟ್ರೀಯ ಭದ್ರತೆಗೆ ಇದರ ಅನುಷ್ಠಾನ ಮುಖ್ಯವಾಗಿದೆ ಮತ್ತು ಅಕ್ರಮ ವಲಸೆಯಿಂದಾಗಿ ಬಡವರು ಎದುರಿಸುತ್ತಿರುವ ಸಮಸ್ಯೆಗಳೂ ಕೊನೆಗೊಳ್ಳುತ್ತವೆ ಎಂದು ಆದಿತ್ಯನಾಥ್ ಅಭಿಪ್ರಾಯ ಪಟ್ಟಿದ್ದಾರೆ.

ಅಕ್ರಮವಾಗಿ ಒಳನುಗ್ಗುವವರ ಬಗ್ಗೆ ಸರ್ಕಾರ ಕಟ್ಟುನಿಟ್ಟಾಗಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆಗೆ ಉತ್ತರ ಪ್ರದೇಶದ ಇಂಧನ ಸಚಿವ ಶ್ರೀಕಾಂತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ. ಈ ವಿಷಯವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿರುವುದರಿಂದ ರಾಜ್ಯದಲ್ಲಿ ಕೂಡ ಎನ್‌ಆರ್‌ಸಿ ಬಗ್ಗೆ ಕೆಲಸ ಮಾಡಲಾಗುವುದು. ಕೇಂದ್ರ ಸರ್ಕಾರವು ಈ ಕುರಿತು ಅಭಿಯಾನವನ್ನು ಪ್ರಾರಂಭಿಸಿದೆ, ಉತ್ತರ ಪ್ರದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಮತ್ತು ಒಳನುಗ್ಗುವವರನ್ನು ಗಮನದಲ್ಲಿಟ್ಟುಕೊಂಡು ಎನ್‌ಆರ್‌ಸಿ ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕಳೆದ ತಿಂಗಳು, ಅಸ್ಸಾಂ ಸರ್ಕಾರ 19 ಲಕ್ಷ ಜನರನ್ನು ಹೊರತುಪಡಿಸಿ ರಾಜ್ಯದಲ್ಲಿ ಅಂತಿಮ ಎನ್‌ಆರ್‌ಸಿ ಪಟ್ಟಿಯನ್ನು ಬಿಡುಗಡೆ ಮಾಡಿತು. ಅಸ್ಸಾಂನಲ್ಲಿ ಅಕ್ರಮವಾಗಿ ನೆಲೆಸಿರುವ ಜನರನ್ನು ಹೊರದೂಡುವ ಉದ್ದೇಶದಿಂದ ಈ ಅಭಿಯಾನವನ್ನು ದೊಡ್ಡ ಪ್ರಮಾಣದಲ್ಲಿ ನಡೆಸಲಾಯಿತು. ಈ ಹಿಂದೆ ದೆಹಲಿಯ ಬಿಜೆಪಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ ಅವರು ರಾಜಧಾನಿಯಲ್ಲಿ ಎನ್‌ಆರ್‌ಸಿ ಜಾರಿಗೊಳಿಸುವಂತೆ ಒತ್ತಾಯಿಸಿದ್ದರು. ಭಾನುವಾರ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ತಮ್ಮ ರಾಜ್ಯದಲ್ಲಿ ಇದೇ ರೀತಿಯ ನಿಯಮವನ್ನು ಜಾರಿಗೆ ತರಲು ಕಾನೂನು ಪರ್ಯಾಯವನ್ನು ಅನ್ವೇಷಿಸುತ್ತಿರುವುದಾಗಿ ಹೇಳಿದ್ದಾರೆ.

ಉತ್ತರ ಪ್ರದೇಶದ ಜೊತೆಗೆ, ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಕೂಡ ಅಗತ್ಯವಿದ್ದಲ್ಲಿ ರಾಜ್ಯದಲ್ಲಿ ಎನ್‌ಆರ್‌ಸಿಯನ್ನು ಜಾರಿಗೆ ತರಬಹುದು ಎಂದಿದ್ದಾರೆ. ಈ ಬಗ್ಗೆ ಕ್ಯಾಬಿನೆಟ್‌ನೊಂದಿಗೆ ಸಮಾಲೋಚನೆ ನಡೆಸಿ ನಿರ್ಧರಿಸಲಾಗುವುದು ಎಂದು ಅವರು ಹೇಳಿದ್ದಾರೆ. ಏಕೆಂದರೆ, ಉತ್ತರಾಖಂಡವು ಗಡಿನಾಡಿನ ರಾಜ್ಯವಾಗಿದೆ ಮತ್ತು ಇದು ಇತರ ದೇಶಗಳೊಂದಿಗೆ ಗಡಿಯನ್ನು ಹೊಂದಿದೆ. ಆದ್ದರಿಂದ ಇದು ಗಂಭೀರವಾದ ವಿಷಯವಾಗಿದೆ.

Trending News