ನವದೆಹಲಿ : ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ದರ ಇಳಿಕೆಯಾದ ಪರಿಣಾಮ "ಸಬ್ಸಿಡಿಯೇತರ ಅಡುಗೆ ಅನಿಲ(ಎಲ್ಪಿಜಿ)" ದರದಲ್ಲಿ ಬುಧವಾರ ಪ್ರತಿ ಸಿಲಿಂಡರ್ ಗೆ 62.50 ರೂ. ಇಳಿಕೆಯಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಆಧರಿಸಿ ದೇಶಿಯ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತವಾಗುತ್ತದೆ. ಅಂತೆಯೇ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ "ಸಬ್ಸಿಡಿಯೇತರ ಅಡುಗೆ ಅನಿಲ(ಎಲ್ಪಿಜಿ)" ದರದಲ್ಲಿ 62.50 ರೂ. ಇಳಿಕೆಯಾಗಿದೆ ಎಂದು ಹೇಳಲಾಗಿದೆ.
ನವದೆಹಲಿಯಲ್ಲಿ ಸಬ್ಸಿಡಿಯೇತರ, 14.2 ಕೆ.ಜಿಯ ಅಡುಗೆ ಅನಿಲ ಸಿಲಿಂಡರ್ ದರ 574.50 ರೂ.ಗೆ ಇಳಿಕೆಯಾಗಿದೆ ಎಂದು ತೈಲ ಮಾರಾಟ ಸಂಸ್ಥೆ ಇಂಡಿಯನ್ ಆಯಿಲ್ ಕಾರ್ಪೋರೇಷನ್(ಐಒಸಿ) ತಿಳಿಸಿದೆ.
ಎಲ್ಪಿಜಿಯ ಸರಾಸರಿ ಅಂತರರಾಷ್ಟ್ರೀಯ ಬೆಂಚ್ಮಾರ್ಕ್ ದರ ಮತ್ತು ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ವಿದೇಶಿ ವಿನಿಮಯ ದರವನ್ನು ಅವಲಂಬಿಸಿದ್ದು ಆ ಪ್ರಕಾರ ನಿಗದಿಪಡಿಸಲಾಗಿದೆ. ಹೀಗಾಗಿ ಪ್ರತಿ ತಿಂಗಳು ಸಬ್ಸಿಡಿ ಮೊತ್ತವು ಬದಲಾಗುತ್ತದೆ. ಅಂತಹ ಸನ್ನಿವೇಶದಲ್ಲಿ, ಅಂತರರಾಷ್ಟ್ರೀಯ ಬೆಲೆ ಏರಿಕೆಯಾದಾಗ, ಸರಕಾರವು ಹೆಚ್ಚಿನ ಸಬ್ಸಿಡಿಯನ್ನು ನೀಡುತ್ತದೆ ಮತ್ತು ಬೆಲೆ ಕಡಿಮೆಯಾದಾಗ, ಸಬ್ಸಿಡಿ ಕಡಿತಗಳನ್ನು ಮಾಡಲಾಗುತ್ತದೆ.