ನಿರ್ಭಯಾ ಪ್ರಕರಣ: ಆರೋಪಿಗಳ ಶೀಘ್ರ ಗಲ್ಲುಶಿಕ್ಷೆ ಕುರಿತ ವಿಚಾರಣೆ ಜ.7ಕ್ಕೆ ಮುಂದೂಡಿಕೆ

ಪಟಿಯಾಲಾ ಹೌಸ್ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದ ನಿರ್ಭಯಾ ಪರ ವಕೀಲರು ದೋಷಿಗಳಿಗೆ ಶೀಘ್ರವೇ ಗಲ್ಲು ಶಿಕ್ಷೆ ನೀಡಲು ಡೆತ್ ವಾರಂಟ್ ಜಾರಿಗೊಳಿಸುವಂತೆ ಕೋರಿದ್ದರು.

Last Updated : Dec 18, 2019, 05:13 PM IST
ನಿರ್ಭಯಾ ಪ್ರಕರಣ: ಆರೋಪಿಗಳ ಶೀಘ್ರ ಗಲ್ಲುಶಿಕ್ಷೆ ಕುರಿತ ವಿಚಾರಣೆ ಜ.7ಕ್ಕೆ ಮುಂದೂಡಿಕೆ title=

ನವದೆಹಲಿ: ಇಡೀ ದೇಶವನ್ನು ತಲ್ಲಣಗೊಳಿಸಿದ ನಿರ್ಭಯಾ ರೇಪ್ ಮತ್ತು ಹತ್ಯೆ ಪ್ರಕರಣದಲ್ಲಿ ಅಪರಾಧಿಯಾಗಿರುವ ಅಕ್ಷಯ್ ಠಾಕೂರ್ ದಾಖಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ, ಇತ್ತ ಪಟಿಯಾಲಾ ಹೌಸ್ ನ್ಯಾಯಾಲಯದಲ್ಲಿ ಆರೋಪಿಗಳಿಗೆ ಶೀಘ್ರವೇ ಗಲ್ಲು ಶಿಕ್ಷೆ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ಕುರಿತು ವಿಚಾರಣೆ ನಡೆದಿದೆ. ಈ ವಿಚಾರಣೆಗೂ ಮುನ್ನ ನ್ಯಾಯಾಧೀಶರು ಅಕ್ಷಯನ ಮರುಪರಿಶೀಲನಾ ಅರ್ಜಿ ಬಗ್ಗೆ ವಿಚಾರಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ನಿರ್ಭಯಾ ಪರವಕೀಲರು ಸುಪ್ರೀಂ ಕೋರ್ಟ್ ಅವರ ಅರ್ಜಿಯನ್ನು ತಿರಸ್ಕರಿಸಿದೆ ಎಂದಿದ್ದಾರೆ. ಪಟಿಯಾಲಾ ಹೌಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ನಿರ್ಭಯಾ ಪರ ವಕೀಲರು ಪ್ರಕರಣದ ಎಲ್ಲ ಆರೋಪಿಗಳ ವಿರುದ್ಧ ಶೀಘ್ರವೇ ಡೆತ್ ವಾರೆಂಟ್ ಜಾರಿಗೊಳಿಸಲು ಮನವಿ ಮಾಡಿದ್ದು, ಗಲ್ಲು ಶಿಕ್ಷೆ ವಿಧಿಸಲು 14 ದಿನಗಳ ಸಮಯ ನಿಗದಿಪಡಿಸಬೇಕು ಎಂದು ಕೋರಿದ್ದಾರೆ.

ಅಕ್ಷಯ್ ದಾಖಲಿಸಿದ್ದ ಮರುಪರಿಶೀಲನಾ ಅರ್ಜಿ ರದ್ದಾದ ಕುರಿತು ಅಧಿಕೃತ ಮಾಹಿತಿ ಪಡೆದ ಪಟಿಯಾಲಾ ಹೌಸ್ ನ್ಯಾಯಾಲಯ ಈ ಪ್ರಕರಣದಲ್ಲಿ ತನ್ನ ಇಂದಿನ ವಿಚಾರಣೆಯನ್ನು ಜನವರಿ 7, 2020ಕ್ಕೆ ಮುಂದೂಡಿದೆ. ಈ ವಿಷಯ ತಿಳಿದು ನಿರ್ಭಯಾ ತಾಯಿ ಆಶಾ ದೇವಿ ಕೋರ್ಟ್ ರೂಂನಲ್ಲಿಯೇ ಕಣ್ಣೀರು ಸುರಿಸಿದ್ದಾರೆ.

ಇದಕ್ಕೂ ಮೊದಲು ಡಿಸೆಂಬರ್ 13ಕ್ಕೆ  ಈ ಅರ್ಜಿಯ ವಿಚಾರಣೆ ನಡೆಸಿದ್ದ ಪಟಿಯಾಲಾ ಹೌಸ್ ನ್ಯಾಯಾಲಯ ಪ್ರಕರಣದ ಅಪರಾಧಿ ಸುಪ್ರೀಂ ಕೋರ್ಟ್ ನಲ್ಲಿ ಮರುವಿಚಾರಣಾ ಅರ್ಜಿ ಸಲ್ಲಿಸಿದ್ದು, ಅದರ ತೀರ್ಪು ಹೊರಬಂದ ಬಳಿಕವೇ ತೀರ್ಪು ಪ್ರಕಟಿಸುವುದಾಗಿ ಹೇಳಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್ ಇಂದು ವಿಚಾರಣೆ ಕೈಗೆತ್ತಿಕೊಂಡಿತ್ತು. ಈ ವೇಳೆ ತನ್ನ ವಾದ ಮಂಡಿಸಿರುವ ಅಪರಾಧಿಗಳ ಪರ ವಕೀಲ ಎ.ಪಿ.ಸಿಂಗ್ ನಮ್ಮ ಹಲವಾರು ಅರ್ಜಿಗಳ ವಿಚಾರಣೆ ವಿವಿಧ ಕಡೆ ವಿಚಾರಣೆಗೆ ಬರಲಿವೆ ಎಂದು ಹೇಳಿದ್ದಾರೆ. ಇದಕ್ಕೆ ಚಾಟಿ ಬೀಸಿರುವ ನ್ಯಾಯಾಲಯ ನೀವು ಪ್ರಕರಣವನ್ನು ದೀರ್ಘಾವಧಿಗೆ ಎಳೆಯುವ ಪ್ರಯತ್ನ ನಡೆಸುತ್ತಿರುವಿರಿ ಎಂದಿದೆ.

Trending News