ಬಿಹಾರ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 'ಚರಂಡಿಯ ಕ್ರಿಮಿ' ಇದ್ದಂತೆ ಎಂದು ಹೇಳುವ ಮೂಲಕ ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೇ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿಹಾರದ ಸರರಂನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡುತ್ತಾ, ನಮ್ಮ ದೇಶದ ಪ್ರಧಾನಿ 'ಆಕಾಶ'ದಂತೆ ವಿಸ್ತಾರವಾಗಿದ್ದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 'ಚರಂಡಿಯ ಕ್ರಿಮಿ ಇದ್ದಂತೆ' ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದೇ ವೇಳೆ, ರಾಹುಲ್ ಗಾಂಧಿ ಓರ್ವ ಮಾನಸಿಕ ಅಸ್ವಸ್ಥ, ಅವರನ್ನು ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕಿದೆ ಎಂದೂ ಸಹ ಚೌಬೇ ಟೀಕೆ ಮಾಡಿದ್ದಾರೆ. ಸದಾ ವಿವಾದಾತ್ಮಕ ಹೇಳಿಕೆಗಳನ್ನು ನಿಡುವ ಮೂಲಕ ಸಾಕಷ್ಟು ಚರ್ಚೆಗೆ ಒಳಗಾಗುವ ಚೌಬೆ ಇಂದು ರಾಹುಲ್ ಗಾಂಧಿಯನ್ನು ಚರಂಡಿಯ ಕ್ರಿಮಿಗೆ ಹೋಲಿಸಿ ಮತ್ತಷ್ಟು ವಿವಾದಕ್ಕೆ ಒಳಗಾಗಿದ್ದಾರೆ.