ಜಮ್ಮು: ದೇಶದ ವಿರುದ್ಧ ಘೋಷಣೆ ಕೂಗುವವರಿಗೆ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಬೆಂಬಲ ನೀಡಲು ಮುಂದಾಗಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
2016ರ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯ(JNU) ದೇಶದ್ರೋಹ ಪ್ರಕರಣಕ್ಕೆ 7 ಕಾಶ್ಮೀರಿ ವಿದ್ಯಾರ್ಥಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿರುವುದನ್ನು ಮೆಹಬೂಬ ಖಂಡಿಸಿದ್ದರು. ಅಲ್ಲದೆ, ಚುನಾವಣಾ ಹಿನ್ನೆಲೆಯಲ್ಲಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಉಪಾಧ್ಯಕ್ಷ ಅವಿನಾಶ್ ರಾಯ್ ಖನ್ನ, ಜೆಎನ್ ಯು ಪ್ರಕಣದ ಕುರಿತು ಪೊಲೀಸರು ತಮ್ಮ ಕೆಲಸ ಮಾಡುತ್ತಿದ್ದಾರೆ. ಆದರೆ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಅವರಿಗೆ 'ಅನುಕಂಪ' ಉಕ್ಕಿ ಬರುತ್ತಿದೆ ಎಂದು ಟೀಕಿಸಿದ್ದಾರೆ.
ಪ್ರಕರಣದಲ್ಲಿ ಜೆಎನ್ ಯು ವಿದ್ಯಾರ್ಥಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿರುವ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದ ಮೆಹಬೂಬ ಮುಫ್ತಿ ಅವರು, ಚಾರ್ಜ್ ಶೀಟ್ ಹಾಕಿರುವುದರಲ್ಲಿ ಅಚ್ಚರಿಯೇನು ಇಲ್ಲ. 2019ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಈ ಹಂತದಲ್ಲಿ 7 ಕಾಶ್ಮೀರಿ ವಿದ್ಯಾರ್ಥಿಗಳನ್ನು ಸಿಲುಕಿಸಿ ಬಿಜೆಪಿ ಚುನಾವಣಾ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ಮೆಹಬೂಬಾ ಮುಫ್ತಿ ಹೇಳಿದ್ದರು.
ಅಲ್ಲದೆ, ಪ್ರಕರಣದ ಬಗ್ಗೆ ಚಾರ್ಜ್ ಶೀಟ್ ಸಲ್ಲಿಸಿರುವ ಸಮಯವೂ ಸಹ ಅನುಮಾನಾಸ್ಪದವಾಗಿದೆ. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿತ್ತು, ಅದರ ಪರಿಣಾಮವನ್ನು ಕಾಶ್ಮೀರ ಇಂದಿಗೂ ಎದುರಿಸುತ್ತಿದೆ. ರಾಷ್ಟ್ರೀಯ ಪಕ್ಷಗಳ ಚುನಾವಣಾ ಲಾಭಕ್ಕಾಗಿ ಕಾಶ್ಮೀರಿಗಳು ಇನ್ನೆಷ್ಟು ಬೆಲೆ ತೆರಬೇಕು ಎಂದು ಮುಫ್ತಿ ಪ್ರಶ್ನಿಸಿದ್ದರು.
ಜೆಎನ್ ಯು ಆವರಣದಲ್ಲಿ 2016 ರ ಫೆಬ್ರುವರಿ 9 ರಂದು ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾರತದ ವಿರುದ್ಧ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಸೇರಿದಂತೆ 10 ಜನರ ವಿರುದ್ಧ ದೆಹಲಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇದರಲ್ಲಿ ಕಾಶ್ಮೀರದ ಏಳು ವಿದ್ಯಾರ್ಥಿಗಳ ಹೆಸರನ್ನೂ ಸಹ ದಾಖಲಿಸಲಾಗಿದೆ. ಭಾರತದ ಸಂಸತ್ ಮೇಲೆ ನಡೆದ ಉಗ್ರಗಾಮಿಗಳ ದಾಳಿಯ ಮಾಸ್ಟರ್ ಮೈಂಡ್ ಅಫ್ಜಲ್ ಗುರುವನ್ನು ನೇಣಿಗೆ ಹಾಕಿದ್ದರ ವಿರುದ್ಧ ಕಾಲೇಜು ಆವರಣದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.