ನಾಳೆ ಐದನೇ ಹಂತದ ಲೋಕಸಭಾ ಚುನಾವಣೆ; ರಾಹುಲ್, ಸ್ಮೃತಿ ಇರಾನಿ ಮತ್ತಿತರರ ಭವಿಷ್ಯ ನಿರ್ಧಾರ

ಐದನೇ ಹಂತದ ಚುನಾವಣೆಯಲ್ಲಿ ಸುಮಾರು 8.75 ಕೋಟಿ ಮತದಾರರು ಮತ ಚಲಾಯಿಸುವ ಮೂಲಕ 674 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.

Last Updated : May 6, 2019, 06:50 AM IST
ನಾಳೆ ಐದನೇ ಹಂತದ ಲೋಕಸಭಾ ಚುನಾವಣೆ; ರಾಹುಲ್, ಸ್ಮೃತಿ ಇರಾನಿ ಮತ್ತಿತರರ ಭವಿಷ್ಯ ನಿರ್ಧಾರ title=

ನವದೆಹಲಿ: ನಾಳೆ ನಡೆಯಲಿರುವ ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನಕ್ಕೆ ಭಾರೀ ಸಿದ್ಧತೆ ನಡೆದಿದೆ. ಒಟ್ಟು 51 ಕ್ಷೇತ್ರಗಳಲ್ಲಿ 674 ಅಭ್ಯರ್ಥಿಗಳು ಕಣದಲ್ಲಿದ್ದು,  ಮತದಾರರು ತಮ್ಮ ಸಂಸದರನ್ನು ಆಯ್ಕೆ ಮಾಡಲಿದ್ದಾರೆ. 

ಐದನೇ ಹಂತದ ಮತದಾನದಲ್ಲಿ ದೇಶದ ರಾಜಕೀಯ ಘಟಾನುಘಟಿಗಳು ಕಣದಲ್ಲಿದ್ದು, ಈ ಹಂತದ ಚುನಾವಣೆ ಭಾರೀ ಕುತೂಹಲ ಮೂಡಿಸಿದೆ. ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌, ಕೇಂದ್ರ ಸಚಿವರಾದ ರಾಜನಾಥ್​ ಸಿಂಗ್​, ರಾಜವರ್ಧನ್​ ಸಿಂಗ್ ರಾಥೋರ್​, ಸ್ಮೃತಿ ಇರಾನಿ, ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ, ಸೋನಿಯಾ ಗಾಂಧಿ ಹಾಗೂ ಶತುಘ್ನ ಸಿನ್ಹಾ ಪತ್ನಿ ಪೂನಂ ಸಿನ್ಹಾ ಸೇರಿ ಇತರ ಘಟಾನುಘಟಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಇವರ ರಾಜಕೀಯ ಭವಿಷ್ಯ ನಾಳೆ ಇವಿಎಂ ಸೇರಲಿವೆ. 

ಒಟ್ಟು 7 ರಾಜ್ಯಗಳ 51 ಲೋಕ ಸಭಾ ಸ್ಥಾನಗಳಿಗೆ ಮೇ 6ರ ಸೋಮವಾರದಂದು ಮತದಾನ ನಡೆಯಲಿದ್ದು, ಉತ್ತರ ಪ್ರದೇಶದ 14 ಕ್ಷೇತ್ರ, ರಾಜಸ್ತಾನದ 12, ಪಶ್ಚಿಮ ಬಂಗಾಳ , ಮಧ್ಯಪ್ರದೇಶದಲ್ಲಿ ತಲಾ ಏಳು ಹಾಗೂ ಬಿಹಾರದಲ್ಲಿನ 5, ಜಾರ್ಖಂಡ್ ನಲ್ಲಿನ 4  ಹಾಗೂ  ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಹಾಗೂ ಲಡಾಖ್ ಕ್ಷೇತ್ರದಲ್ಲಿ ನಾಳೆ ಮತದಾನ ನಡೆಯಲಿದೆ. ಅನಂತನಾಗ್‌ ಕ್ಷೇತ್ರದಿಂದ 2014ರಲ್ಲಿ ಮೆಹಬೂಬ ಮುಫ್ತಿ ಆಯ್ಕೆಯಾಗಿದ್ದರು. ಆದರೆ ಸದ್ಯಕ್ಕೆ ಆ ಕ್ಷೇತ್ರದ ಸಂಸದ ಸ್ಥಾನ ತೆರವಾಗಿದೆ. 

ಐದನೇ ಹಂತದ ಚುನಾವಣೆಯಲ್ಲಿ ಸುಮಾರು 8.75 ಕೋಟಿ ಮತದಾರರು ಮತ ಚಲಾಯಿಸುವ ಮೂಲಕ 674 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. 51 ಲೋಕಸಭಾ ಕ್ಷೇತ್ರಗಳಲ್ಲಿ 96  ಸಾವಿರ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. 

Trending News