ದೇಶವಾಸಿಗಳಿಗೆ ಮೋದಿ ಮಹಾ ಸಂದೇಶ: ಮೇ 3ರವರೆಗೆ ಲಾಕ್‌ಡೌನ್ ವಿಸ್ತರಣೆ

ಲಾಕ್ ಡೌನ್ ‌ನಿಯಮ ಪಾಲಿಸುತ್ತಿರುವ ನಿಮಗೆಲ್ಲರಿಗೂ ಧನ್ಯವಾದಗಳು. ಲಾಕ್ ಡೌನ್ ಅನಿವಾರ್ಯ ಆಗಿತ್ತು. ಲಾಕ್ ಡೌನ್ ಘೋಷಿಸದಿದ್ದರೆ ಪರಿಸ್ಥಿತಿ ಕಲ್ಪಿಸಿಕೊಳ್ಳೋದು ಕಷ್ಟವಾಗುತಿತ್ತು ಎಂದು ಮೋದಿ ಹೇಳಿದರು.

Written by - Yashaswini V | Last Updated : Apr 14, 2020, 10:58 AM IST
ದೇಶವಾಸಿಗಳಿಗೆ ಮೋದಿ ಮಹಾ ಸಂದೇಶ: ಮೇ 3ರವರೆಗೆ ಲಾಕ್‌ಡೌನ್ ವಿಸ್ತರಣೆ title=
Image courtesy: ANI

ನವದೆಹಲಿ: ಕೊರೊನಾವೈರಸ್  ಕೋವಿಡ್ 19 (Covid-19) ಹರಡುವುದನ್ನು ತಡೆಯಲು ಜಾರಿಗೆ ತರಲಾದ ಲಾಕ್‌ಡೌನ್ ಅನ್ನು ಮೇ 3ರವರೆಗೆ ವಿಸ್ತರಿಸಿರುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಘೋಷಿಸಿದರು. ಇದೇ ವೇಳೆ ಕೊರೊನಾವೈರಸ್  (Coronavirus) ಪೀಡಿತ ಹೊಸ ಹಾಟ್ ಸ್ಪಾಟ್ ಹುಟ್ಟಿಕೊಳ್ಳದಂತೆ ಕ್ರಮ ಕೈಗೊಳ್ಳಲು ಕರೆ ನೀಡಿದರು.

ಎಪ್ರಿಲ್ 20ರವರೆಗೆ ಕೊರೋನಾವೈರಸ್ ನಿಯಂತ್ರಣಕ್ಕೆ ಬಂದರೆ ಅಂತಹ ಪ್ರದೇಶಗಳಲ್ಲಿ  ಲಾಕ್‍ಡೌನ್ (Lockdown) ನಿಯಮಗಳಲ್ಲಿ ಕೊಂಚ ಸಡಿಲಿಕೆ ನೀಡುವ ಬಗ್ಗೆಯೂ ಪ್ರಧಾನಿ ಸುಳಿವು ನೀಡಿದ್ದಾರೆ. 

ನಮ್ಮಲ್ಲಿ ಕೇವಲ 550 ಕರೋನಾ ಪ್ರಕರಣಗಳು ಇದ್ದಾಗಲೇ 21 ದಿನಗಳ ಸಂಪೂರ್ಣ ಲಾಕ್‌ಡೌನ್‌ಗಾಗಿ ಭಾರತ ದೊಡ್ಡ ಹೆಜ್ಜೆ ಇಟ್ಟಿದೆ. ಭಾರತವು ಸಮಸ್ಯೆ ಬೆಳೆಯಲು ಕಾಯಲಿಲ್ಲ ಬದಲಿಗೆ ಸಮಸ್ಯೆ ಕಾಣಿಸಿಕೊಂಡ ಕೂಡಲೇ ಅದನ್ನು ತಡೆಯಲು ಪ್ರಯತ್ನಿಸಿತು. ಆರ್ಥಿಕ ದೃಷ್ಟಿಕೋನದಿಂದ ನೋಡಿದರೆ ಅದು ಈಗ ದುಬಾರಿಯಾಗಿದೆ. ಆದರೆ ಭಾರತೀಯರ ಜೀವನದ ಮುಂದೆ ಯಾವುದೇ ಹೋಲಿಕೆ ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಿದರು.

ಕಳೆದ ಕೆಲವು ದಿನಗಳಿಂದ ಕರೋನಾ ವೈರಸ್ ವಿರುದ್ಧ ಉತ್ತಮ ಹೋರಾಟ ನಡೆಯುತ್ತಿದೆ ಎಂದು ತಿಳಿಸಿದ ಪ್ರಧಾನಿ ನರೇಂದ್ರ ಮೋದಿ ನಿಮ್ಮೆಲ್ಲರಿಗೂ ಸಾಕಷ್ಟು ತೊಂದರೆ ಉಂಟಾಗಿದೆ. ಎಷ್ಟು ಸಮಸ್ಯೆಗಳು ಸಂಭವಿಸಿವೆ ಎಂಬುದು ನನಗೆ ತಿಳಿದಿದೆ.  ಕೆಲವರಿಗೆ ಓಡಾಡಲು ತೊಂದರೆಯಾಗಿದೆ. ಕೆಲವರಿಗೆ ಊಟಕ್ಕೂ ಸಮಸ್ಯೆ ಇದೆ. ಕೆಲವರು ಕುಟುಂಬದಿಂದ ದೂರವಾಗಿದ್ದಾರೆ. ಆದರೆ ದೇಶದ ಹಿತದೃಷ್ಟಿಯಿಂದ ನೀವು ಶಿಸ್ತುಬದ್ಧ ಸೈನಿಕನಂತೆ ನಿಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದೀರಿ. ನಿಮ್ಮ ತ್ಯಾಗ, ಸಂಯಮದಿಂದಾಗಿ ಭಾರತವು ಇಲ್ಲಿಯವರೆಗೆ ಕರೋನಾದಿಂದ ಉಂಟಾದ ಹಾನಿಯನ್ನು ದೊಡ್ಡ ಮಟ್ಟದಲ್ಲಿ ತಪ್ಪಿಸಲು ಸಮರ್ಥವಾಗಿದೆ ಎಂದವರು ತಿಳಿಸಿದರು. 

ವಿಶ್ವದ ದೊಡ್ಡ ದೊಡ್ಡ ದೇಶಗಳು ಕೊರೊನಾದಿಂದ ತತ್ತರಿಸುತ್ತಿವೆ. ಆದರೆ ಭಾರತ ಸುರಕ್ಷಿತ ಸ್ಥಾನದಲ್ಲಿದೆ. ಕೊರೊನಾ ವಿರುದ್ಧದ ‌ಹೋರಾಟದಲ್ಲಿ ವಿಶ್ವದಲ್ಲೇ ‌ನಾವು ಮುಂದಿದ್ದೇವೆ. ದೇಶವಾಸಿಗಳ ತಪಸ್ಸು ಫಲ ನೀಡುತ್ತಿದೆ. ಎಲ್ಲರ ಸಹಕಾರದಿಂದ ‌ಪರಿಸ್ಥಿತಿ ನಿಯಂತ್ರಣದಲ್ಲಿದೆ. ದೇಶವಾಸಿಗಳ ಕಷ್ಟದ ಬದುಕು ಅರ್ಥ ವಾಗುತ್ತಿದೆ. ಕೊರೊನಾ ಹರಡುವುದನ್ನು ತಡೆಗಟ್ಟಲು ಯಶಸ್ವಿಯಾಗಿದ್ದೇವೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಬದುಕು ಪ್ರೇರಣೆ ಮತ್ತು ಆದರ್ಶದಿಂದ ಇದೆಲ್ಲವೂ ಸಾಧ್ಯವಾಗಿದೆ ಎಂದರು.

ಲಾಕ್ ಡೌನ್ ‌ನಿಯಮ ಪಾಲಿಸುತ್ತಿರುವ ನಿಮಗೆಲ್ಲರಿಗೂ ಧನ್ಯವಾದಗಳು. ಲಾಕ್ ಡೌನ್ ಅನಿವಾರ್ಯ ಆಗಿತ್ತು. ಲಾಕ್ ಡೌನ್ ಘೋಷಿಸದಿದ್ದರೆ ಪರಿಸ್ಥಿತಿ ಕಲ್ಪಿಸಿಕೊಳ್ಳೋದು ಕಷ್ಟವಾಗುತಿತ್ತು ಎಂದು ಮೋದಿ ಹೇಳಿದರು.

ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಲಿರುವ ದಿನಗೂಲಿ ನೌಕರರು, ಬಡವರಿಗೆ ಆದ್ಯತೆ ನೀಡಿ, ಅವರ ಜೀವನ ಸುಧಾರಿಸಲು  ಮಾರ್ಗದರ್ಶಿ ಸೂತ್ರದಲ್ಲಿ ವಿವರಣೆ ನೀಡಲಾಗುತ್ತದೆ. ನಾಳೆ (ಏಪ್ರಿಲ್‌ 15) ಸರ್ಕಾರವು ವಿಸ್ತೃತ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಲಿದೆ ಎಂದು ಹೇಳಿದರು.

ಏಪ್ರಿಲ್‌ 20ರ ವರೆಗೆ ಎಲ್ಲ ರಾಜ್ಯ, ಊರುಗಳಲ್ಲಿ ಕಟ್ಟು ನಿಟ್ಟಿನ ಗಮನವಹಿಸಬೇಕು. ಈ ಅಗ್ನಿ ಪರೀಕ್ಷೆಯಲ್ಲಿ ಸಫಲವಾಗುವ ಹಾಟ್‌ಸ್ಪಾಟ್‌ಗಳಿಗೆ ಕೊಂಚ ಸಡಿಲಿಕೆ ನೀಡಲಾಗುತ್ತದೆ.  ಅತ್ಯಗತ್ಯ ವಿಷಯಗಳಿಗೆ ಮಾತ್ರ ಅನುಮತಿ ದೊರೆಯಲಿದೆ. ಆದರೆ ಅದು ಕಟ್ಟುನಿಟ್ಟಾಗಿರುತ್ತದೆ. ಕೊರೊನಾ ಹಾಟ್‌ಸ್ಪಾಟ್‌ ಆಗಿ ಪರಿಣಮಿಸುವ ಪ್ರದೇಶಗಳನ್ನೂ ಗುರುತಿಸಿ ಕಠೋರ ಕ್ರಮವಹಿಸಬೇಕಿದೆ. ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಾಟ್‌ಸ್ಪಾನ್‌ಗಳಲ್ಲಿ ಹಿಂದಿಗಿಂತಲು ಹೆಚ್ಚಿನ ಗಮನ, ಕಟ್ಟುನಿಟ್ಟಾಗಬೇಕು. ಕೊರೊನಾ ವಿರುದ್ಧ ಯುದ್ಧ ಮುಂದುವರಿಸುವುದು ಹೇಗೆ ಎಂಬ ಬಗ್ಗೆ ರಾಜ್ಯಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

ಬೇರೆ ದೇಶಗಳಲ್ಲಿನ ಹಾನಿ ಗಮನಿಸಿದರೆ ಭಾರತವು ಉತ್ತಮ ಸ್ಥಿತಿಯಲ್ಲಿದೆ. ಬೇರೆ ದೇಶಗಳಲ್ಲಿ‌ 25-30 ಪಟ್ಟು ಅಧಿಕವಾಗಿದೆ. ಸಕಾಲಕ್ಕೆ ಸರಿಯಾದ ನಿರ್ಧಾರ ಕೈಗೊಳ್ಳದೇ ಹೋಗಿದ್ದರೆ ನಾವು ಈ ಸ್ಥಿತಿಯಲ್ಲಿರುವುದು ಸಾಧ್ಯವಾಗುತ್ತಿರಲಿಲ್ಲ ಎಂದರು.

 

Trending News