ನವದೆಹಲಿ: ಗುರುವಾರ ಸಂಜೆ ನಿಧನರಾದ ಮಾಜಿ ಪ್ರಧಾನಿ ಹಾಗೂ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯ ಸಂಸ್ಕಾರ ಆಗಸ್ಟ್ 17ರ ಸಂಜೆ 5 ಗಂಟೆಗೆ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ನಡೆಯಲಿದೆ. ವಾಜಪೇಯಿ ಅವರ ನಿಧನಕ್ಕೆ ಕೇಂದ್ರ ಸರ್ಕಾರ ದೇಶಾದ್ಯಂತ 7 ದಿನಗಳ ಶೋಕಾಚರಣೆ ಘೋಷಿಸಿದೆ.
ದೇಶಕಂಡ ಅತ್ಯುತ್ತಮ ನಾಯಕ, ಅಜಾತ ಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಗುರುವಾರ ಸಂಜೆ 5.05ಕ್ಕೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ 93 ವರ್ಷದ ವಾಜಪೇಯಿ ಅವರನ್ನು ಕ ಜೂ.11ರಂದು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕಳೆದ 36 ಗಂಟೆಗಳಿಂದ ವಾಜಪೇಯಿ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ವಾಜಪೇಯಿ ಅವರಿಗೆ ಕೃತಕ ಉಸಿರಾಟ ವ್ಯವಸ್ಥೆಯಲ್ಲಿಡಲಾಗಿತ್ತು. ಆದರೀಗ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ಮೃತಪಟ್ಟಿದ್ದಾರೆ.
ಸದ್ಯ ವಾಜಪೇಯಿ ಅವರ ಪಾರ್ಥಿವ ಶರೀರವನ್ನು ಏಮ್ಸ್ ಆಸ್ಪತ್ರೆಯಿಂದ ದೆಹಲಿಯ ಕೃಷ್ಣ ಮೆನನ್ ರಸ್ತೆಯಲ್ಲಿರುವ ನಿವಾಸಕ್ಕೆ ರವಾನಿಸಲಾಗಿದೆ. ನಾಳೆ ಬೆಳಿಗ್ಗೆ 9 ಗಂಟೆಯಿಂದ ದೆಹಲಿಯ ಬಿಜೆಪಿ ಮುಖ್ಯ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಅವರ ಅಭಿಮಾನಿಗಳು ಅಂತಿಮ ದರ್ಶನ ಪಡೆಯಬಹುದು. ಬಳಿಕ ಸಂಜೆ 5 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ನವದೆಹಲಿಯ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ನಡೆಯಲಿದೆ ಅಟಲ್ ಜೀ ಅವರ ಅಂತ್ಯ ಸಂಸ್ಕಾರ ನಡೆಯಲಿದೆ.
ನಾಳೆ ಶಾಲಾ ಕಾಲೇಜುಗಳಿಗೆ ರಜೆ, 7 ದಿನಗಳ ಶೋಕಾಚರಣೆ
ವಾಜಪೇಯಿ ಅವರ ನಿಧನಕ್ಕೆ ಕೇಂದ್ರ ಸರ್ಕಾರ ದೇಶಾದ್ಯಂತ ಆಗಸ್ಟ್ 16 ರಿಂದ ಆಗಸ್ಟ್ 22ರವರೆಗೆ 7 ದಿನಗಳ ಶೋಕಾಚರಣೆ ಘೋಷಿಸಿದೆ. ಅಲ್ಲದೆ ರಾಷ್ಟ್ರಾದ್ಯಂತ ಸರ್ಕಾರಿ ಕಛೇರಿಗಳ ಮೇಲೆ ರಾಷ್ಟ್ರಧ್ವಜ ಅರ್ಧಕ್ಕೆ ಹಾರಿಸುವಂತೆ ಸೂಚನೆ ನೀಡಲಾಗಿದೆ. ದೆಹಲಿ, ಬಿಹಾರ, ಜಾರ್ಖಂಡ್, ಪಂಜಾಬ್, ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಶುಕ್ರವಾರ ಶಾಲಾ, ಕಾಲೇಜು ಮತ್ತು ಕಚೇರಿಗಳಿಗೆ ರಜೆ ಘೋಷಿಸಲಾಗಿದೆ.
ಮಧ್ಯಪ್ರದೇಶದ ಗ್ವಾಲಿಯರ್ ನ ಶಿಂದೆ ಕಿ ಚವ್ವಾಣಿ ಎಂಬ ಗ್ರಾಮದಲ್ಲಿ 1924ರಲ್ಲಿ ಕೃಷ್ಣದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ದಂಪತಿ ಪುತ್ರನಾಗಿ ಜನಿಸಿದ ಅಟಲ್ ಬಿಹಾರಿ ವಾಜಪೇಯಿ ಅವರು, ಕಾನ್ಪುರದ ಲಕ್ಷ್ಮೀಬಾಯಿ ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರದಲ್ಲಿ ಮಾಸ್ಟರ್ ಡಿಗ್ರಿ ಪಡೆದರು. ನಂತರ 1942ರಲ್ಲಿ ಕ್ವಿಟ್ ಇಂಡಿಯ ಚಳವಳಿಯ ಮೂಲಕ ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಸ್ನೇಹ ಸಂಪಾದಿಸಿದರು. ಅಟಲ್ ಜೀ ಅವರು ವೀರ ಅರ್ಜುನ ಹಾಗೂ ಪಾಂಚಜನ್ಯ ಪತ್ರಿಕೆಗಳಿಗೆ ಪತ್ರಕರ್ತರಾಗಿ ಕವಿಯಾಗಿಯೂ ಸೇವೆ ಸಲ್ಲಿಸಿದ್ದರು.