ತಿರುವನಂತಪುರ: ವಿಶ್ವದೆಲ್ಲೆಡೆ ಕೆಲಸ ಮಾಡುತ್ತಿರುವ ಎಲ್ಲಾ ಮಲಯಾಳಿಗಳು ತಮ್ಮ ಒಂದು ತಿಂಗಳ ವೇತನವನ್ನು ಕೇರಳ ಪ್ರವಾಹ ಸಂತ್ರಸ್ತರಿಗೆ ನೀಡುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮನವಿ ಮಾಡಿದ್ದಾರೆ.
ಈ ಬಗ್ಗೆ ಫೇಸ್ಬುಕ್'ನಲ್ಲಿ ಪೋಸ್ಟ್ ಮಾಡಿರುವ ಅವರು, ಜಗತ್ತಿನಾದ್ಯಂತ ಇರುವ ಮಲಯಾಳಿಗಳು ಒಗ್ಗತಾಗಿ ನಿಂತರೆ ನಾವು ಎಂತಹ ಕಷ್ಟವನ್ನೇ ಆದರೂ ಗೆದ್ದು ಬರಬಹುದು. ಕೇರಳವನ್ನು ಮರುನಿರ್ಮಿಸಲು ಹಣದ ತೊಡಕಾಗಬಾರದು. ಜಗತ್ತಿನಾದ್ಯಂತ ಇರುವ ಎಲ್ಲಾ ಮಲಯಾಳಿಗಳು ತಮ್ಮ ಒಂದು ತಿಂಗಳ ವೇತನವನ್ನು ನೀಡಲಿ. ಈ ಬಗ್ಗೆ ನಾವೆಲ್ಲರೂ ಆಲೋಚಿಸಬೇಕಿದೆ. ಪ್ರತಿಯೊಬ್ಬರೂ ತಮ್ಮ ಒಂದು ತಿಂಗಳ ವೇತನವನ್ನು ಒಟ್ಟಿಗೆ ನೀಡಲು ಸಾಧ್ಯವಿಲ್ಲ. ಆದರೆ, ನೀವು ಅದನ್ನು ಹತ್ತು ತಿಂಗಳ ಅವಧಿಯಲ್ಲಿ ನೀಡಬಹುದು" ಎಂದು ಅವರು ಹೇಳಿದ್ದಾರೆ.
ಶತಮಾನದಲ್ಲೇ ಮೊದಲ ಬಾರಿಗೆ ಇಂತಹ ಭೀಕರ ಪ್ರವಾಹಕ್ಕೆ ಕೇರಳ ತುತ್ತಾಗಿದೆ. ಇದರಿಂದ ರಾಜ್ಯಕ್ಕೆ 19, 512 ಕೋಟಿ ರೂ. ನಷ್ಟವಾಗಿದೆ. ಈಗಾಗಲೇ ಕೇರಳ ಪ್ರವಾಹ ಪರಿಹಾರವಾಗಿ ಹಲವು ರಾಜ್ಯಗಳು, ಕೇಂದ್ರ ಸರ್ಕಾರ, ಸಂಘ ಸಂಸ್ಥೆಗಳು ಮತ್ತು ಉದ್ಯಮಿಗಳು ಹಣಕಾಸಿನ ನೆರವು ನೀಡಿದ್ದಾರೆ. ಅಷ್ಟೇ ಅಲ್ಲದೆ, ಆಂಧ್ರಪ್ರದೇಶದ ಹಲವಾರು ಸಂಸದರು ಮತ್ತು ಐಎಎಸ್ ಅಧಿಕಾರಿಗಳ ಸಂಘ ಕೇರಳವನ್ನು ಬೆಂಬಲಿಸಲು ತಮ್ಮ ಒಂದು ದಿನದ ವೇತನವನ್ನು ದೇಣಿಗೆಯಾಗಿ ನೀಡಿದ್ದಾರೆ.