ಸಕಲ ಸರ್ಕಾರಿ ಗೌರವದೊಂದಿಗೆ ಕರುಣಾನಿಧಿ ಅಂತ್ಯಕ್ರಿಯೆ; ಪಂಚಭೂತಗಳಲ್ಲಿ ಲೀನವಾದ ದ್ರಾವಿಡ ನಾಯಕ

ಚೆನ್ನೈನ ಮರೀನಾ ಬೀಚ್​ನಲ್ಲಿರುವ ಅಣ್ಣಾ ದೊರೈ ಸಮಾಧಿ ಪಕ್ಕದಲ್ಲೇ ಕರುಣಾನಿಧಿಯವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. 

Last Updated : Aug 8, 2018, 07:40 PM IST
ಸಕಲ ಸರ್ಕಾರಿ ಗೌರವದೊಂದಿಗೆ ಕರುಣಾನಿಧಿ ಅಂತ್ಯಕ್ರಿಯೆ; ಪಂಚಭೂತಗಳಲ್ಲಿ ಲೀನವಾದ ದ್ರಾವಿಡ ನಾಯಕ title=

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ, ಡಿಎಂಕೆ ನಾಯಕ, ದಕ್ಷಿಣ ಭಾರತದ ದ್ರಾವಿಡ ಚಳವಳಿಯ ಪ್ರಮುಖ ನಾಯಕ ಎಂ.ಕರುಣಾನಿಧಿ (94) ಅವರ ಅಂತ್ಯಸಂಸ್ಕಾರವನ್ನು ಮರೀನಾ ಬೀಚ್​ನಲ್ಲಿ ದ್ರಾವಿಡ ಸಂಪ್ರದಾಯದಂತೆ ಬುಧವಾರ ಸಂಜೆ ನೆರವೇರಿಸಲಾಯಿತು. 

ರಾಜಾಜಿ ಹಾಲ್​ನಿಂದ ಮರೀನಾ ಬೀಚ್​ವರೆಗೆ 3 ಕಿ.ಮೀ. ಅಂತಿಮ ಯಾತ್ರೆ ನಂತರ ಮರೀನಾ ಬೀಚ್​ನಲ್ಲಿರುವ ಅಣ್ಣಾ ದೊರೈ ಸಮಾಧಿ ಪಕ್ಕದಲ್ಲೇ ಕರುಣಾನಿಧಿಯವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. 

ಕರುಣಾನಿಧಿ ಅವರನ್ನು ಶ್ರೀಗಂಧದ ಪೆಟ್ಟಿಗೆಯಲ್ಲಿಟ್ಟು ಕಪ್ಪು ಕನ್ನಡಕದೊಂದಿಗೇ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಪೆಟ್ಟಿಗೆಯ ಒಂದು ಕಡೆ 'A person who continued to work without rest, now takes rest' ಎಂದು, ಮತ್ತೊಂದು ಬದಿ ಕಲೈಂಗರ್ ಕರುಣಾನಿಧಿ, ಡಿಎಂಕೆ ಅಧ್ಯಕರು ಎಂದು ತಮಿಳಿನಲ್ಲಿ ಬರೆಯಲಾಗಿತ್ತು.

ಕರುಣಾನಿಧಿ ಅವರ ಕುಟುಂಬಸ್ಥರು ಅಂತಿಮ ವಿಧಿ ವಿಧಾನ ನೆರವೇರಿಸಿದರು. ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ, ಕಾಂಗ್ರೆಸ್​ ಹಿರಿಯ ನಾಯಕ ಗುಲಾಂ ನಬಿ ಆಜಾದ್​, ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್​. ಚಂದ್ರಬಾಬು ನಾಯ್ಡು, ಟಿಎಂಸಿ ನಾಯಕ ಡೆರೆಕ್ ಒ ಬ್ರಿಯಾನ್ ಸೇರಿದಂತೆ ಹಲವು ರಾಜಕೀಯ ನಾಯಕರು ಅಂತ್ಯಸಂಸ್ಕಾರಕ್ಕೆ ಸಾಕ್ಷಿಯಾದರು. ಲಕ್ಷಾಂತರ ಮಂದಿ ಬೆಂಬಲಿಗರು ಮತ್ತು ತಮಿಳುನಾಡಿನ ಜನತೆ ಕಣ್ಮರೆಯಾದ ತಮಿಳುನಾಡಿನ ಸೂರ್ಯನಿಗೆ ಕಂಬನಿ ಮಿಡಿದರು. 

ಜ್ವರ ಹಾಗೂ ಮೂತ್ರನಾಳ ಸೋಂಕಿನಿಂದ ಬಳಲುತ್ತಿದ್ದ ಡಿಎಂಕೆ ನಾಯಕ ಎಂ.ಕರುಣಾನಿಧಿ(94) ಅವರನ್ನು ಜುಲೈ 28ರಂದು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಕಳೆದ ಒಂದು ವಾರದಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂ.ಕರುಣಾನಿಧಿ ಮಂಗಳವಾರ ಸಂಜೆ ಕೊನೆಯುಸಿರೆಳೆದಿದ್ದರು. 

Trending News