ಜಮ್ಮು-ಕಾಶ್ಮೀರ: ಕಲಂ 35-ಎ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ

ಕಲಂ 35-ಎ ಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಒಟ್ಟು ಮೂರು ಪಿಐಎಲ್ ಸುಪ್ರೀಂ ಕೋರ್ಟ್ ನಲ್ಲಿ ದಾಖಲಾಗಿದೆ. 

Last Updated : Aug 6, 2018, 02:13 PM IST
ಜಮ್ಮು-ಕಾಶ್ಮೀರ: ಕಲಂ 35-ಎ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ title=

ನವದೆಹಲಿ: ಜಮ್ಮು ಕಾಶ್ಮೀರದ ನಾಗರೀಕರಿಗೆ ನೀಡಲಾಗಿರುವ ವಿಶೇಷಾಧಿಕಾರ ಕಲಂ 35-ಎ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಆಗಸ್ಟ್ 27ಕ್ಕೆ ಮುಂದೂಡಿದೆ.

ಕಲಂ 35-ಎ ಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಒಟ್ಟು ಮೂರು ಪಿಐಎಲ್ ದಾಖಲಾಗಿದ್ದು, ಈ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸೋಮವಾರಕ್ಕೆ ನಿಗದಿಮಾಡಿತ್ತು. ತ್ರಿಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಬೇಕಿತ್ತು. ಆದರೆ ಮೂವರು ನ್ಯಾಯಮೂರ್ತಿಗಳಲ್ಲಿ ಓರ್ವ ನ್ಯಾಯಮೂರ್ತಿ ಇಂದು ಗೈರಾಗಿದ್ದ ಕಾರಣ ಹಾಗೂ ವಿಚಾರಣೆ ಮುಂದೂಡುವಂತೆ ಜಮ್ಮು ಕಾಶ್ಮೀರ ಸರ್ಕಾರ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಈ ಅರ್ಜಿ ವಿಚಾರಣೆಯನ್ನು ಆಗಸ್ಟ್ 27ಕ್ಕೆ ಮುಂದೂಡಿದ್ದಾರೆ.

ಕಲಂ 35-ಎ ಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸ್ವಯಂ ಸೇವಾ ಸಂಸ್ಥೆಯೊಂದು ಅರ್ಜಿ ಸಲ್ಲಿಸಿತ್ತು. ಇನ್ನು ಕಲಂ 35-ಎ ವಿಚಾರಣೆಗೆ ಸುಪ್ರೀಂ ಕೋರ್ಟ್ ಮುಂದಾಗಿರುವುದನ್ನು ಪ್ರತಿಭಟಿಸಿ ಪ್ರತ್ಯೇಕತಾವಾದಿ ಸಂಘಟನೆ ಕರೆ ನೀಡಿದ್ದ ಎರಡು ದಿನಗಳ ಬಂದ್ ಗೆ ಭಾನುವಾರ ಕಾಶ್ಮೀರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸೋಮುವಾರದ ವಿಚಾರಣೆಯನ್ನು ಮುಂದೂಡುವಂತೆ ಜಮ್ಮು-ಕಾಶ್ಮೀರ ಸರ್ಕಾರವು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. 

ಕಲಂ 35-ಎ ಜಮ್ಮು ಕಾಶ್ಮೀರದ ನಾಗರೀಕರಿಗೆ ಮಾತ್ರ ಆಸ್ತಿ, ಶಿಕ್ಷಣ, ಉದ್ಯೋಗದಲ್ಲಿ ವಿಶೇಷ ಅಧಿಕಾರ ನೀಡುವುದರ ಬಗ್ಗೆ ತಿಳಿಸುತ್ತದೆ. ಕಲಂ 35-ಎ ಪ್ರಕಾರ, ಆ ರಾಜ್ಯದ ಶಾಶ್ವತ ನಿವಾಸಿಗಳು ಅಂದರೆ ಸ್ಥಳೀಯ ನಿವಾಸಿಗಳನ್ನು ಬಿಟ್ಟು, ಹೊರರಾಜ್ಯದವರು ಕಣಿವೆ ರಾಜ್ಯದಲ್ಲಿ ಸ್ಥಿರಾಸ್ತಿ ಖರೀದಿಸಲು ಅವಕಾಶವಿಲ್ಲ. ಅಲ್ಲದೆ, ಸರ್ಕಾರಿ ಕೆಲಸಗಳ ನೇಮಕಾತಿ, ವಿದ್ಯಾರ್ಥಿವೇತನ ಹಾಗೂ ಸಾರ್ವಜನಿಕ ಕಲ್ಯಾಣಾಭಿವೃದ್ಧಿ ಯೋಜನೆಗಳ ಲಾಭ ಪಡೆಯಲು ಸ್ಥಳೀಯರಷ್ಟೇ ಅರ್ಹರು.

ದೇಶದ ಯಾವುದೇ ಭಾಗದಲ್ಲಿ ಆಸ್ತಿ ಹೊಂದುವುದು ಭಾರತದ ನಾಗರೀಕರ ಮೂಲಭೂತ ಹಕ್ಕಾಗಿದೆ. ಆದರೆ ಇದನ್ನು ಕಲಂ 35-ಎ ಉಲ್ಲಂಘಿಸುತ್ತದೆ. ದೇಶದ ಸಂವಿಧಾನಕ್ಕೆ ಸಂಸತ್ ನಲ್ಲಿ ಮಾತ್ರ ತಿದ್ದುಪಡಿ ತರಲು ಸಾಧ್ಯ. ಆದರೆ, ರಾಷ್ಟ್ರಪತಿಗಳ ವಿಶೇಷಾಧಿಕಾರ ಬಳಸಿ ಕಲಂ 35-ಎ ಅಧಿಸೂಚನೆ ಹೊರಡಿಸಲಾಗಿದೆ. ಈ ವಿಧಿ ಒಂದು ತಿದ್ದುಪಡಿ ಕೂಡ ಅಲ್ಲ ಎಂಬುದು ಅರ್ಜಿದಾರರ ವಾದವಾಗಿದ್ದು, ಕಲಂ 35-ಎ ಅನ್ನು ರದ್ದುಮಾಡುವಂತೆ ಕೋರಿ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದೆ.
 

Trending News