ISRO: ಭಾರತದ ಬಾಹ್ಯಾಕಾಶ ವ್ಯಾಪ್ತಿಯನ್ನು ಹೆಚ್ಚಿಸುತ್ತಿವೆ ಶ್ರೀಹರಿಕೋಟಾ ಮತ್ತು ಕುಲಶೇಕರಪಟ್ಟಿನಂ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ನಿರ್ದೇಶಕರಾದ ಎಸ್.ಸೋಮನಾಥ್ ಅವರು ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಕುಲಶೇಕರಪಟ್ಟಿನಂ ಬಾಹ್ಯಾಕಾಶ ಕೇಂದ್ರ ಕಾರ್ಯಾಚರಣೆಗೆ ಮುಕ್ತವಾಗಲಿದೆ ಎಂದು ಘೋಷಿಸಿದ್ದಾರೆ. ಈ ಬಾಹ್ಯಾಕಾಶ ಕೇಂದ್ರ ಸಣ್ಣ ಉಪಗ್ರಹಗಳ ಉಡಾವಣೆಯ ಸಲುವಾಗಿಯೇ ವಿಶೇಷವಾಗಿ ಸಿದ್ಧಗೊಂಡಿದೆ. ಕುಲಶೇಕರಪಟ್ಟಿನಂ ಬಾಹ್ಯಾಕಾಶ ಕೇಂದ್ರದ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ 28ರಂದು ಶಂಕುಸ್ಥಾಪನೆ ನೆರವೇರಿಸಿದರು. ಇದರ ಬಳಿಕ ಮಾತನಾಡಿದ ಇಸ್ರೋ ಮುಖ್ಯಸ್ಥರಾದ ಸೋಮನಾಥ್ ಅವರು, ಇಸ್ರೋದ ಎರಡನೇ ಉಪಗ್ರಹ ಉಡಾವಣಾ ಕೇಂದ್ರ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಗಳಿವೆ ಎಂದರು.

Written by - Girish Linganna | Last Updated : Mar 1, 2024, 05:15 PM IST
  • ಮುಂದಿನ ಎರಡು ವರ್ಷಗಳಲ್ಲಿ ಕುಲಶೇಕರಪಟ್ಟಿನಂ ಬಾಹ್ಯಾಕಾಶ ಕೇಂದ್ರ ಕಾರ್ಯಾಚರಣೆಗೆ ಮುಕ್ತವಾಗಲಿದೆ
  • ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ನಿರ್ದೇಶಕ ಎಸ್.ಸೋಮನಾಥ್ ಘೋಷಣೆ
  • ಕುಲಶೇಕರಪಟ್ಟಿನಂ ಬಾಹ್ಯಾಕಾಶ ಕೇಂದ್ರದ ನಿರ್ಮಾಣಕ್ಕೆ ಪ್ರಧಾನಿ ಮೋದಿಯವರಿಂದ ಫೆ.28ರಂದು ಶಂಕುಸ್ಥಾಪನೆ
ISRO: ಭಾರತದ ಬಾಹ್ಯಾಕಾಶ ವ್ಯಾಪ್ತಿಯನ್ನು ಹೆಚ್ಚಿಸುತ್ತಿವೆ ಶ್ರೀಹರಿಕೋಟಾ ಮತ್ತು ಕುಲಶೇಕರಪಟ್ಟಿನಂ title=
ಮಹತ್ತರ ಸಾಧನೆಯತ್ತ ಇಸ್ರೋ

Indian Space Research Organisation: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ನಿರ್ದೇಶಕರಾದ ಎಸ್.ಸೋಮನಾಥ್ ಅವರು ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಕುಲಶೇಕರಪಟ್ಟಿನಂ ಬಾಹ್ಯಾಕಾಶ ಕೇಂದ್ರ ಕಾರ್ಯಾಚರಣೆಗೆ ಮುಕ್ತವಾಗಲಿದೆ ಎಂದು ಘೋಷಿಸಿದ್ದಾರೆ. ಈ ಬಾಹ್ಯಾಕಾಶ ಕೇಂದ್ರ ಸಣ್ಣ ಉಪಗ್ರಹಗಳ ಉಡಾವಣೆಯ ಸಲುವಾಗಿಯೇ ವಿಶೇಷವಾಗಿ ಸಿದ್ಧಗೊಂಡಿದೆ. ಕುಲಶೇಕರಪಟ್ಟಿನಂ ಬಾಹ್ಯಾಕಾಶ ಕೇಂದ್ರದ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ 28ರಂದು ಶಂಕುಸ್ಥಾಪನೆ ನೆರವೇರಿಸಿದರು. ಇದರ ಬಳಿಕ ಮಾತನಾಡಿದ ಇಸ್ರೋ ಮುಖ್ಯಸ್ಥರಾದ ಸೋಮನಾಥ್ ಅವರು, ಇಸ್ರೋದ ಎರಡನೇ ಉಪಗ್ರಹ ಉಡಾವಣಾ ಕೇಂದ್ರ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಗಳಿವೆ ಎಂದರು.

ಒಟ್ಟು 2,233 ಎಕರೆಗಳಷ್ಟು ವಿಶಾಲ ಪ್ರದೇಶದಲ್ಲಿರುವ ಈ ನೂತನ ಬಾಹ್ಯಾಕಾಶ ಕೇಂದ್ರ ತೂತುಕುಡಿ ಜಿಲ್ಲೆಯ ಅಭಿವೃದ್ಧಿಗೆ ನೆರವಾಗುವ ನಿರೀಕ್ಷೆಗಳಿವೆ. ಈ ಬಾಹ್ಯಾಕಾಶ ಕೇಂದ್ರ ಪ್ರಸ್ತುತ ಕಾರ್ಯಾಚರಿಸುತ್ತಿರುವ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸಲಿದೆ. ಒಟ್ಟಾರೆಯಾಗಿ 950 ಕೋಟಿ ರೂ.ಗಳ ಹೂಡಿಕೆಯೊಡನೆ, ಈ ಯೋಜನೆ ಭಾರತದ ಬಾಹ್ಯಾಕಾಶ ಅನ್ವೇಷಣಾ ಪ್ರಯತ್ನಗಳನ್ನು ಇನ್ನಷ್ಟು ಮುಂದುವರಿಯುವಂತೆ ಮಾಡಲಿದೆ. ಕುಲಶೇಕರಪಟ್ಟಿನಂನ ನೂತನ ಕೇಂದ್ರವನ್ನು ವಿಶೇಷವಾಗಿ ಸ್ಮಾಲ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (SSLV)ಗಳ ಉಡಾವಣೆಯ ಸಲುವಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಇದು ಸಣ್ಣ ಉಪಗ್ರಹಗಳನ್ನು ಅವುಗಳ ಉದ್ದೇಶಿತ ಕಕ್ಷೆಗೆ ಜೋಡಿಸಲು ನೆರವಾಗಲಿದೆ. ಅದರೊಡನೆ ಈ ನೂತನ ಬಾಹ್ಯಾಕಾಶ ಕೇಂದ್ರ ಪ್ರತಿವರ್ಷವೂ 24 ಉಪಗ್ರಹಗಳ ಉಡಾವಣೆ ನೆರವೇರಿಸುವ ಸಾಮರ್ಥ್ಯ ಹೊಂದಿರಲಿದೆ.

ನೂತನ ಬಾಹ್ಯಾಕಾಶ ಕೇಂದ್ರದ ನಿರ್ಮಾಣ ಕಾಮಗಾರಿಯ ಆರಂಭವನ್ನು ಸಂಕೇತಿಸುವ ಸಲುವಾಗಿ, ಬುಧವಾರ ಸಾಗಿಸಬಲ್ಲ ವೇದಿಕೆಯಿಂದ ಉಡಾವಣೆಗೊಳಿಸಲಾದ ರೋಹಿಣಿ ಸೌಂಡಿಂಗ್ ರಾಕೆಟ್ ಬಹುತೇಕ 60 ಕಿಲೋಮೀಟರ್‌ಗಳಷ್ಟು ಎತ್ತರಕ್ಕೆ ಸಾಗಬಲ್ಲದಾಗಿದೆ ಎಂದು ಸೋಮನಾಥ್ ವಿವರಿಸಿದ್ದಾರೆ. ಇಸ್ರೋ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಯಾವುದಾದರೂ ಉಪಗ್ರಹವನ್ನು ಉಡಾವಣೆಗೊಳಿಸುವಾಗ, ರಾಕೆಟ್ ಮೊದಲಿಗೆ ಪೂರ್ವ ದಿಕ್ಕಿನೆಡೆಗೆ ಚಲಿಸಿ, ಬಳಿಕ ತನ್ನ ಪಥವನ್ನು ದಕ್ಷಿಣಕ್ಕೆ ಬದಲಿಸುತ್ತದೆ. ರಾಕೆಟ್ ಶ್ರೀಹರಿಕೋಟಾದ ದಕ್ಷಿಣ ದಿಕ್ಕಿನಲ್ಲಿರುವ ಶ್ರೀಲಂಕಾದ ಮೇಲಿನಿಂದ ಹಾರಾಡುವುದನ್ನು ತಪ್ಪಿಸುವ ಸಲುವಾಗಿ ಈ ರೀತಿ ರಾಕೆಟ್‌ನ ಪಥ ಬದಲಾವಣೆ ನಡೆಸಲಾಗುತ್ತದೆ.

ಆದರೆ, ಕುಲಶೇಕರಪಟ್ಟಿನಂ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳುವ ರಾಕೆಟ್‌ಗಳು ನೇರವಾಗಿ ದಕ್ಷಿಣಕ್ಕೆ ಚಲಿಸಲು ಸಾಧ್ಯವಿರುವುದರಿಂದ, ಈ ರೀತಿ ಪಥ ಬದಲಾವಣೆ ನಡೆಸುವ ಅವಶ್ಯಕತೆ ಇರುವುದಿಲ್ಲವೆಂದು ಸೋಮನಾಥ್ ವಿವರಿಸಿದ್ದಾರೆ. ಅದರೊಡನೆ ಶ್ರೀಹರಿಕೋಟಾಗೆ ಹೋಲಿಸಿದರೆ, ಕುಲಶೇಕರಪಟ್ಟಿನಂ ಬಾಹ್ಯಾಕಾಶ ಕೇಂದ್ರ ಸಮಭಾಜಕ ವೃತ್ತಕ್ಕೆ ಸಮೀಪದಲ್ಲಿರುವುದರಿಂದ, ಈ ಅಂಶಗಳು ಇಂಧನ ಉಳಿತಾಯ ನಡೆಸಲೂ ನೆರವಾಗಲಿವೆ.

ಇಸ್ರೋ ಕಡಿಮೆ ತೂಕ ಹೊಂದಿರುವ ಉಪಗ್ರಹಗಳನ್ನು ಉಡಾವಣೆಗೊಳಿಸುವ ಉದ್ದೇಶದಿಂದಲೇ SSLVಯನ್ನು ಅಭಿವೃದ್ಧಿಪಡಿಸಿದೆ ಎಂದು ಸೋಮನಾಥ್ ವಿವರಿಸಿದ್ದಾರೆ. ಈ ಉಡಾವಣಾ ವಾಹನಗಳು 500ಕೆಜಿಗಿಂತ ಕಡಿಮೆ ತೂಕ ಹೊಂದಿರುವ ಉಪಗ್ರಹಗಳನ್ನು ಭೂಮಿಯ ಕೆಳ ಕಕ್ಷೆಗೆ ತಲುಪಿಸಲು ಸಮರ್ಥವಾಗಿದೆ. ಆದರೆ ಶ್ರೀಹರಿಕೋಟಾದಿಂದ ಉಡಾವಣೆಗೊಳ್ಳುವ ರಾಕೆಟ್‌ಗಳು ಹೆಚ್ಚಿನ ವ್ಯಾಪ್ತಿಯನ್ನು ಕ್ರಮಿಸುವ ಅವಶ್ಯಕತೆ ಇರುವುದರಿಂದ, ಇದರ ವೆಚ್ಚ ಹೆಚ್ಚಾಗುತ್ತದೆ. ಇದಕ್ಕಾಗಿ ಶ್ರೀಹರಿಕೋಟಾದಿಂದ ಉಡಾವಣೆಗೊಳ್ಳುವ ರಾಕೆಟ್‌ಗಳು ಹೆಚ್ಚಿನ ಇಂಧನ ಒಯ್ಯಬೇಕಾಗುತ್ತದೆ. ಹಾಗಾಗಿ ಹೆಚ್ಚಿನ ಪೇಲೋಡ್ ಹೊತ್ತೊಯ್ಯುವ ರಾಕೆಟ್‌ನ ಸಾಮರ್ಥ್ಯ ಕುಂಠಿತವಾಗುತ್ತದೆ. ಈ ಕಾರಣಗಳಿಂದಲೇ ಇಸ್ರೋದ ವಿಜ್ಞಾನಿಗಳಿಗೆ ಶ್ರೀಹರಿಕೋಟಾದಿಂದ ಸಣ್ಣ ರಾಕೆಟ್‌ಗಳನ್ನು ಉಡಾವಣೆಗೊಳಿಸಲು ಕಷ್ಟಕರವಾಗುತ್ತದೆ ಎಂದು ಸೋಮನಾಥ್ ಹೇಳಿದ್ದಾರೆ.

ಕುಲಶೇಕರಪಟ್ಟಿನಂನಲ್ಲಿ ನಿರ್ಮಾಣವಾಗುತ್ತಿರುವ ನೂತನ ಬಾಹ್ಯಾಕಾಶ ಕೇಂದ್ರ ಈ ಸಮಸ್ಯೆಗಳನ್ನು ನಿವಾರಿಸಲು ನೆರವಾಗುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಅದರೊಡನೆ ತಿರುನಲ್ವೇಲಿ ಜಿಲ್ಲೆಯ ಮಹೇಂದ್ರಗಿರಿಯಲ್ಲಿರುವ ಇಸ್ರೋದ ಪ್ರೊಪಲ್ಷನ್ ರಿಸರ್ಚ್ ಕಾಂಪ್ಲೆಕ್ಸ್ ಸಹ ಕುಲಶೇಕರಪಟ್ಟಿನಂ ಬಾಹ್ಯಾಕಾಶ ಕೇಂದ್ರಕ್ಕೆ ಸಾಕಷ್ಟು ಸನಿಹದಲ್ಲಿದೆ. ಈ ಕೇಂದ್ರದಲ್ಲೇ ರಾಕೆಟ್ ಪ್ರೊಪೆಲ್ಲೆಂಟ್‌ಗಳನ್ನು ಅಭಿವೃದ್ಧಿಪಡಿಸಿ, ಪರೀಕ್ಷಿಸಿ, ಬಳಿಕ ಉಡಾವಣೆಗಾಗಿ 780 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಶ್ರೀಹರಿಕೋಟಾಗೆ ಕಳುಹಿಸಲಾಗುತ್ತದೆ.

ಆದರೆ ಕುಲಶೇಕರಪಟ್ಟಿನಂ ಬಾಹ್ಯಾಕಾಶ ಕೇಂದ್ರ ಪ್ರೊಪಲ್ಷನ್ ರಿಸರ್ಚ್ ಕಾಂಪ್ಲೆಕ್ಸ್‌ನಿಂದ ಕೇವಲ 88 ಕಿಲೋಮೀಟರ್ ದೂರದಲ್ಲಿದ್ದು, ಇದು ಬಹಳಷ್ಟು ಸಮಯ ಉಳಿಸಿ, ರಾಕೆಟ್ ಬಿಡಿಭಾಗಗಳನ್ನು ಸುರಕ್ಷಿತವಾಗಿ ಸಾಗಿಸಲು ನೆರವಾಗುತ್ತದೆ. ಈ ಎಲ್ಲಾ ಅನುಕೂಲತೆಗಳು ಕುಲಶೇಕರಪಟ್ಟಿನಂ ಬಾಹ್ಯಾಕಾಶ ಕೇಂದ್ರವನ್ನು ಹೆಚ್ಚು ದಕ್ಷ ಆಯ್ಕೆಯನ್ನಾಗಿಸುತ್ತದೆ. ಕುಲಶೇಕರಪಟ್ಟಿನಂ ಬಾಹ್ಯಾಕಾಶ ಕೇಂದ್ರಕ್ಕಾಗಿ ತಮಿಳುನಾಡು ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಇದು ಬಾಹ್ಯಾಕಾಶ ವಲಯದಲ್ಲಿ 100% ವಿದೇಶೀ ನೇರ ಬಂಡವಾಳ ಹೂಡಿಕೆಗೆ (FDI) ಪೂರಕವಾಗಿದೆ.

ಇದರೊಡನೆ, ತಮಿಳುನಾಡು ಸರ್ಕಾರ ಜಿಲ್ಲೆಯಲ್ಲಿ 2,000 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಸ್ಪೇಸ್ ಇಂಡಸ್ಟ್ರಿಯಲ್ ಆ್ಯಂಡ್ ಪ್ರೊಪೆಲ್ಲೆಂಟ್ಸ್ ಪಾರ್ಕ್ ನಿರ್ಮಿಸಲು ಸಿದ್ಧತೆ ನಡೆಸುತ್ತಿದೆ. ಈ ಹೆಜ್ಜೆ ತಮಿಳುನಾಡಿನ ಪ್ರದೇಶದಲ್ಲಿ ಬಾಹ್ಯಾಕಾಶ ವಲಯದ ಉದ್ಯಮಗಳಿಗೆ ಪೂರಕ ವಾತಾವರಣ ಕಲ್ಪಿಸುವ ಗುರಿ ಹೊಂದಿದೆ. ತಜ್ಞರು ಕುಲಶೇಕರಪಟ್ಟಿನಂ ಸನಿಹದಲ್ಲಿ ಇದಕ್ಕೆ ಪೂರಕವಾದ ಹಲವು ಉದ್ಯಮಗಳ ಅಭಿವೃದ್ಧಿ ಹೊಂದಿ, ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಿ, ತೂತುಕುಡಿ ಜಿಲ್ಲೆಗೆ ವಿವಿಧ ರೀತಿಯ ಅನುಕೂಲ ಕಲ್ಪಿಸಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ದೇಶದ ಎರಡನೇ ಬಾಹ್ಯಾಕಾಶ ಕೇಂದ್ರ ಮತ್ತು ಸ್ಪೇಸ್ ಇಂಡಸ್ಟ್ರಿಯಲ್ ಆ್ಯಂಡ್ ಪ್ರೊಪೆಲ್ಲೆಂಟ್ಸ್ ಪಾರ್ಕ್ ನಿರ್ಮಾಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಣ್ಣ ಉಪಗ್ರಹಗಳ ಉಡಾವಣಾ ವಲಯದಲ್ಲಿ ಭಾರತದ ಕೀರ್ತಿಯನ್ನು ಬಹಳಷ್ಟು ಹೆಚ್ಚಿಸಲಿದೆ. ಅದರೊಡನೆ ಅಪಾರ ಪ್ರಮಾಣದಲ್ಲಿ ಉದ್ಯೋಗಗಳನ್ನು ಸೃಷ್ಟಿಸಿ, ಕುಲಶೇಕರಪಟ್ಟಿನಂ ಕರಾವಳಿ ಪ್ರದೇಶದ ಅಭಿವೃದ್ಧಿಗೆ ನೆರವಾಗಲಿದೆ.

✍︎ ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News