ಪಾಟ್ನಾ: ಬಿಹಾರದ ಬೇವೂರ್ ಜೈಲಿನಲ್ಲಿರುವ ಕೆಲವು ಕೈದಿಗಳು ಜೈಲಿನಿಂದ ತಪ್ಪಿಸಿಕೊಳ್ಳಲು ಯೋಜಿಸುತ್ತಿರುವ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಐಬಿಯಿಂದ ಮಾಹಿತಿ ದೊರೆಯುತ್ತಿದ್ದಂತೆ ಎಚ್ಚೆತ್ತಿರುವ ಬಿಹಾರ ಪೊಲೀಸರು ಬುಧವಾರ ರಾತ್ರಿ ಜೈಲಿನ ಸುತ್ತಲೂ ಭದ್ರತೆಯನ್ನು ಹೆಚ್ಚಿಸಿದ್ದು, ಆವರಣದೊಳಗೆ ಶೋಧ ಕಾರ್ಯಾಚರಣೆ ನಡೆಸಿದರು.
ರಾಜ್ಯದ ಪೊಲೀಸ್ ಆಡಳಿತದ ಆತಂಕವನ್ನು ಹೆಚ್ಚಿಸುವ ಸಂಗತಿಯೆಂದರೆ ಹಲವಾರು ಭೀಕರ ಅಪರಾಧಿಗಳು ಮತ್ತು ಭಯೋತ್ಪಾದಕರನ್ನು ಬೇವೂರ್ ಜೈಲಿನೊಳಗೆ ಶಿಕ್ಷೆ ಅನುಭವಿಸುತ್ತಿದ್ದಾರೆ. 2013 ರಲ್ಲಿ ಪಾಟ್ನಾದ ಗಾಂಧಿ ಮೈದಾನದಲ್ಲಿ ಸರಣಿ ಸ್ಫೋಟಗಳನ್ನು ನಡೆಸಿದ ಭಯೋತ್ಪಾದಕರು ಕೂಡ ಇದೇ ಜೈಲಿನೊಳಗೆ ಇದ್ದಾರೆ.
ಇದಲ್ಲದೆ ಬಾಂಗ್ಲಾದೇಶದ ಕೆಲವು ಭಯೋತ್ಪಾದಕರು, ಹಲವಾರು ನಕ್ಸಲ್ ಕಾರ್ಯಕರ್ತರು ಮತ್ತು ಗಂಭೀರ ಕ್ರಿಮಿನಲ್ ಅಪರಾಧಕ್ಕೆ ಶಿಕ್ಷೆಗೊಳಗಾದವರೂ ಕೂಡ ಬೇವೂರ್ ಜೈಲಿನಲ್ಲೇ ಇದ್ದಾರೆ.
ವಿಶೇಷವೆಂದರೆ, 2005 ರ ಕುಖ್ಯಾತ ಜೆಹಾನಾಬಾದ್ ಜೈಲ್ ಬ್ರೇಕ್ ಪ್ರಕರಣದ ಪ್ರಮುಖ ಆರೋಪಿ ಅಜಯ್ ಕಾನು ಎಂಬ ನಕ್ಸಲೈಟ್ ಕೂಡ ಬೇವೂರ್ ಜೈಲಿನೊಳಗೆ ಶಿಕ್ಷೆ ಅನುಭವಿಸುತ್ತಿದ್ದಾನೆ. ಜೆಹಾನಾಬಾದ್ ಜೈಲ್ ಬ್ರೇಕ್ ಅನ್ನು ಕೂಡ ಜೈಲಿನ ಒಳಗಿನಿಂದ ಯೋಜಿಸಲಾಗಿತ್ತು. ನವೆಂಬರ್ 13, 2005 ರಂದು ಜೆಹಾನಾಬಾದ್ ಜೈಲ್ ಬ್ರೇಕ್ ಯಶಸ್ವಿಯಾಗಿತ್ತು.
ಅಜಯ್ ಕಾನು ಹೊರತುಪಡಿಸಿ, ಉಮರ್ ಸಿದ್ದಿಕಿ, ಅಜರುದ್ದೀನ್, ಇಮ್ತಿಯಾಜ್ ಅನ್ಸಾರಿ, ಅಹ್ಮದ್ ಹುಸೇನ್, ಫಕ್ರುದ್ದೀನ್ ಅಹ್ಮದ್, ಫಿರೋಜ್ ಆಲಂ, ನೊಮನ್ ಅನ್ಸಾರಿ, ಇಫ್ತೇಖರ್ ಆಲಂ, ಹೈದರ್ ಅಲಿ ಮತ್ತು ಮುಜಿಬುಲ್ಲಾ ಮುಂತಾದ ಹಲವಾರು ಭಯೋತ್ಪಾದಕರು ಇದೇ ಜೈಲಿನಲ್ಲಿದ್ದಾರೆ.
ಬೇವೂರ್ ಜೈಲ್ ಬ್ರೇಕ್ನ ಬೆದರಿಕೆ ಜೆಹಾನಾಬಾದ್ ಜೈಲ್ ಬ್ರೇಕ್ ಘಟನೆಯನ್ನು ನೆನಪಿಸುತ್ತದೆ. ಇದರಲ್ಲಿ ನಕ್ಸಲ್ಸ್ ಯೋಜಿಸಿ ದಾಳಿ ನಡೆಸಿ ಕಾನು ಜೈಲಿನಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದರು. ಅಜಯ್ ಕಾನು ಬಿಹಾರ, ಜಾರ್ಖಂಡ್, ಆಂಧ್ರಪ್ರದೇಶ ಮತ್ತು ಒಡಿಶಾ ಸೇರಿದಂತೆ ಹಲವಾರು ರಾಜ್ಯಗಳ ಪೊಲೀಸ್ ಇಲಾಖೆಗಳಿಗೆ ಬೇಕಾದ ಪ್ರಮುಖ ಆರೋಪಿಯಾಗಿದ್ದಾರೆ.