ಕೋಯಿಕ್ಕೋಡ್: ಕೇರಳದಲ್ಲಿ ಮತ್ತೆ ನಿಫಾ ವೈರಸ್ ಭೀತಿ ಎದುರಾಗಿದ್ದು, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯದೆಲ್ಲೆಡೆ ಹೈ ಅಲರ್ಟ್ ಘೋಷಿಸಿದೆ.
ಮಳೆಗಾಲದಲ್ಲಿ ಕೇರಳದಲ್ಲಿ ಕಾಣಿಸಿಕೊಂಡು ಭಾರೀ ತೊಂದರೆ ಉಂಟುಮಾಡಿದ್ದ ನಿಫಾ ವೈರಸ್ ಮತ್ತೆ ಹಲವೆಡೆ ಕಾಣಿಸಿಕೊಂಡಿದ್ದು, ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕಟ್ಟುನಿಟ್ಟಾಗಿ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಹೆಚ್ಚುವರಿ ನಿರ್ದೇಶಕಿ ವಿ.ಮಿನಾಕ್ಷಿ ಪಿಟಿಐಗೆ ಹೇಳಿದ್ದಾರೆ.
ಅಷ್ಟೇ ಅಲ್ಲದೆ ಗ್ರಾಮೀಣಮಟ್ಟದಿಂದಲೂ ಸೋಂಕು ಹರಡುವ ಬಗೆ, ತಡೆಯುವುದು ಹೇಗೆ, ಚಿಕಿತ್ಸಾ ಕ್ರಮಗಳ ಕುರಿತು ಎಲ್ಲ ಪ್ರದೇಶಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ಮತ್ತು ಜಾಗೃತಿ ಮೂಡಿಸಲು ಜಿಲ್ಲಾ ಆರೋಗ್ಯ ಇಲಾಖೆ ಸೂಚನೆ ನೀಡಲಾಗಿದೆ.
ಕಳೆದ ಮೇ ತಿಂಗಳಲ್ಲಿ ನಿಫಾ ವೈರಸ್ ಹರಡುವಿಕೆಯಿಂದಾಗಿ ಕೋಯಿಕ್ಕೋಡ್ ಜಿಲ್ಲೆಯಲ್ಲಿ 17 ಮಂದಿ ಮೃತಪಟ್ಟಿದ್ದರು.