ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಇನ್ನಿಲ್ಲ

ಹಲವು ವರ್ಷಗಳಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದ ಅವರು  2018ರಿಂದೀಚೆಗೆ ತೀವ್ರ ಅನಾರೋಗ್ಯ ಉಂಟಾದ್ದರಿಂದ ನ್ಯೂಯಾರ್ಕ್, ಗೋವಾ, ಮುಂಬೈ ಮತ್ತು ದೆಹಲಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು.  

Last Updated : Mar 17, 2019, 09:46 PM IST
ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಇನ್ನಿಲ್ಲ title=

ಪಣಜಿ: ಗೋವಾ ಮುಖ್ಯಮಂತ್ರಿ ಹಾಗೂ ಭಾರತೀಯ ಜನತಾ ಪಕ್ಷದ ನಾಯಕ ಮನೋಹರ್ ಪರಿಕ್ಕರ್ ಅವರು ಭಾನುವಾರ ರಾತ್ರಿ ಪಣಜಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರಿಗೆ 63 ವರ್ಷ ವಯಸ್ಸಾಗಿತ್ತು.

ಹಲವು ವರ್ಷಗಳಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದ ಅವರು  2018ರಿಂದೀಚೆಗೆ ತೀವ್ರ ಅನಾರೋಗ್ಯ ಉಂಟಾದ್ದರಿಂದ ನ್ಯೂಯಾರ್ಕ್, ಗೋವಾ, ಮುಂಬೈ ಮತ್ತು ದೆಹಲಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು.

ಡಿಸೆಂಬರ್‌ 13, 1955ರಲ್ಲಿ ಗೋವಾದ ಮಾಪುಸಾದಲ್ಲಿ ಜನಿಸಿದ್ದ ಮನೋಹರ್‌ ಪರಿಕ್ಕರ್‌ ಬಾಲ್ಯದಿಂದಲೇ ಆರ್‌ಎಸ್ಎಸ್‌ನಲ್ಲಿ ಆಸಕ್ತಿ ವಹಿಸಿದ್ದರು. ಅಲ್ಲಿಂದ ಅವರ ರಾಜಕೀಯ ಬದುಕು ಬಹುದೊಡ್ಡ ಎತ್ತರಕ್ಕೆ ಬೆಳೆಯಿತು. 

ಮೂರು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಪರಿಕ್ಕರ್, 2014 ರಿಂದ 2017ರ ವರೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ನವೆಂಬರ್ 26, 2014 ರಿಂದ ಸೆಪ್ಟೆಂಬರ್ 2, 2017ರವರೆಗೆ ಉತ್ತರಪ್ರದೇಶದಿಂದ ರಾಜ್ಯಸಭಾ ಎಂಪಿ ಆಗಿ ಕಾರ್ಯನಿರ್ವಹಿಸಿದ್ದರು. 

ಅಷ್ಟಕ್ಕೂ, 2013ರಲ್ಲಿ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಅವರನ್ನು ಪಕ್ಷದಿಂದ ಪ್ರಧಾನಿ ಅಭ್ಯರ್ಥಿಯಾಗಿ ಮೊದಲು ಸೂಚಿಸಿದ್ದೇ ಪರಿಕ್ಕರ್. 2000ನೇ ಇಸವಿಯಲ್ಲಿ ಮೊದಲ ಬಾರಿಗೆ ಗೋವಾ ಮುಖ್ಯಮಂತ್ರಿಯಾದ ಮನೋಹರ್ ಪರಿಕ್ಕರ್ 2005ರವರೆಗೆ ಆಡಳಿತ ನಡೆಸಿದರು. ಬಳಿಕ 2012 ರಿಂದ 2014ರ ವರೆಗೆ ಎರಡನೇ ಮುಖ್ಯಮಂತ್ರಿಯಾಗಿ ಸರ್ಕಾರ ನಡೆಸಿದ ಪರಿಕ್ಕರ್ ಬಳಿಕ ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾಗಿ ಕೇಂದ್ರ ಸಚಿವರಾದರು. 

ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದರೂ ಸಹ ಗೋವಾ ರಾಜ್ಯದ ಬಜೆಟ್ ಮಂಡಿಸಲು ಮೂಗಿಗೆ ಫೈಪ್ ಹಾಕಿಕೊಂಡೇ ಕಲಾಪಕ್ಕೆ ಆಗಮಿಸಿದ ಪರಿಕ್ಕರ್ ಬಜೆಟ್ ಮಂಡಿಸಿ ಕರ್ತವ್ಯ ನಿಷ್ಠೆ ಮೆರೆದಿದ್ದರು. ಆದರೆ ಕಳೆದ ಕೆಲ ದಿನಗಳಿಂದ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. 

Trending News