ಮಾಜಿ ಪ್ರಧಾನಿ ವಾಜಪೇಯಿ ಚಿತಾಭಸ್ಮ ಗಂಗಾನದಿಯಲ್ಲಿ ವಿಸರ್ಜನೆ

ವಾಜಪೇಯಿ ಅವರ ಅಂತ್ಯಕ್ರಿಯೆ ಸ್ಥಳದಿಂದ ಮಡಿಕೆಗಳಲ್ಲಿ ಚಿತಾಭಸ್ಮ ಸಂಗ್ರಹಿಸಿ ತಂದು, ಅದನ್ನು ಹರಿದ್ವಾರದ ಹರ ಕಿ ಪೌರಿ ಪ್ರದೇಶದಲ್ಲಿ ಗಂಗಾ ನದಿಯಲ್ಲಿ ವಿಸರ್ಜಿಸಲಾಯಿತು.

Last Updated : Aug 19, 2018, 03:42 PM IST
ಮಾಜಿ ಪ್ರಧಾನಿ ವಾಜಪೇಯಿ ಚಿತಾಭಸ್ಮ ಗಂಗಾನದಿಯಲ್ಲಿ ವಿಸರ್ಜನೆ title=

ನವದೆಹಲಿ: ಅಜಾತಶತ್ರು, ದೇಶ ಕಂಡ ಮಹಾನ್ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ಭಾನುವಾರ ಗಂಗಾನದಿಯಲ್ಲಿ ವಿಸರ್ಜಿಸಲಾಯಿತು. 

ವಾಜಪೇಯಿ ಅವರ ಪುತ್ರಿ ನಮಿತಾ ಭಟ್ಟಾಚಾರ್ಯ, ಮೊಮ್ಮಗಳು ನಿಹಾರಿಕಾ ಅವರು ಆಗಸ್ಟ್ 16ರಂದು ದೆಹಲಿಯ ಸ್ಮೃತಿ ಸ್ಥಳದಲ್ಲಿ ನಡೆದ ವಾಜಪೇಯಿ ಅವರ ಅಂತ್ಯಕ್ರಿಯೆ ಸ್ಥಳದಿಂದ ಮಡಿಕೆಗಳಲ್ಲಿ ಚಿತಾಭಸ್ಮ ಸಂಗ್ರಹಿಸಿ ತಂದು, ಅದನ್ನು ಹರಿದ್ವಾರದ ಹರ ಕಿ ಪೌರಿ ಪ್ರದೇಶದಲ್ಲಿ ಗಂಗಾ ನದಿಯಲ್ಲಿ ವಿಸರ್ಜಿಸಿದರು. 

ಇದಕ್ಕೂ ಮುನ್ನ ನಡೆದ 'ಅಸ್ಥಿ ಕಳಶ ಯಾತ್ರೆ'ಯಲ್ಲಿ ಗೃಹಸಚಿವ ರಾಜನಾಥ್ ಸಿಂಗ್‌, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವರ್‌ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸೇರಿದಂತೆ ಇತರ ನಾಯಕರು ಪಾಲ್ಗೊಂಡಿದ್ದರು. 

ವಾಜಪೇಯಿ ಅವರ ಅಸ್ತಿಯನ್ನು ದೇಶದ ಪ್ರಮುಖ ನದಿಗಳಲ್ಲಿ ವಿಸರ್ಜನೆ ಮಾಡಲಾಗುತ್ತದೆ. ನಂತರ ರಾಜ್ಯ ರಾಜಧಾನಿ ಹಾಗೂ ಜಿಲ್ಲಾಕೇಂದ್ರಗಳಿಗೆ ಕೊಂಡಯ್ಯಲಾಗುತ್ತದೆ. ರಾಜ್ಯ ರಾಜಧಾನಿ, ಜಿಲ್ಲಾ ಕೇಂದ್ರ ಹಾಗೂ ಪಂಚಾಯಿತಿ ಮಟ್ಟದಲ್ಲಿ ಪ್ರಾರ್ಥನಾ ಸಭೆ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಮುಖಂಡ ಭೂಪೇಂದ್ರ ಯಾದವ್ ತಿಳಿಸಿದ್ದಾರೆ.

ಕಿಡ್ನಿ ಮತ್ತು ಮೂತ್ರನಾಳದ ಸೋಂಕಿನಿಂದ ಬಳಸುತ್ತಿದ್ದ ಮಾಜಿ ಪ್ರಧಾನಿ ವಾಜಪೇಯಿ(93) ಅವರನ್ನು ಜೂ.11ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ 2 ತಿಂಗಳ ಕಾಲ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಆಗಸ್ಟ್ 16 ರಂದು ನಿಧನರಾದರು. 
 

Trending News