ನವದೆಹಲಿ: ಛತ್ತೀಸ್ ಗಡ್ ಎಂದರೆ ಸಾಕು ನಮ್ಮೆಲ್ಲರಿಗೂ ನೆನಪಾಗುವುದು ಅಲ್ಲಿನ ನಕ್ಸಲರ ಅಟ್ಟಹಾಸ ಮತ್ತು ಅಲ್ಲಿನ ಬುಡಕಟ್ಟು ಜನರು ನಕ್ಸಲೀಯ ಚಿಂತನೆಗಳಿಗೆ ಮಾರುಹೋಗಿ ಹಿಂಸಾಚಾರದಲ್ಲಿ ಸಾವನ್ನಪ್ಪುವುದು. ಹಾಗಾದರೆ ಇಂತಹ ಪ್ರದೇಶದಲ್ಲಿ ಈಗಲೂ ಅಷ್ಟೇ ಪ್ರಮಾಣದ ನಕ್ಸಲರ ಅಟ್ಟಹಾಸ ಇನ್ನೂ ಮುಂದುವರೆದಿದೆಯೇ ಅಥವಾ ಏನಾದರೂ ಅಲ್ಲಿ ಬದಲಾವಣೆಯ ಹೆಜ್ಜೆ ಗುರುತುಗಳು ಮೂಡಿವೆಯೇ ಎನ್ನುವುದು ಬಗ್ಗೆ ತಿಳಿಯಲು ಹೊರಟಾಗ ಅಬುಜ್ಮಾಡ್ ಕುರಿತಾದ ಈ ಸಾಕ್ಷ್ಯಚಿತ್ರ ಸಾಕಷ್ಟು ಗಮನ ಸೆಳೆಯುತ್ತದೆ.
ಕನ್ನಡತಿ ಹಾಗೂ ಮೂಲತಃ ಬೆಂಗಳೂರಿನವರಾದ ಜಾಗೃತಿ ದಿಲೀಪ್, ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಸರೋಜಿನಿ ಸ್ಕೂಲ್ ಆಫ್ ಕಮ್ಯುನಿಕೇಶನ್ ನಲ್ಲಿ ಸ್ನಾತ್ತಕೋತ್ತರ ಪದವಿಯನ್ನು ಪಡೆದಿದ್ದಾರೆ.ಇವರು ಹಲವಾರು ದಶಕಗಳ ಕಾಲ ನಕ್ಸಲರ ಪ್ರಭಾವಕ್ಕೆ ಒಳಪಟ್ಟ ಛತ್ತೀಸ್ ಗಡ್ ದಲ್ಲಿ ಈಗ ಆಗಿರುವ ಬದಲಾವಣೆಗಳೇನು? ಅಲ್ಲಿನ ಬುಡಕಟ್ಟು ಜನರಲ್ಲಿ ಏನಾದರೂ ಸಕಾರಾತ್ಮಕ ಬದಲಾವಣೆಗಳಾಗಿವೆಯೇ? ಎನ್ನುವ ಪ್ರಶ್ನೆಗಳಿಗೆ ಉತ್ತರ ಹುಡುಕುವ ಸಣ್ಣ ಪ್ರಯತ್ನವನ್ನು ಈ ಅಬುಜ್ಮಾಡ್ ಕುರಿತ ಸಾಕ್ಷ್ಯ ಚಿತ್ರದ ಮೂಲಕ ಮಾಡಿದ್ದಾರೆ.
ಅಬುಜ್ಮಾದ್ ಅರಣ್ಯ ಪ್ರದೇಶವು ಮುಖ್ಯವಾಗಿ ಮಾರಿಯಾ, ಮುರಿಯಾ, ಗೊಂಡ್, ಹಲ್ಬಾ ಬುಡಕಟ್ಟು ಸಮುದಾಯಗಳನ್ನು ಹೊಂದಿದ್ದು,ಇಲ್ಲಿನ ಜನರು ಇಂದಿಗೂ ಕೂಡ ತಮ್ಮ ಸ್ಥಳೀಯ ಬುಡಕಟ್ಟು ಸಂಸ್ಕೃತಿಯನ್ನು ಜೀವಂತವಾಗಿರಿಸಿಕೊಂಡಿದ್ದಾರೆ.
ಅಬುಜ್ಮಾಡ್ ಸಾಕ್ಷ್ಯಚಿತ್ರವನ್ನು ಈ ಕೆಳಗಿನ ಲಿಂಕ್ ನಲ್ಲಿ ನೋಡಿ:
ಸಾಕ್ಷ್ಯ ಚಿತ್ರದ ಆರಂಭದ ಭಾಗವು ಅಲ್ಲಿನ ನೈಸರ್ಗಿಕ ತಾಣದ ಚಿತ್ರವನ್ನು ನೀಡುತ್ತಲೇ ಅಲ್ಲಿನ ಜನರ ಸಂಸ್ಕೃತಿಯನ್ನು ಪರಿಚಯಿಸುವ ಪ್ರಯತ್ನವನ್ನು ಮಾಡುತ್ತದೆ.ಸ್ಥಳೀಯವಾಗಿ ತಯಾರಿಸುವ ಗೋರ್ಗಾ(ಸಾರಾಯಿ), ಕೋಳಿ ಕಾಳಗ ,ಹಾಗೂ ಮಲೇರಿಯಾ ಹಾಗೂ ಡೆಂಗ್ಯುದಂತಹ ಕಾಯಿಲೆ ಬಂದಾಗ ಅಲ್ಲಿನ ಜನರು ಇದಕ್ಕೆ ಔಷಧಿ ರೂಪದಲ್ಲಿ ನೀಡುವ ಚಪೂರಾ ಚಟ್ನಿ(ಕೆಂಪು ಇರುವೆಗಳಿಂದ ತಯಾರಿಸಿದ), ಮತ್ತು ಅಲ್ಲಿನ ವಾರದ ಸಂತೆಯ ಚಿತ್ರಣಗಳು ಅಲ್ಲಿನ ವೈವಿದ್ಯತೆಗೆ ಕನ್ನಡಿ ಹಿಡಿಯುತ್ತದೆ. ಅಷ್ಟೇ ಅಲ್ಲದೆ ನಕ್ಸಲರ ಪ್ರದೇಶದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡುವಲ್ಲಿ ಪ್ರಮುಖ ಪಾತ್ರವಹಿಸಿರುವ ಸ್ವಾಮೀ ವಿವೇಕಾನಂದ ಆಶ್ರಮ ಶಾಲೆಗಳ ಮಹತ್ವವನ್ನು ಸಾಕ್ಷ್ಯಚಿತ್ರ ಸಾರುತ್ತದೆ.
1980 ರ ಅವಧಿಯಲ್ಲಿ ನಕ್ಸಲೀಯರ ಪ್ರಭಾವದಿಂದಾಗಿ, ಇಲ್ಲಿನ ಅಧಿವಾಸಿಗಳನ್ನು ಹಿಂಸಾಚಾರಕ್ಕೆ ಬಳಸಿಕೊಳ್ಳುವ ಯತ್ನ ನಡೆಯಿತು.ಈ ಸಂದರ್ಭದಲ್ಲಿ ಹಲವರು ಆದಿವಾಸಿಗಳು ತಮ್ಮ ಜೀವವನ್ನು ಕಳೆದುಕೊಳ್ಳಬೇಕಾಯಿತು.ಆದರೆ ಇತ್ತೀಚಿನ ದಿನಗಳಲ್ಲಿ ಈ ಚಿತ್ರಣ ಬದಲಾಗಿರುವುದನ್ನು ಸಾಕ್ಷ್ಯಚಿತ್ರ ಪರಿಣಾಮಕಾರಿಯಾಗಿ ಚಿತ್ರಿಸಿದೆ.ಈಗ ಅಲ್ಲಿ ಪೋಲೀಸರ ಕ್ಯಾಂಪ್ ಗಳನ್ನು ತೆರೆದಿರುವುದರಿಂದಾಗಿ ಹಲವಾರು ಅಭಿವೃದ್ದಿ ಕಾರ್ಯಗಳು ಈ ಅಬುಜ್ಮಾಡ್ ಪ್ರದೇಶದಲ್ಲಿ ಸಾಧ್ಯವಾಗಿವೆ.ಅದು ರಸ್ತೆ ನಿರ್ಮಾಣ, ಶಾಲೆಗಳು, ರಾತ್ರಿ ವೇಳೆ ಬಸ್ ಸಂಚಾರ, ಬುಡಕಟ್ಟು ಜನ್ರರಿಗೆ ವಿಶೇಷ ಆರೋಗ್ಯ ಸೇವೆಯನ್ನು ಒದಗಿಸಲು ಮೋಟರ್ ಸೈಕಲ್ ಅಂಬುಲನ್ಸ್ ಗಳು, ಅಂಗನವಾಡಿ ಕೇಂದ್ರಗಳು ಮಹತ್ವದ ಪಾತ್ರವಹಿಸಿವೆ.ಛತ್ತೀಸ್ ಗಡ್ ನ ನಾರಾಯಣ್ ಪುರ ಜಿಲ್ಲೆಯನ್ನು ಕೇಂದ್ರವಾಗಿಟ್ಟುಕೊಂಡಿರುವ ಸಾಕ್ಷ್ಯಚಿತ್ರ ಈ ಪ್ರದೇಶದಲ್ಲಿನ ಅಭಿವೃದ್ದಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಸೆರೆ ಹಿಡಿದಿದೆ.
ಅಂತಿಮವಾಗಿ ನಕ್ಸಲರು ಬುಡಕಟ್ಟು ಜನರನ್ನು ದುರುಪಯೋಗಪಡಿಸಿಕೊಳ್ಳುವುದರ ವಿರುದ್ಧದ ಹೋರಾಟ ಇನ್ನೂ ಇದೇ ಎಂದು ಹೇಳುತ್ತಲೇ ಕೊನೆಗೆ ಹಳ್ಳಿಗಳ ಅಭಿವೃದ್ದಿ ಮಹತ್ವವನ್ನು ಸಾರುವ ಹಾಡಿನ ಮೂಲಕ ಸಾಕ್ಷ್ಯಚಿತ್ರ ಕೊನೆಗೊಳ್ಳುತ್ತದೆ.