ಶಿಕ್ಷಕರ ದಿನಾಚರಣೆಯನ್ನು ಸೆಪ್ಟೆಂಬರ್ 5ರಂದೇ ಏಕೆ ಆಚರಿಸುತ್ತಾರೆ ಗೊತ್ತಾ!

ದಕ್ಷಿಣ ಭಾರತದ ತಮಿಳುನಾಡಿನ 'ತಿರುತ್ತಣಿ' ಎಂಬಲ್ಲಿ ಸೆಪ್ಟೆಂಬರ್ 5, 1888 ರಲ್ಲಿ ಜನಿಸಿದ ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಣದ ಬಗ್ಗೆ ಅಪಾರ ಗೌರವ, ಪ್ರೀತಿ, ನಿಷ್ಠೆಯನ್ನು ಹೊಂದಿದ್ದರು. ಸ್ವತಃ ಶಿಕ್ಷಕರಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಡಾ. ರಾಧಾಕೃಷ್ಣನ್, ಭಾರತ ಕಂಡ ಅಗ್ರಗಣ್ಯ ಶಿಕ್ಷಕರಲ್ಲಿ ಪ್ರಮುಖರಾಗಿದ್ದಾರೆ. 

Last Updated : Sep 5, 2019, 11:12 AM IST
ಶಿಕ್ಷಕರ ದಿನಾಚರಣೆಯನ್ನು ಸೆಪ್ಟೆಂಬರ್ 5ರಂದೇ ಏಕೆ ಆಚರಿಸುತ್ತಾರೆ ಗೊತ್ತಾ! title=

ಬೆಂಗಳೂರು: ಕಲಿಕೆಗೆ ಕೊನೆಯಿಲ್ಲ. ಶಾಲೆಗಳಲ್ಲಿ ಕಲಿತಿದ್ದು ಮಾತ್ರ ಶಿಕ್ಷಣವಲ್ಲ. ಆದರೆ ಸಮಾಜದಲ್ಲಿ ನಾವು ಉತ್ತಮ ಪ್ರಜೆಯಾಗಿ ಬದುಕಲು ತರಗತಿಗಳಲ್ಲಿ ಶಿಕ್ಷಕರು ಹಾಕಿಕೊಡುವ ಬುನಾದಿ, ನಮ್ಮ ತಪ್ಪುಗಳನ್ನು ತೀಡಿ ತಿದ್ದಿ ನಮಗೆ ಪಠ್ಯ ಪುಸ್ತಕಗಳ ಜೊತೆಗೆ ಬದುಕಿನ ಪಾಠ ಕಲಿಸುವ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ರಾಷ್ಟ್ರವು ಶಿಕ್ಷಕರ ದಿನವನ್ನು ಆಚರಿಸುತ್ತಿರುವುದು ಬಹುಶಃ ಸಮಾಜಕ್ಕೆ ಅವರು ನೀಡಿದ ಕೊಡುಗೆಗೆ ಒಂದು ಸಣ್ಣ ಗೌರವವಾಗಿದೆ.

ಹಿರಿಯ ವಿದ್ಯಾರ್ಥಿಗಳು ಶಿಕ್ಷಕರಾಗಿ ಉಡುಗೆ ತೊಟ್ಟು ಕಿರಿಯ ತರಗತಿಗಳನ್ನು ಕಲಿಸುವ ಶಾಲೆಗಳ ದಿನ ಹಬ್ಬಗಳಿಗಿಂತ ಕಡಿಮೆಯಿಲ್ಲ. ಆಚರಣೆಗಳನ್ನು ಇಡೀ ದಿನ ನಡೆಸಲಾಗುತ್ತದೆ ಮತ್ತು ಶಾಲೆಗಳಲ್ಲಿ ಸಾಮಾನ್ಯವಾಗಿ ಕೆಲವು ವಿಶೇಷ ಚಟುವಟಿಕೆಗಳೊಂದಿಗೆ ಈ ಆಚರಣೆ ನಡೆಯುತ್ತದೆ.

ಇಂತಹ ಆಚರಣೆಗಳು ಎಲ್ಲೆಡೆ ನಡೆಯುತ್ತಿರುವುದರಿಂದ, ಸೆಪ್ಟೆಂಬರ್ 5 ರಂದು ನಾವು ಶಿಕ್ಷಕರ ದಿನವನ್ನು ಆಚರಿಸಲು ಕಾರಣ ಏನು ಎಂಬುದನ್ನು ತಿಳಿಯುವುದು ಬಹಳ ಮುಖ್ಯ.

ಭಾರತೀಯ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ನೀಡುವ ಮೂಲಕ, ಶಿಕ್ಷಣ ಕ್ಷೇತ್ರ, ತತ್ವಜ್ಞಾನ, ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್, ಭಾರತೀಯರ ಮನದಲ್ಲಿ ಅಚ್ಚಳಿಯದ ಛಾಪೊತ್ತಿದ್ದಾರೆ. ಇವರು ಓರ್ವ ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದರು. ಇವರ ಜನ್ಮದಿನವಾದ ಸೆಪ್ಟೆಂಬರ್ 5ರಂದು ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ.

ರಾಧಾಕೃಷ್ಣನ್ ಅವರು ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಮ್ಮ ಗುರು ಉಪರಾಷ್ಟ್ರಪತಿಯಾಗಿ ದೆಹಲಿಗೆ ಹೊರಡುವ ಸಂದರ್ಭದಲ್ಲಿ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು, ಅವರನ್ನು ಕಳುಹಿಸಿ ಕೊಡಲು ಸಾರೋಟನ್ನು ತಂದು ಅಲಂಕರಿಸಿ, ಕುದುರೆಯ ಬದಲು ತಾವೇ ಕುದುರೆಗಳಂತೆ, ರಾಧಾಕೃಷ್ಣನ್ ಅವರು ಕುಳಿತ ಸಾರೋಟನ್ನು ಪ್ರೀತಿಪೂರ್ವಕವಾಗಿ ರೈಲ್ವೆ ನಿಲ್ದಾಣದವರೆಗೂ ಎಳೆದು ಕೊಂಡು ಹೋಗಿ, ಭಾವಪೂರ್ಣ ವಿದಾಯ ಹೇಳಿದ್ದರು. ಈ ಸನ್ನಿವೇಶವನ್ನು ಕಂಡು ರಾಧಾಕೃಷ್ಣನ್ ಅವರು ಭಾವುಕರಾಗಿದ್ದರಂತೆ. ರಾಧಾಕೃಷ್ಣನ್ ಆಗಾಗ ಈ ಸಂದರ್ಭವನ್ನು ನೆನೆಸಿಕೊಳ್ಳುತ್ತಿದ್ದರು ಎನ್ನಲಾಗಿದೆ.

ದಕ್ಷಿಣ ಭಾರತದ ತಮಿಳುನಾಡಿನ 'ತಿರುತ್ತಣಿ' ಎಂಬಲ್ಲಿ ಸೆಪ್ಟೆಂಬರ್ 5, 1888 ರಲ್ಲಿ ಜನಿಸಿದ ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಣದ ಬಗ್ಗೆ ಅಪಾರ ಗೌರವ, ಪ್ರೀತಿ, ನಿಷ್ಠೆಯನ್ನು ಹೊಂದಿದ್ದರು. ಸ್ವತಃ ಶಿಕ್ಷಕರಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಡಾ. ರಾಧಾಕೃಷ್ಣನ್, ಭಾರತ ಕಂಡ ಅಗ್ರಗಣ್ಯ ಶಿಕ್ಷಕರಲ್ಲಿ ಪ್ರಮುಖರಾಗಿದ್ದಾರೆ. 

ತಂದೆ ಸರ್ವಪಲ್ಲಿ ವೀರಸ್ವಾಮಿ, ತಾಯಿ ಸೀತಮ್ಮ. ಇವರು ಜಮೀನ್ದಾರರ ಬಳಿ ದಿನಗೂಲಿ ನೌಕರರಾಗಿ ಸೇವೆಗೈಯುತ್ತಾ ಮಗನ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು. ರಾಧಾಕೃಷ್ಣನ್ ಅವರ ತಂದೆಗೆ ತಮ್ಮ ಮಗನನ್ನು ಪುರೋಹಿತನನ್ನಾಗಿ ಮಾಡುವ ಹಂಬಲವಿತ್ತು. ಬರುವ ದಿನಗೂಲಿಯಲ್ಲಿ ತುಂಬು ಕುಟುಂಬವನ್ನು ಸಾಗಿಸಲು ಕಷ್ಟ ಪಡುವ ಸಂದರ್ಭದಲ್ಲಿ 'ರಾಧಾಕೃಷ್ಣನ್‌' ಅವರು ಓದಬೇಕೆನ್ನುವ ಅಪಾರ ಹಂಬಲ ಹೊಂದಿದ್ದರು.

'ಸ್ಕಾಲರ್‌ಶಿಪ್ ಹಣ'ದಲ್ಲಿಯೇ ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಣವನ್ನು ಮುಗಿಸಿದ ರಾಧಾಕೃಷ್ಣನ್, ಮದ್ರಾಸ್‌ ಕ್ರಿಶ್ಚಿಯನ್ ಕಾಲೇಜ್‌ ನಲ್ಲಿ 'ತತ್ವಜ್ಞಾನ' ವಿಷಯದಲ್ಲಿ 'ಬಿ.ಎ' ಮತ್ತು 'ಎಂ.ಎ. ಪದವಿ'ಗಳನ್ನು ಪಡೆದು ಕೊಂಡರು. 'ಸ್ನಾತಕೋತ್ತರ ಪದವಿ'ಯಲ್ಲಿ ರಾಧಾಕೃಷ್ಣನ್ ಮಂಡಿಸಿದ ಪ್ರಬಂಧ 'ದಿ ಎಥಿಕ್ಸ್ ಆಫ್ ವೇದಾಂತ' ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿತು. ಕೇವಲ 20 ವರ್ಷದ ಬಾಲಕನ ತಲೆಯಲ್ಲಿದ್ದ 'ಹಲವು ಬಗೆಯ ಸಿದ್ಧಾಂತಗಳು', 'ವೇದಾಂತ ವಿಚಾರಗಳು' ಮುಂದೊಂದು ದಿನ ಅವರನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುತ್ತವೆ ಎಂದು ಅವರ ಕಾಲೇಜು ಶಿಕ್ಷಕರು ಆಗಲೇ ಗುರುತಿಸಿದ್ದರು.

ರಾಧಾಕೃಷ್ಣನ್ 1918ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ, ತತ್ವಜ್ಞಾನ ವಿಭಾಗದ ಉಪನ್ಯಾಸಕರಾಗಿ ಆಯ್ಕೆಯಾದರು. ದೇಶ ವಿದೇಶಗಳ ವಿವಿಧ ತತ್ವಜ್ಞಾನ ಪತ್ರಿಕೆಗಳಲ್ಲಿ ತಮ್ಮ ಆಳ ಮತ್ತು ಹರಿತವಾದ ವಿಚಾರಗಳನ್ನು ಹೊಂದಿದ್ದ ಲೇಖನಗಳನ್ನು ಬರೆಯುತ್ತಾ ಸಾಗಿದ ರಾಧಾಕೃಷ್ಣನ್, 'ದಿ ಫಿಲಾಸಫಿ ಆಫ್ ರವೀಂದ್ರನಾಥ್ ಠ್ಯಾಗೋರ್' ಎಂಬ ಮೊದಲ ಪುಸ್ತಕ ಬರೆದರು.  

ಭಾರತೀಯ ಪುಸ್ತಕೋದ್ಯಮದಲ್ಲಿ ಮಿಂಚುತ್ತಾ ಸಾಗಿದ ಇವರು, ಮುಂದೆ 'ಜಿನೀನ್ ಮೆನಿಫೆಸ್ಟೇಷನ್ ಆಫ್ ಇಂಡಿಯನ್ ಸ್ಪಿರಿಟ್' ಮತ್ತು 'ದಿ ರೀಜನ್ ಆಫ್ ರಿಲಿಜಿಯನ್ ಇನ್ ಕಾಂಟೆಂಪರರಿ ಫಿಲಾಸಫಿ' ಎನ್ನುವ ಪುಸ್ತಕಗಳನ್ನು ಸಹ ಬರೆದಿದ್ದಾರೆ. ತಮ್ಮ ಅಪಾರವಾದ ಪಾಂಡಿತ್ಯದಿಂದಾಗಿ ದೇಶ ವಿದೇಶಗಳಲ್ಲಿ ರಾಧಾಕೃಷ್ಣನ್ ಮನೆಮಾತಾಗಿದ್ದರು. ಇವರ ತತ್ವಜ್ಞಾನಕ್ಕೆ ಶರಣಾದ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ 'ಧರ್ಮ ಮತ್ತು ನೀತಿಶಾಸ್ತ್ರ' ಎನ್ನುವ ವಿಷಯದ ಮೇಲೆ ಉಪನ್ಯಾಸ ನೀಡುವಂತೆ ಆಹ್ವಾನಿಸಿತು.

1931ರಲ್ಲಿ ಆಂಧ್ರ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದ ರಾಧಾಕೃಷ್ಣನ್, ಐದು ವರ್ಷಗಳ ಕಾಲ ತಾವೊಬ್ಬ ಉತ್ತಮ ಶಿಕ್ಷಣ ಸುಧಾರಕರೂ ಹೌದು ಎಂಬುದನ್ನು ತಮ್ಮ ಸೇವಾವಧಿಯಲ್ಲಿ ತೋರಿಸಿಕೊಟ್ಟರು. ಇವರ ಅವಧಿಯಲ್ಲಿ ವಿಶ್ವವಿದ್ಯಾಲಯ ಅನೇಕ ಶಿಕ್ಷಣ ಮತ್ತು ಶಿಕ್ಷಣೇತರ ಸುಧಾರಣೆಗಳನ್ನು ಕಂಡಿತು. 1939ರಲ್ಲಿ ಬನಾರಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದರು. ಅಲ್ಲಿಯೂ ತಮ್ಮ ಅನುಭವವನ್ನು ಧಾರೆ ಎರೆಯುವ ಮೂಲಕ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ರಾಧಾಕೃಷ್ಣನ್ ಅವರನ್ನು, 1948 ರಲ್ಲಿ ವಿಶ್ವವಿದ್ಯಾಲಯ ಶಿಕ್ಷಣ ಆಯೋಗದ ಮುಖ್ಯಸ್ಥರನ್ನಾಗಿ ಸರಕಾರ ನೇಮಿಸಿತು. 1949 ರಲ್ಲಿ ಸೋವಿಯತ್ ರಷ್ಯಾಕ್ಕೆ ಭಾರತದ ರಾಯಭಾರಿಯಾಗಿ ನೇಮಕಗೊಂಡ ರಾಧಾಕೃಷ್ಣನ್, ಸ್ಟಾಲಿನ್‌ನಂತಹ ಮೇಧಾವಿಗಳ ಸರಿಸಮನಾಗಿ ನಿಲ್ಲುವ ವ್ಯಕ್ತಿತ್ವವನ್ನು ಬೆಳೆಸಿಕೊಂಡರು.

ಡಾ. ರಾಧಾಕೃಷ್ಣನ್ ಒಬ್ಬ ಭಾರತೀಯ ತತ್ವಜ್ಞಾನಿ ಮತ್ತು ವಿದ್ವಾಂಸ. ಅವರ ಪರಿಣತಿಯ ಕ್ಷೇತ್ರಗಳು ಫಿಲಾಸಫಿ ಮತ್ತು ನೈತಿಕ ವಿಜ್ಞಾನ. ಇವರು ಹಲವರಿಗೆ ಸ್ಪೂರ್ತಿದಾಯಕ ವ್ಯಕ್ತಿಯಾಗಿದ್ದರು.

ವಿಶ್ವದಾದ್ಯಂತದ ಶಿಕ್ಷಕರು, ಮಾರ್ಗದರ್ಶಕರು ಮತ್ತು ಶಿಕ್ಷಕರು ಧನ್ಯವಾದಗಳನ್ನು ಗೌರವಿಸಲು ಒಂದು ದಿನ ಸಾಲದು. ಡಾ.ಎಸ್. ರಾಧಾಕೃಷ್ಣನ್ ಅವರು ತಮ್ಮ ವಿದ್ಯಾರ್ಥಿಗಳಿಂದ ಬಹಳ ಮೆಚ್ಚುಗೆಯನ್ನು ಹೊಂದಿದ್ದರು ಮತ್ತು ಅವರ ಜನ್ಮದಿನವನ್ನು 'ರಾಧಾಕೃಷ್ಣನ್ ಡೇ' ಎಂದು ಅವಲೋಕಿಸಲು ಅವರನ್ನು ಸಂಪರ್ಕಿಸಿದಾಗ, ಆ ದಿನವನ್ನು 'ಶಿಕ್ಷಕರ ದಿನ' ಎಂದು ಪರಿಗಣಿಸಿದರೆ ಅವರಿಗೆ ಹೆಚ್ಚು ಸಂತಸವಾಗುತ್ತದೆ ಎಂದು ಅವರು ಸಲಹೆ ನೀಡಿದರು. ಅಂದಿನಿಂದ, ಸೆಪ್ಟೆಂಬರ್ 5 ಅನ್ನು ಪ್ರತಿವರ್ಷ 'ಶಿಕ್ಷಕರ ದಿನ' ಎಂದು ಆಚರಿಸಲಾಗುತ್ತದೆ.

Trending News