ಕಾಂಗ್ರೆಸ್ ತುರ್ತು ಸಭೆ ಹಿನ್ನೆಲೆ ಸೋನಿಯಾ ನಿವಾಸಕ್ಕೆ ನಾಯಕರ ದೌಡು

ಈ ಸಭೆ ಇಂದು ಬೆಳಿಗ್ಗೆ 9.30 ಕ್ಕೆ 10 ಜನಪಥದಲ್ಲಿ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಆರಂಭವಾಗಿದೆ.  

Last Updated : Nov 21, 2019, 10:29 AM IST
ಕಾಂಗ್ರೆಸ್ ತುರ್ತು ಸಭೆ ಹಿನ್ನೆಲೆ ಸೋನಿಯಾ ನಿವಾಸಕ್ಕೆ ನಾಯಕರ ದೌಡು title=
File Image

ನವದೆಹಲಿ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮತ್ತು ಸಂಸತ್ತಿನ ಚಳಿಗಾಲದ ಅಧಿವೇಶನಕ್ಕಾಗಿ ಇಂದು ಬೆಳಿಗ್ಗೆ 9.30 ಕ್ಕೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (CWC) ತುರ್ತು ಸಭೆ ಕರೆಯಲಾಗಿದೆ. ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ(Sonia Gandhi)ಯವರ ನಿವಾಸವಾದ 10 ಜನಪಥದಲ್ಲಿ ಈ ಸಭೆ ಆರಂಭವಾಗಿದೆ. ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಟ್ವೀಟ್ ಮಾಡಿ ಈ ಮಾಹಿತಿ ನೀಡಿದರು.

ಮಾಧ್ಯಮ ವರದಿಗಳ ಪ್ರಕಾರ, ಸಿಡಬ್ಲ್ಯುಸಿ ಸಭೆಯಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಎನ್‌ಡಿಎ ಸರ್ಕಾರವನ್ನು ಕಟ್ಟಿ ಹಾಕುವ ಬಗ್ಗೆ ಕಾರ್ಯತಂತ್ರ ರೂಪಿಸಲಾಗುವುದು. ಕೆ.ಸಿ.ವೇಣುಗೋಪಾಲ್, ಅಧೀರ್ ರಂಜನ್ ಚೌಧರಿ, ಅಂಬಿಕಾ ಸೋನಿ, ಅಹ್ಮದ್ ಪಟೇಲ್, ಎ.ಕೆ. ಆಂಟನಿ ಮತ್ತು ಇತರ ಕಾಂಗ್ರೆಸ್ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳಲು ಸೋನಿಯಾ ಗಾಂಧಿ ನಿವಾಸಕ್ಕೆ ದೌಡಾಯಿಸಿದ್ದಾರೆ.

ಈ ಸಭೆಯಲ್ಲಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಬಗ್ಗೆಯೂ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿದೆ. ವಾಸ್ತವವಾಗಿ, ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ನಂತರ, ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ರಚಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ.

ರಾಜಕೀಯ ವಿಶ್ಲೇಷಕರ ಪ್ರಕಾರ, ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಶಿವಸೇನೆ ಮತ್ತು ಎನ್‌ಸಿಪಿ ಜೊತೆಗಿನ ಮೈತ್ರಿಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್ ಮುಖಂಡ ಪೃಥ್ವಿರಾಜ್ ಚೌಹಾಣ್ ಕೂಡ ಶೀಘ್ರದಲ್ಲೇ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಾಗಲಿದೆ ಎಂದು ಆಶಿಸುತ್ತಿರುವುದಾಗಿ ತಿಳಿಸಿದರು. ಏತನ್ಮಧ್ಯೆ, ನವೆಂಬರ್ 21ರಂದು ಮಧ್ಯಾಹ್ನದ ಹೊತ್ತಿಗೆ ಸರ್ಕಾರ ರಚನೆ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ ಎಂದಿದ್ದಾರೆ.
 

Trending News