ನವದೆಹಲಿ: ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಮಸೂದೆ ರಾಜ್ಯಸಭೆಯಲ್ಲಿ ಮಂಗಳವಾರ ಮಂಡನೆಯಾಗಲಿದೆ. ಜನವರಿ 8 ರಂದು ಲೋಕಸಭೆಯಿಂದ ಅಂಗೀಕಾರವಾದ ಈ ಮಸೂದೆಗೆ ಅಸ್ಸಾಂ ಹಾಗೂ ಇತರ ಈಶಾನ್ಯ ರಾಜ್ಯಗಳ ದೊಡ್ಡ ಸಂಖ್ಯೆಯ ಜನರು ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಲೋಕಸಭೆಯಲ್ಲಿ 2016 ರ ನಾಗರೀಕ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ವಿರೋಧ ವ್ಯಕ್ತಪಡಿಸಿದ್ದ ವಿವಿಧ ನಾಗರೀಕ ಸಂಘಟನೆಗಳು ತೀವ್ರ ಹೋರಾಟ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ರಾಜ್ಯಸಭೆಯಲ್ಲಿ ಪೌರತ್ವ (ತಿದ್ದುಪಡಿ) ಮಸೂದೆ ಮಂಡನೆಯಾಗುವ ಮೊದಲು ಮುನ್ನೆಚ್ಚರಿಕೆ ಕ್ರಮವಾಗಿ ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಸೆಕ್ಷನ್ 144ನ್ನು ಜಾರಿಗೊಳಿಸಲಾಗಿದೆ.
ನಾಗರಿಕತ್ವ ಮಸೂದೆಯ ವಿರುದ್ಧ ವಿವಿಧ ನಾಗರೀಕ ಸಂಘಟನೆಗಳು 'ಬ್ಲಾಕ್ ಡೇ' ಪ್ರತಿಭಟನೆ ಕೈಗೊಳ್ಳಲಿದ್ದು, ಮಿಜೋರಾಮ್ನಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ.
ಏತನ್ಮಧ್ಯೆ, ಎರಡೂ ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳಾದ - ಅರುಣಾಚಲ ಪ್ರದೇಶದ ಪೆಮಾ ಖಾಂಡು ಮತ್ತು ಮಣಿಪುರದ ಎನ್.ಬಿರೇನ್ ಸಿಂಗ್ ಅವರು ಬಿಲ್ಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದು, ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಅಂಗೀಕರಿಸದೆ ಇರುವಂತೆ ಗೃಹ ಸಚಿವ ರಾಜ್ನಾಥ್ ಸಿಂಗ್ಗೆ ಒತ್ತಾಯಿಸಿದ್ದಾರೆ.
ಅದಾಗ್ಯೂ, ಪೌರತ್ವ ತಿದ್ದುಪಡಿ ಮಸೂದೆಯಿಂದ ಈಶಾನ್ಯ ನಾಗರಿಕರಿಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಅಸ್ಸಾಂ ಆರೋಗ್ಯ ಸಚಿವ ಹಿಮಾಟಾ ಬಿಸ್ವಾ ಶರ್ಮಾ ವಿಧಾನಸಭಾ ಕ್ಷೇತ್ರದ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ ಅವರು ಈ ಹೇಳಿಕೆ ನೀಡಿದರು.
ಏನಿದು ತಿದ್ದುಪಡಿ ಮಸೂದೆ?
1971ರ ನಂತರ ರಾಜ್ಯ ಪ್ರವೇಶಿಸಿದ ಯಾವುದೇ ವಿದೇಶೀ ಅಕ್ರಮ ವಲಸಿಗರಾಗಲಿ ಜಾತ್ಯತೀತವಾಗಿ ಅವರನ್ನು ಗಡೀಪಾರು ಮಾಡಬೇಕು ಎಂದು 1985ರ ಅಸ್ಸಾಂ ಒಪ್ಪಂದ ಹೇಳುತ್ತದೆ. ಆದರೆ 1955ರ ಭಾರತೀಯ ಪೌರತ್ವ ಕಾಯ್ದೆಗೆ ಈಗ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದ್ದು, ಆಷ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಿಂದ ವಲಸೆ ಬಂದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಹಾಗೂ ಕ್ರೈಸ್ತರಿಗೆ ಭಾರತೀಯ ನಾಗರಿಕತ್ವ ದೊರಕುತ್ತದೆ. ಯಾವುದೇ ದಾಖಲೆ ಹೊಂದಿರದೇ ಇದ್ದರೂ 6 ವರ್ಷ ಭಾರತದಲ್ಲಿ ನೆಲೆಸಿದ್ದರೆ ಸಾಕು- ಇಂಥವರಿಗೆ ಭಾರತೀಯ ನಾಗರಿಕತ್ವ ಲಭಿಸುವ ಅಂಶ ಇದರಲ್ಲಿದೆ.
ಇದು 2014ರ ಬಿಜೆಪಿ ಪ್ರಣಾಳಿಕೆಯ ಪ್ರಮುಖ ಅಂಶವಾಗಿತ್ತು. ಆದರೆ ಕಾಂಗ್ರೆಸ್, ಸಿಪಿಎಂ, ತೃಣಮೂಲ ಕಾಂಗ್ರೆಸ್ ಹಾಗೂ ಇತರ ಕೆಲವು ಪಕ್ಷಗಳು ಈ ವಿಧೇಯಕ ವಿರೋಧಿಸಿವೆ. ವಿಚಿತ್ರವೆಂದರೆ ಎನ್‌ಡಿಎ ಪಾಲುದಾರರಾದ ಶಿವಸೇನಾ ಹಾಗೂ ಜೆಡಿಯು ಕೂಡ ಈ ವಿಧೇಯಕ ವಿರೋಧಿಸಿವೆ.