ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಹಾಗೂ ಅಲಿಗಡ್ ಮುಸ್ಲಿಂ ಯುನಿವರ್ಸಿಟಿಯಲ್ಲಿ ನಡೆದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಕೈಗೊಂಡ ಕಾರ್ಯಾಚರಣೆ ಬಳಿಕ, ಇದೀಗ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಡ್ರಾ ಇಂಡಿಯಾ ಗೇಟ್ ಬಳಿ ವಿದ್ಯಾರ್ಥಿಗಳನ್ನು ಬೆಂಬಲಿಸಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ. ಪ್ರಿಯಾಂಕಾ ಅವರ ಈ ಧರಣಿ ಸತ್ಯಾಗ್ರಹದಲ್ಲಿ ಕಾಂಗ್ರೆಸ್ ಪಕ್ಷದ ವರಿಷ್ಠ ಮುಖಂಡರಾಗಿರುವ ಗುಲಾಂ ನಬಿ ಅಜಾದ್, ಎ.ಕೆ.ಆಂಟನಿ, ಅಹ್ಮದ್ ಪಟೇಲ್, ಕೆ.ಸಿ ವೇಣುಗೋಪಾಲ್ ಹಾಗೂ ಪಿ.ಎಲ್. ಪುನಿಯಾ ಸೇರಿದಂತೆ ಹಲವು ಮುಖಂಡರು ಅವರಿಗೆ ಸಾಥ್ ನೀಡಿದ್ದಾರೆ.
ಪ್ರತಿಭಟನೆಯ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಸಚಿವಾಲಯ, ಉದ್ಯೋಗ ಭವನ, ಪಟೇಲ್ ಚೌಕ, ಜಾಮೀಯಾ ಯುನಿವರ್ಸಿಟಿ ಮೆಟ್ರೋ ಸ್ಟೇಷನ್ ಗಳನ್ನು ಡಿಎಂಆರ್ಸಿ ಬಂದ್ ಮಾಡಿದೆ.
ಘಟನೆಯ ಕುರಿತು ಮಾಹಿತಿ ನೀಡಿದ್ದ ದೆಹಲಿ ಸೆಂಟ್ರಲ್ ಪೊಲೀಸ್ ಉಪಾಯುಕ್ತ ಮನದೀಪ್ ಸಿಂಗ್ ರಂಧವಾ, ಶನಿವಾರ ಜಾಮೀಯಾ ಮಿಲಿಯಾ ಇಸ್ಲಾಮಿಯಾ ಯೂನಿವರ್ಸಿಟಿಯಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಹಾಗೂ ಪೊಲೀಸರ ಮಧ್ಯೆ ನಡೆದ ಘರ್ಷಣೆಯಲ್ಲಿ 30ಕ್ಕೂ ಅಧಿಕ ಪೊಲೀಸರು ಗಾಯಗೊಂಡಿದ್ದಾರೆ ಎಂದಿದ್ದಾರೆ. ಈ ಸಂದರ್ಭದಲ್ಲಿ ಸುಮಾರು 100 ಖಾಸಗಿ ವಾಹನಗಳಿಗೆ ಹಾನಿ ಉಂಟಾಗಿದ್ದು, 39 ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಸದ್ಯ ದೆಹಲಿ ಪೊಲೀಸರ ಕ್ರೈಂ ವಿಭಾಗ ಈ ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ಮನದೀಪ್ ಸಿಂಗ್ ಮಾಹಿತಿ ನೀಡಿದ್ದಾರೆ.