ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಕ್ಟೋಬರ್ 11 ರಂದು ಭಾರತಕ್ಕೆ ಭೇಟಿ ನೀಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅನೌಪಚಾರಿಕ ಶೃಂಗಸಭೆ ನಡೆಸಲಿದ್ದಾರೆ.
ಚೆನ್ನೈ ಸಮೀಪದಲ್ಲಿರುವ ಮಾಮಲ್ಲಾಪುರಂನಲ್ಲಿ ಅಕ್ಟೋಬರ್ 11 ಮತ್ತು 12 ರಂದು ಅನೌಪಚಾರಿಕ ಶೃಂಗಸಭೆ ನಡೆಯಲಿದ್ದು, ಉಭಯ ನಾಯಕರಿಗೆ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಪ್ರಾಮುಖ್ಯತೆಯ ವಿಷಯಗಳ ಕುರಿತು ತಮ್ಮ ಚರ್ಚೆಗಳನ್ನು ಮುಂದುವರೆಸಲು ಮತ್ತು ಭಾರತ-ಚೀನಾ ಕ್ಲೋಸರ್ ಡೆವಲಪ್‌ಮೆಂಟ್ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವನ್ನು ಒದಗಿಸಲಿದೆ ಎಂದು ವಿದೇಶಾಂಗ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ಸಿ ನಡುವೆ ನಡೆಯುತ್ತಿರುವ ಎರಡನೇ ಔಪಚಾರಿಕ ಶೃಂಗ ಸಭೆ ಇದಾಗಿದೆ. 2018ರ ಏಪ್ರಿಲ್ 27-28ರಂದು ಚೀನಾದ ವುಹಾನ್ ನಲ್ಲಿ ಉಭಯ ನಾಯಕರ ನಡುವೆ ಮೊದಲ ಮಾತುಕತೆ ನಡೆದಿತ್ತು. ಈ ಸಂದರ್ಭದಲ್ಲಿ 2017ರಲ್ಲಿ ಡೋಕ್ಲಾಮ್ ವಿಚಾರವಾಗಿ ಉಭಯ ದೇಶಗಳ ಸೈನಿಕರ ನಡುವೆ ನಡೆದಿದ್ದ ಸಂಘರ್ಷ ಸೇರಿದಂತೆ ಇನ್ನಿತರ ವಿಚಾರಗಳ ಕುರಿತು ಚರ್ಚಿಸಲಾಗಿತ್ತು.