ನಾಳೆ ಚಂದ್ರನ ಅಂಗಳಕ್ಕಿಳಿಯಲಿದೆ ಚಂದ್ರಯಾನ-3: 17 ನಿಮಿಷಗಳ ಭಯಾತಂಕ

Written by - Girish Linganna | Edited by - Manjunath N | Last Updated : Aug 22, 2023, 07:38 PM IST
  • ವಿಕ್ರಮ್ ಲ್ಯಾಂಡರ್ ಈಗ ತನ್ನ ಲ್ಯಾಂಡಿಂಗ್ ಬಿಂದುವಿನಿಂದ ಕೇವಲ 25 ಕಿಲೋಮೀಟರ್ ಅಷ್ಟೇ ದೂರದಲ್ಲಿದೆ.
  • ಈ ಎತ್ತರದಿಂದ ಲ್ಯಾಂಡರ್ ಕೆಳಗಿಳಿಯಲು ಪ್ರಯತ್ನ ನಡೆಸುವಾಗ, ಅದರ ವೇಗ ಪ್ರತಿ ಸೆಕೆಂಡಿಗೆ 1.68 ಕಿಲೋಮೀಟರ್,
  • ಅಂದರೆ ಪ್ರತಿ ಗಂಟೆಗೆ ಸುಮಾರು 6,048 ಕಿಲೋಮೀಟರ್ ಆಗಿರಲಿದೆ.
ನಾಳೆ ಚಂದ್ರನ ಅಂಗಳಕ್ಕಿಳಿಯಲಿದೆ ಚಂದ್ರಯಾನ-3: 17 ನಿಮಿಷಗಳ ಭಯಾತಂಕ title=

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜುಲೈ 14ರಂದು ಉಡಾವಣೆಗೊಂಡ ಚಂದ್ರಯಾನ-3, ಆಗಸ್ಟ್ 5ರಂದು ಚಂದ್ರನ ಕಕ್ಷೆಗೆ ಪ್ರವೇಶಿಸಿತು. ಆ ಬಳಿಕ ಸರಣಿ ಚಲನೆಗಳ ಮೂಲಕ ಅದರ ಕಕ್ಷೆಯನ್ನು ಇಳಿಸುತ್ತಾ, ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಹಗುರವಾಯ ಇಳಿಯಲು ಸೂಕ್ತವಾದ ಸ್ಥಾನಕ್ಕೆ ಅಳವಡಿಸಲಾಗಿದೆ. ಇಡಿಯ ಜಗತ್ತೇ ಉಸಿರು ಬಿಗಿಹಿಡಿದು ನೋಡುತ್ತಿರುವಂತೆ, ಬಾಹ್ಯಾಕಾಶ ನೌಕೆ ನಿಧಾನವಾಗಿ ಚಂದ್ರನ ಅನ್ವೇಷಣೆ ನಡೆಸಲು ಮುಂದುವರಿಯುತ್ತಾ, ಉದ್ದೇಶಿತ ರೀತಿಯಲ್ಲೇ ನಾಳೆ (ಆಗಸ್ಟ್ 23) ಚಂದ್ರನ ಮೇಲೆ ಇಳಿಯಲು ಸಿದ್ಧವಾಗುತ್ತಿದೆ.

ಆದರೆ ಚಂದ್ರಯಾನ-3ರ ಪ್ರಯಾಣದಲ್ಲೇ ಅತ್ಯಂತ ಮಹತ್ವದ, ರೋಮಾಂಚಕಾರಿಯಾದ ಕ್ಷಣವೆಂದರೆ '17 ನಿಮಿಷಗಳ ಭಯ' ಎಂದು ಕರೆಯಲ್ಪಡುವ ಅದರ ಪ್ರಯಾಣದ ಕೊನೆಯ ಹಂತ. ಆದರೆ ಈ 17 ನಿಮಿಷಗಳ ಅವಧಿಯಲ್ಲಿ ನಿಜಕ್ಕೂ ಏನು ಘಟಿಸುತ್ತದೆ?

ಆಗಸ್ಟ್ 17ರಂದು ಪ್ರೊಪಲ್ಷನ್ ಮಾಡ್ಯುಲ್‌ನಿಂದ ಬೇರ್ಪಟ್ಟು, ಎರಡು ಪ್ರತ್ಯೇಕ ಡಿಬೂಸ್ಟಿಂಗ್ ಪ್ರಕ್ರಿಯೆಗಳಿಗೆ (ಎರಡನೆಯ ಡಿಬೂಸ್ಟಿಂಗ್ ಆಗಸ್ಟ್ 20, ಶನಿವಾರ ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆಗೆ ನೆರವೇರಿತು) ಒಳಗಾದ, ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್‌ಗಳನ್ನು ಒಳಗೊಂಡ ಲ್ಯಾಂಡರ್ ಮಾಡ್ಯುಲ್ ಕಕ್ಷೆಯನ್ನು ಯಶಸ್ವಿಯಾಗಿ 113 ಕಿಲೋಮೀಟರ್ × 157 ಕಿಲೋಮೀಟರ್ ಕಕ್ಷೆಗೆ ಇಳಿಸಲಾಯಿತು. ಬಳಿಕ ಅದು ಚಂದ್ರನಿಗೆ ಅತ್ಯಂತ ಸನಿಹದ ಕಕ್ಷೆಗೆ ಚಲಿಸಿತು.

ವಿಕ್ರಮ್ ಲ್ಯಾಂಡರ್ ಈಗ ತನ್ನ ಲ್ಯಾಂಡಿಂಗ್ ಬಿಂದುವಿನಿಂದ ಕೇವಲ 25 ಕಿಲೋಮೀಟರ್ ಅಷ್ಟೇ ದೂರದಲ್ಲಿದೆ. ಈ ಎತ್ತರದಿಂದ ಲ್ಯಾಂಡರ್ ಕೆಳಗಿಳಿಯಲು ಪ್ರಯತ್ನ ನಡೆಸುವಾಗ, ಅದರ ವೇಗ ಪ್ರತಿ ಸೆಕೆಂಡಿಗೆ 1.68 ಕಿಲೋಮೀಟರ್, ಅಂದರೆ ಪ್ರತಿ ಗಂಟೆಗೆ ಸುಮಾರು 6,048 ಕಿಲೋಮೀಟರ್ ಆಗಿರಲಿದೆ.

ಈಗ ಸಮತಲ ಸ್ಥಿತಿಯಲ್ಲಿ ಹಾರಾಟ ನಡೆಸುತ್ತಿರುವ ಲ್ಯಾಂಡರ್, ಲ್ಯಾಂಡಿಂಗ್ ನಡೆಸುವ ಸಂದರ್ಭದಲ್ಲಿ ಕೊಂಚ ಲಂಬವಾಗಿರಬೇಕು. ಈ ಇಳಿಯುವ ಪ್ರಕ್ರಿಯೆಯಲ್ಲಿ, ವಿಕ್ರಮ್ ತನ್ನ ಇಂಜಿನ್‌ಗಳನ್ನು ಉರಿಸುವ ಮೂಲಕ, ನಿಧಾನವಾಗಿ ತನ್ನ ವೇಗವನ್ನು ಕಡಿಮೆಗೊಳಿಸುತ್ತದೆ. ಆದರೆ, ಈ ಸಮಯದಲ್ಲಿ, ಕೆಲವು ನಿಖರ ವಿಶ್ಲೇಷಣೆಗಳನ್ನು ನಡೆಸಿ, ಇಸ್ರೋ ಈ ಸವಾಲುಗಳನ್ನು ಎದುರಿಸಲು ಇನ್ನಷ್ಟು ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಿದೆ. ಇದರಲ್ಲಿ ಇಸ್ರೋ ಬಿಡುಗಡೆಗೊಳಿಸಿದ, ವಿಕ್ರಮ್ ಕ್ಯಾಮರಾದಿಂದ ತೆಗೆದ ಛಾಯಾಚಿತ್ರಗಳೂ ಸೇರಿವೆ. ಇತರ ಸೆನ್ಸರ್‌ಗಳು ಸಹ ಲ್ಯಾಂಡರ್‌ನ ಇಳಿಯುವ ಪ್ರದೇಶದ ಮಾಪನಾಂಕ ನಿರ್ಣಯಿಸಲು ನೆರವಾಗುತ್ತವೆ.

ಈಗ ಬಾಹ್ಯಾಕಾಶ ನೌಕೆಯ ವೇಗವನ್ನು ನಿಯಂತ್ರಿಸಿ, ಅದನ್ನು ಶೂನ್ಯ ವೇಗಕ್ಕೆ ತರಲಾಗುತ್ತದೆ. ಇದು 175 ಸೆಕೆಂಡುಗಳಲ್ಲಿ, ಅಥವಾ ಅಂದಾಜು ಮೂರು ನಿಮಿಷಗಳ ಅವಧಿಯಲ್ಲಿ ನಡೆಸಲಾಗುತ್ತದೆ. ಈ ಹಂತದಲ್ಲಿ ವಿಕ್ರಮ್ ಲ್ಯಾಂಡರ್ ಸಂಪೂರ್ಣವಾಗಿ ಲಂಬವಾಗಿದ್ದು, ಚಂದ್ರನ ಮೇಲ್ಮೈಯಿಂದ ಎತ್ತರದಲ್ಲಿ ಸ್ತಬ್ದ ಹಾರಾಟದಲ್ಲಿದ್ದು (ಹೋವರಿಂಗ್), ಲ್ಯಾಂಡಿಂಗ್ ಪ್ರದೇಶದ ಸರ್ವೇ ನಡೆಸುತ್ತಿರುತ್ತದೆ. ಈ ಎತ್ತರ 800ರಿಂದ 1,300 ಮೀಟರ್‌ಗಳಷ್ಟಿರುತ್ತದೆ. ಸೆನ್ಸರ್‌ಗಳು ಈ ಹಂತದಲ್ಲಿ ಮರಳಿ ಚಾಲನೆಗೊಂಡು, ಅದರ ವೇಗ ಮತ್ತು ಎತ್ತರವನ್ನು ರಿಕ್ಯಾಲಿಬರೇಟ್ ನಡೆಸುತ್ತವೆ.

ಇದರ ಮುಂದಿನ ಹಂತದಲ್ಲಿ, ವಿಕ್ರಮ್ ಲ್ಯಾಂಡರ್ ಉನ್ನಷ್ಟು ಕೆಳಗಿಳಿದು, 150 ಮೀಟರ್ ಎತ್ತರಕ್ಕೆ ತರಲಾಗುತ್ತದೆ. ಹಜಾರ್ಡ್ ಡಿಟೆಕ್ಷನ್ ಕ್ಯಾಮರಾವನ್ನು ಕಾರ್ಯಾಚರಣೆಗಿಳಿಸಿ, ಛಾಯಾಚಿತ್ರಗಳನ್ನು ತೆಗೆದು, ವಿಕ್ರಮ್ ಇಳಿಯಲು ಸೂಕ್ತವಾದ ಮೇಲ್ಮೈ ಪ್ರದೇಶವನ್ನು ಹುಡುಕಲಾಗುತ್ತದೆ. ಸರಿಯಾದ ಸ್ಥಳ ಸಿಕ್ಕರೆ, ವಿಕ್ರಮ್ ಇನ್ನೂ 73 ಸೆಕೆಂಡುಗಳ ಅವಧಿಯಲ್ಲಿ ಚಂದ್ರನ ಮೇಲ್ಮೈಯಲ್ಲಿ ಹಗುರವಾಗಿ ಇಳಿಯಲಿದೆ. ಲ್ಯಾಂಡರ್‌ನ ಕಾಲುಗಳನ್ನು ಅದು ಪ್ರತಿ ಸೆಕೆಂಡಿಗೆ ಮೂರು ಮೀಟರ್‌ಗಳಷ್ಟು (ಅಂದಾಜು ಪ್ರತಿ ಗಂಟೆಗೆ 10.8 ಕಿಲೋಮೀಟರ್) ಪ್ರಮಾಣದ ಒತ್ತಡವನ್ನು ತಡೆದುಕೊಳ್ಳುವ ರೀತಿಯಲ್ಲಿ ನಿರ್ಮಿಸಲಾಗಿದೆ. ಒಂದು ವೇಳೆ ಅಲ್ಲಿ ಇಳಿಯುವ ಪರಿಸ್ಥಿತಿ ಇಲ್ಲವಾದರೆ, ಲ್ಯಾಂಡರ್ ಇನ್ನೂ 150 ಮೀಟರ್ ಚಲಿಸಿ, ಮತ್ತೆ ಹಜಾರ್ಡ್ ಕ್ಯಾಮರಾ ಮೂಲಕ ಇಳಿಯಲು ಸೂಕ್ತವಾದ ಜಾಗವನ್ನು ಹುಡುಕಲಿದೆ. ವಿಕ್ರಮ್ ಲ್ಯಾಂಡರ್‌ನ ಕಾಲುಗಳಲ್ಲಿರುವ ಸೆನ್ಸರ್‌ಗಳು ಅದು ಚಂದ್ರನ ಮೇಲೆ ಇಳಿದುದನ್ನು ಗ್ರಹಿಸಿದ ತಕ್ಷಣವೇ ಇಂಜಿನ್‌ಗಳು ಸ್ಥಗಿತಗೊಳ್ಳುತ್ತವೆ. ಇದೊಂದು ಸಂಪೂರ್ಣ ಸ್ವಯಂಚಾಲಿತ ಪ್ರಕ್ರಿಯೆಯಾಗಿದ್ದು, ಇಲ್ಲಿಗೆ 17 ನಿಮಿಷಗಳ ಅನಿಶ್ಚಿತತೆ ಮತ್ತು ಕಾಯುವಿಕೆ ಕೊನೆಯಾಗುತ್ತದೆ.

ಲ್ಯಾಂಡಿಂಗ್ ಪೂರ್ಣಗೊಂಡ ಬಳಿಕ, ವಿಕ್ರಮ್ ಸ್ವಿಚ್ ಆನ್ ಆಗಿ, ಇನ್ನೂ ಬಾಹ್ಯಾಕಾಶದಲ್ಲಿ ಮಾಹಿತಿ ಕಲೆಹಾಕುತ್ತಿರುವ ಚಂದ್ರಯಾನ-2ರ ಆರ್ಬಿಟರ್ ಜೊತೆ ಸಂವಹನ ನಡೆಸಲಿದೆ. ರಿಗೋಲಿತ್ ಎಂದು ಕರೆಯಲಾಗುವ ಚಂದ್ರನ ಧೂಳು ಮತ್ತೆ ಕೆಳಗಿಳಿಯುವ ತನಕ ಕಾಯ್ದು, ಸೋಲಾರ್ ಬ್ಯಾಟರಿಗಳು ಚಾರ್ಜ್ ಹೊಂದಿದ ಬಳಿಕ ವಿಕ್ರಮ್ ಲ್ಯಾಂಡರ್‌ನ ರಾಂಪ್ ತೆರೆಯುತ್ತದೆ. ಬಳಿಕ ಪ್ರಗ್ಯಾನ್ ರೋವರ್ ವಿಕ್ರಮ್‌ನಿಂದ ಹೊರ ಚಲಿಸಿ, ಲ್ಯಾಂಡರ್‌ನ ಛಾಯಾಚಿತ್ರಗಳನ್ನು ತೆರೆಯುತ್ತದೆ. ಅದು ಈ ಛಾಯಾಚಿತ್ರಗಳನ್ನು ಲ್ಯಾಂಡರ್‌ಗೆ ಕಳುಹಿಸಿ, ಲ್ಯಾಂಡರ್ ಆರ್ಬಿಟರ್ ಮುಖಾಂತರ ಅವುಗಳನ್ನು ಭಾರತಕ್ಕೆ ಕಳುಹಿಸುತ್ತದೆ.

ಈಗ ಈ ವಿಶೇಷ ವೈಜ್ಞಾನಿಕ ಪ್ರಯೋಗ ನಡೆಸಲು ವೇದಿಕೆ ಸಿದ್ಧಗೊಂಡಿದೆ. ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್‌ಗಳು ಸೌರಶಕ್ತಿಯನ್ನು ಬಳಸಿ ಕಾರ್ಯಾಚರಿಸುತ್ತವೆ. ಅವುಗಳು ಭೂಮಿಯ 14 ದಿನಗಳಿಗೆ ಸಮಾನವಾದ, ಒಂದು ಲೂನಾರ್ ದಿನ ಕಾರ್ಯಾಚರಣೆ ನಡೆಸುವಂತೆ ಪ್ರೋಗ್ರಾಮ್ ಮಾಡಲಾಗಿದೆ.

ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

 

Trending News