ಕಾವೇರಿ ವಿವಾದ : ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್ ಬೆಂಬಲ ಕೋರಿದ ಎಐಎಡಿಎಂಕೆ

ಎಐಎಡಿಎಂಕೆ ಪಕ್ಷ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್ ಬೆಂಬಲ ಕೋರಿದೆ. 

Last Updated : Apr 2, 2018, 01:42 PM IST
ಕಾವೇರಿ ವಿವಾದ : ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್ ಬೆಂಬಲ ಕೋರಿದ ಎಐಎಡಿಎಂಕೆ title=
Pic : ANI

ನವದೆಹಲಿ: ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಸಂಬಂಧಿಸಿದಂತೆ ತಮಿಳುನಾಡಿನ ಎಐಎಡಿಎಂಕೆ ಪಕ್ಷ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್ ಬೆಂಬಲ ಕೋರಿದೆ. 

"ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವಿಶ್ವಾಸ ನಿರ್ಣಯ ಮಂಡನೆಗೆ ಬೆಂಬಲ ವ್ಯಕ್ತಪಡಿಸಿ ಹೇಳಿಕೆ ನೀಡಲಿ. ಅವರು ಡಿಎಂಕೆ ಪಕ್ಷದೊಂದಿಗೆ ಮೈತ್ರಿ ಹೊಂದಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷವೂ ಬೆಂಬಲಿಸಿದರೆ ಮಾತ್ರ ನಾವು ಅವಿಶ್ವಾಸ ನಿರ್ಣಯ ಮಂಡಿಸಲು ಅಗತ್ಯವಾದ ಸಂಕ್ಯೆಯನ್ನು ಪಡೆಯಲು ಸಾಧ್ಯವಾಗುತ್ತದೆ" ಎಂದು ಎಐಎಡಿಎಂಕೆ ಮುಖಂಡ ಎಂ.ತಂಬಿದುರೈ ಮಾಧ್ಯಮಕ್ಕೆ ತಿಳಿಸಿದರು.

ಎಐಡಿಎಂಕೆ ರಾಜ್ಯಸಭಾ ಸದಸ್ಯ ರಾಜೀನಾಮೆ
ಕಾವೇರಿ ನಿರ್ವಹಣಾ ಮಂಡಳಿ ರಚನೆ ಸಂಬಂಧ ಕೇಂದ್ರ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಎಐಡಿಎಂಕೆ ರಾಜ್ಯಸಭಾ ಸದಸ್ಯ ಮತ್ತುಕರಪ್ಪನ್ ತಮ್ಮ  ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಆದರೆ, ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ.

ಈ ಮಧ್ಯೆ, ಎಐಎಡಿಎಂಕೆ ಸಂಸದರು ಸಂಸತ್ತಿನಲ್ಲಿ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದು, ಲೋಕಸಭೆ ಮತ್ತು ರಾಜ್ಯಸಭಾ ಕಲಾಪಗಳನ್ನು ನಾಳೆ ಮಧ್ಯಾಹ್ನ 12ಗಂಟೆವರೆಗೆ ಮುಂದೂಡಲಾಗಿದೆ.

ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ಈಗಾಗಲೇ ಎಐಎಡಿಎಂಕೆ ಏಪ್ರಿಲ್ 3 ರಂದು ಧರಣಿ ಉಪವಾಸ ಮಾಡುವುದಾಗಿ ತಿಳಿಸಿದೆ. ಅಷ್ಟೇ ಅಲ್ಲದೆ, ಏಪ್ರಿಲ್ 5 ರಂದು ತಮಿಳುನಾಡು ಬಂದ್'ಗೆ ಡಿಎಂಕೆ ಕರೆ ನೀಡಿದೆ. ಜೊತೆಗೆ ಈಗಾಗಲೇ ತಮಿಳುನಾಡಿನಾದ್ಯಂತ ಡಿಎಂಕೆ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದು, ಕೊಯಿಮತ್ತೂರಿನಲ್ಲಿ ಡಿಎಂಕೆ ಪಕ್ಷದ ಇಬ್ಬರು ಕಾರ್ಯಕರ್ತರು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅವರನ್ನು ವಶಕ್ಕೆ ಪಡೆದು ರಕ್ಷಣೆ ಮಾಡಿದ್ದಾರೆ. ಹೀಗಾಗಿ ನಾಳೆ ಕೂಡ ತಮಿಳುನಾಡಿನಲ್ಲಿ ಕಾವೇರಿಗಾಗಿ ಪ್ರತಿಭಟನೆಗಳು ಜೋರಾಗಲಿವೆ.

ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ 6 ವಾರದೊಳಗೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಫೆ.16ರಂದು ಸುಪ್ರಿಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶಿಸಿತ್ತು. ಆದರೆ, ಆದರೆ ಇದುವರೆಗೂ ಕೇಂದ್ರ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಸಂಬಂಧ ತಮಿಳುನಾಡು ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ಶನಿವಾರ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ. 

Trending News