ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರಥ ಯಾತ್ರೆ ನಡೆಸಲು ಅನುಮತಿ ನೀಡಿ ಕೋಲ್ಕತಾ ಹೈಕೋರ್ಟ್ ಗುರುವಾರ ತೀರ್ಪು ಪ್ರಕಟಿಸಿದೆ. ಇದರಿಂದಾಗಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ.
ಬಿಜೆಪಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ ರಥಯಾತ್ರೆಗೆ ಅನುಮತಿ ನೀಡಿದ್ದು, ಬಿಜೆಪಿ ರಥಯಾತ್ರೆಗೆ ಅನುಮತಿ ನಿರಾಕರಿಸಿರುವ ಪಶ್ಚಿಮ ಬಂಗಾಳ ಸರ್ಕಾರದ ನಿರ್ಧಾರವನ್ನು ತಳ್ಳಿ ಹಾಕಿದ ಹೈಕೋರ್ಟ್ ರಥಯಾತ್ರೆ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ತಿಳಿಸಿದೆ. ರಥಯಾತ್ರೆ ವೇಳೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾದರೆ ಬಿಜೆಪಿ ಕೂಡ ಅದಕ್ಕೆ ಹೊಣೆ ಎಂದು ಕೋರ್ಟ್ ಹೇಳಿದೆ.
ಯಾತ್ರೆ ಸಾಗುವ ಮಾರ್ಗದ ಕುರಿತು ಆಯಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕನಿಷ್ಠ 12 ಗಂಟೆ ಮೊದಲೇ ಮಾಹಿತಿ ನೀಡಬೇಕು ಎಂದು ತಿಳಿಸಿದೆ.
ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆ ಪಶ್ಚಿಮ ಬಂಗಾಳದಲ್ಲಿ ಕಮಲ ಪಾಳೆಯವನ್ನ ಗಟ್ಟಿಗೊಳಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಥಯಾತ್ರೆ ಹಮ್ಮಿಕೊಂಡಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ 'ಪ್ರಜಾಪ್ರಭುತ್ವ ರಕ್ಷಿಸಿ' ಎಂಬ ಬಿಜೆಪಿ ರ‍್ಯಾಲಿಗೆ ಚಾಲನೆ ನೀಡಲಿದ್ದಾರೆ. ಪಶ್ಚಿಮ ಬಂಗಾಳದ 42 ಲೋಕಸಭೆ ಕ್ಷೇತ್ರಗಳನ್ನು ಒಳಗೊಂಡಂತೆ ಮೂರು ರಥಯಾತ್ರೆಗಳನ್ನು ನಡೆಸಲು ಬಿಜೆಪಿ ಮುಂದಾಗಿದೆ.